ಸೋಮವಾರ, ಆಗಸ್ಟ್ 10, 2020
26 °C

ಶೀಘ್ರ ಹೊಸ ಚಿತ್ರದಲ್ಲಿ ರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೀಘ್ರ ಹೊಸ ಚಿತ್ರದಲ್ಲಿ ರಾಣಿ

‘ಹಿಚ್ಕಿ’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿದ್ದರಿಂದ ಹಾಗೂ ಪ್ರೇಕ್ಷಕರಿಂದಲೂ ಹೆಚ್ಚು ಮೆಚ್ಚುಗೆ ಗಳಿಸಿದ್ದರಿಂದ ರಾಣಿ ಮುಖರ್ಜಿ ತುಂಬಾ ಖುಷಿಯಾಗಿದ್ದಾರೆ. ‘ಮದುವೆ, ಮಗು ಎಂದು ನಾಲ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರವುಳಿದಿದ್ದರೂ ಈಗ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಮುಂದಿನ ಸಿನಿಮಾಕ್ಕೆ ಹೆಚ್ಚು ಅಂತರ ತೆಗದುಕೊಳ್ಳುವುದಿಲ್ಲ. ಸದ್ಯದಲ್ಲೇ ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದೇನೆ’ ಎಂದು ಹೇಳಿದ್ದಾರೆ.

ಹಿಚ್ಕಿ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿಕೊಂಡು ಮುಂದಿನ ಚಿತ್ರದ ಬಗ್ಗೆ ನಿರ್ಧರಿಸಬೇಕು ಎಂದು ರಾಣಿ ತೀರ್ಮಾನಿಸಿದ್ದರಂತೆ. ಈಗ ಸಿನಿಮಾ ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ. ಹೀಗಾಗಿ ಅತಿ ಶೀಘ್ರದಲ್ಲೇ ಮತ್ತೊಂದು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದೇನೆ ಎಂದು ಅಭಿಮಾನಿಗಳ ಖುಷಿ ಸಂಗತಿ ತಿಳಿಸಿದ್ದಾರೆ.

‘ನನಗೆ ಸಿನಿಮಾಗಳಲ್ಲಿ ಅಭಿನಯಿಸುವುದೆಂದರೆ ಮೊದಲಿನಿಂದಲೂ ತುಂಬ ಇಷ್ಟ. ಮದುವೆ, ಮಗು ಎಂದು ನಾಲ್ಕು ವರ್ಷಗಳ ಕಾಲ ನನ್ನ ಕ್ಷೇತ್ರದಿಂದ ದೂರವುಳಿದಿದ್ದೆ. ಆಗ ಜನರು ವಾಪಸ್‌ ನನ್ನನ್ನು ಹೇಗೆ ಆನ್‌ಸ್ಕ್ರೀನ್‌ನಲ್ಲಿ ನೋಡಲು ಇಷ್ಟಪಡುತ್ತಾರೆ ಎಂದು ಕಾತುರವಿತ್ತು. ಈಗ ನನ್ನನ್ನು ಜನರು ಹೊಸ ಪಾತ್ರಗಳಲ್ಲಿ ಸ್ವೀಕರಿಸುತ್ತಾರೆ ಎಂದು ಧೈರ್ಯ ಬಂದಿದೆ. ಇನ್ನಷ್ಟು ಹುಮ್ಮಸ್ಸು ಬಂದಿದೆ. ಸುಮಾರು ಸಿನಿಮಾಗಳ ಅವಕಾಶಗಳು ಬಂದಿದ್ದವು. ಹಿಚ್ಕಿ ಸಿನಿಮಾ ಬಿಡುಗಡೆಯಾಗಲು ಕಾಯುತ್ತಿದ್ದೆ’ ಎಂದು ರಾಣಿ ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ರಾಣಿ ಮನಸು ಮಾಡಿದರೂ ಅವರ ತಾಯಿ ಮನಸಿಗೆ ತನ್ನ ಮಗುವಿನ ಪ್ರತಿಕ್ಷಣವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಅನಿಸಿದೆಯಂತೆ. ‘ಹಿಚ್ಕಿ ಸಿನಿಮಾ ಚಿತ್ರೀಕರಣ ಆರಂಭವಾದಾಗ ಅದಿರಾಳ ವಯಸ್ಸು 14 ತಿಂಗಳು. ಆಗ ಅವಳು ನಡೆಯಲು ಕಲಿಯುವ ವಯಸ್ಸು. ಒಂದು ದಿನ ನಾನು ಶೂಟಿಂಗ್‌ ಮುಗಿಸಿಕೊಂಡು ಮನೆಗೆ ಬಂದಿದ್ದೀನಷ್ಟೇ. ಅವಳು ಆಗ ಮೊದಲ ಹೆಜ್ಜೆ ಇಟ್ಟಳು. ಒಂದು ವೇಳೆ ಆ ಸಮಯದಲ್ಲಿ ನಾನು ಶೂಟಿಂಗ್‌ ಸ್ಥಳದಲ್ಲಿ ಇದ್ದಿದ್ದರೆ ಆ ಕ್ಷಣವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ ಎಂದು ಆ ಕ್ಷಣದಲ್ಲಿ ಅನಿಸಿಬಿಟ್ಟಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.