ಮಂಗಳವಾರ, ಡಿಸೆಂಬರ್ 10, 2019
24 °C

ವೈಮಾನಿಕ ತಂತ್ರಜ್ಞಾನಕ್ಕೆ ಕನ್ನಡಿಯಾಗಬಲ್ಲ ಕಲಾಕೃತಿಗಳು

Published:
Updated:
ವೈಮಾನಿಕ ತಂತ್ರಜ್ಞಾನಕ್ಕೆ ಕನ್ನಡಿಯಾಗಬಲ್ಲ ಕಲಾಕೃತಿಗಳು

ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವ ಏರ್‌ ಮಾಡೆಲಿಂಗ್‌ ಇತ್ತೀಚೆಗೆ ಗೃಹಲಂಕಾರ ಸಾಧನಗಳಾಗಿಯೂ ಜಯಪ್ರಿಯತೆ ಪಡೆಯುತ್ತಿವೆ ಎನ್ನುವುದಕ್ಕೆ ಮಹೇಂದ್ರ ಅವರ ಅಪರೂಪದ ಕಲಾಕೃತಿಗಳೇ ಸಾಕ್ಷಿ.

ನಗರದ ಮಾಗಡಿ ರಸ್ತೆಯ ನಿವಾಸಿ ಮಹೇಂದ್ರ ಅವರಿಗೆ ಏರ್‌ ಮಾಡೆಲಿಂಗ್‌ ಕುರಿತು ಒಲವು ಮೂಡಿದ್ದು ಕಾಲೇಜು ದಿನಗಳಲ್ಲಿ. ಎನ್‌ಸಿಸಿ ಘಟಕದ ಏರ್‌ವಿಂಗ್‌ನಲ್ಲಿ ಸಕ್ರಿಯರಾಗಿದ್ದ ಅವರು, ಪಿಯುಸಿಯಲ್ಲಿರುವಾಗಲೇ ಗಣರಾಜ್ಯೋತ್ಸವದ ಏರ್‌ ಮಾಡೆಲಿಂಗ್ ತಯಾರಿಕಾ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಎನ್‌ಸಿಸಿಯಲ್ಲಿ ಕಲಿತ ವಿಮಾನ ತಯಾರಿಕಾ ತಂತ್ರಗಳನ್ನೇ ರೂಢಿಸಿಕೊಂಡ ಅವರು ನಂತರದ ದಿನಗಳಲ್ಲಿ ಹವ್ಯಾಸವಾಗಿ ಪೋಷಿಸಿಕೊಂಡು ಬಂದಿದ್ದಾರೆ.

ಏರ್ ಮಾಡೆಲಿಂಗ್ ವಿದೇಶಗಳಲ್ಲಿ ಜನಪ್ರಿಯವಾಗಿದ್ದರೂ ಭಾರತದ ಮಟ್ಟಿಗೆ ಅಪರಿಚಿತ. ಸ್ವತಃ ವಿಮಾನಗಳ ಪ್ರತಿಕೃತಿಗಳನ್ನು ರಚಿಸಿ ಹಾರಿಸುವವರ ಸಂಖ್ಯೆ ವಿರಳ. ಚೀನಾ ಮತ್ತು ಅಮೆರಿಕಾಗಳಿಂದ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್‌ ಮಾದರಿಗಳನ್ನೇ ಹೆಚ್ಚಾಗಿ ಕೊಂಡು ಮನೆಯನ್ನು ಅಲಂಕರಿಸುತ್ತಾರೆ.

ಮಹೇಂದ್ರ ಅವರು ರಿಮೋಟ್ ನಿಯಂತ್ರಣ, ವೈರ್ ಕಂಟ್ರೋಲ್‌ ಹಾಗೂ ಗಾಳಿಪಟ ಮಾದರಿಯ ಏರ್ ಮಾಡೆಲ್‌ಗಳನ್ನು ರಚಿಸುತ್ತಾರೆ. ರಿಮೋಟ್‌ ನಿಯಂತ್ರಣ ಮತ್ತು ವೈರ್ ನಿಯಂತ್ರಣ ವಿಮಾನಗಳನ್ನು ಹಾರುವಂತೆಯೂ ರಚಿಸಬಹುದು. ಅದೇ ಸ್ಕೇಲ್‌ ಮಾಡೆಲ್‌ಗಳು ಕೇವಲ ಷೋಕೇಸ್‌ಗಳಲ್ಲಿ ಇಡಲು ಬಳಕೆಯಾಗುತ್ತದೆ. ಅತ್ಯಂತ ತಾಂತ್ರಿಕ ನೈಪುಣ್ಯ ಬೇಡುವ ಕಲೆಗೆ ಬಳಕೆಯಾಗುವ ಕಚ್ಚಾವಸ್ತುಗಳ ಸಂಖ್ಯೆ ಕಡಿಮೆಯಾದರೂ, ಅಪಾರ ಸಮಯ ಹಿಡಿಯುತ್ತದೆ. ಬಲ್ಸಾ (balsa) ಎಂಬ ಬೆಣ್ಣೆಯಷ್ಟೇ ಮೃದುವಾದ ಮರದಿಂದ ಈ ಮಾದರಿಗಳು ರಚನೆಯಾಗುತ್ತವೆ. ಉಳಿದಂತೆ ಲೋಹ, ಕೆಲವೊಮ್ಮೆ ಎಂಜಿನ್ ಮತ್ತು ಮೋಟಾರ್‌, ರಾಸಾಯನಿಕ ಇಂಧನಗಳನ್ನು ಉಪಯೋಗಿಸಲಾಗುತ್ತದೆ.

ಹಾರುವ ಮಾದರಿಗಳ ರಚನೆಗಿಂತಾ ವಿಮಾನಗಳ ಪ್ರತಿಕೃತಿ ರಚನೆಯೇ ಸೂಕ್ಷ್ಮ ಕೆಲಸ. ತುಂಬಾ ನಾಜೂಕಾದ ಕೆಲಸವಿದು. ವಿಶ್ವ ಯುದ್ದಗಳ ಸಮಯದಲ್ಲಿ ಬಳಕೆಯಾದ ವಿಮಾನಗಳ ಪ್ರತಿಕೃತಿಗಳನ್ನು ರಚಿಸಿ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದೇ ವಿಧಾನದಲ್ಲಿ ಹಡಗು ಮಾದರಿಗಳನ್ನು ರಚಿಸಬಹುದು. ಈ ತಾಂತ್ರಿಕ ಕೌಶಲ, ಕಲೆಗಿಂತ ಕೊಂಚ ಭಿನ್ನ. ಕಲೆಯಲ್ಲಿ ನಮ್ಮ ಕಲ್ಪನಾಲೋಕಕ್ಕೆ ಬಣ್ಣ ತುಂಬಬಹುದು. ಇಲ್ಲಿ ಪ್ರತಿಕೃತಿಗಳನ್ನು ಇರುವಂತೆಯೇ ಸಣ್ಣ ವ್ಯತ್ಯಾಸವಾಗದಂತೆ ರಚಿಸಬೇಕು ಅದು  ದೊಡ್ಡ ಸವಾಲು. ಇಲ್ಲಿ ಸೃಜನಶೀಲತೆಗಿಂತ ಕೌಶಲವೇ ಮುಖ್ಯ.

ಮಹೇಂದ್ರ ಅವರು ಐಟಿ ಉದ್ಯೋಗಿಯಾಗಿರುವ ಕಾರಣ ಪೂರ್ಣಪ್ರಮಾಣದಲ್ಲಿ ಏರ್‌ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಆಸಕ್ತಿಯಿಂದ ಇದನ್ನೇ ಉದ್ಯೋಗವಾಗಿ ಪರಿಗಣಿಸಿದವರಿಗೆ ಉತ್ತಮ ಆದಾಯ ಮೂಲವು ಇದಾಗಬಲ್ಲದು. ಚೀನಾದಿಂದ ‘ಫೈಬರ್ ಗ್ಲಾಸ್’ ಮಾಡೆಲ್‌ಗಳು ಆಮದಾಗುತ್ತಿದ್ದರೂ, ಹಡಗು ಮಾದರಿಗಳನ್ನು ಭಾರತೀಯ ನೌಕಾಪಡೆಯೇ ಖರೀದಿಸುತ್ತದೆ. ಏರ್‌ ಷೋಗಳು ನಡೆಯುವಾಗ ವಿಮಾನ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಅದರ ಸಲುವಾಗಿ ಭಾರತೀಯ ವಾಯುಪಡೆ ಈ ಮಾದರಿಗಳನ್ನು ಖರೀದಿಸುತ್ತದೆ ಎನ್ನುವುದು ಮಹೇಂದ್ರ ಅವರ ಅನುಭವದ ಮಾತು.

‘ರಕ್ಷಣಾ ಕ್ಷೇತ್ರದಲ್ಲಿ ಏರ್‌ ಮಾಡೆಲ್‌ಗಳನ್ನು ಬಳಸುತ್ತಾರೆ. ಜೊತೆಗೆ ಅತ್ಯಂತ ಕೆಳಸ್ತರದಲ್ಲಿ ವಿಮಾನಗಳು ಹಾರುವುದರಿಂದ ಕೃಷಿ ಕ್ಷೇತ್ರದಲ್ಲಿ ಕೀಟನಾಶಕ ಸಿಂಪಡಣೆಗೂ ಬಳಕೆಯಾಗುತ್ತಿದೆ, ಛಾಯಾಚಿತ್ರಗಳನ್ನು ತೆಗೆಯಲೂ ಉಪಯೋಗಿಸುತ್ತಾರೆ’ ಎನ್ನುವುದು ಮಹೇಂದ್ರ ಅವರ ವಿವರಣೆ.

ಮಕ್ಕಳ ವಿಮಾನಯಾನದ ಕೌತುಕಗಳನ್ನು ತಣಿಸಲು ಈ ಹವ್ಯಾಸ ಸಹಾಯಕ. ಹವ್ಯಾಸದಲ್ಲಿ ತೊಡಗಿಕೊಂಡರೆ ಅರಿವಿಲ್ಲದೆ ವಿಮಾನ ತಂತ್ರಜ್ಞಾನ ತಿಳಿಯುತ್ತದೆ. ಚಿಕ್ಕ ಮಾದರಿಗಳ ರಚನೆಗೆ 2 ಸಿ.ಸಿ. ಎಂಜಿನ್‌ ಹಾಗೂ ಮೋಟಾರ್ ಬಳಸಬಹುದು. 6 ಇಂಚಿನಿಂದ 10 ಅಡಿ ಗಾತ್ರದವರೆಗೂ ಬಳಕೆಗೆ ಅನುಗುಣವಾಗಿ ಗಾತ್ರ ನಿರ್ಧಾರವಾಗುತ್ತದೆ. ಬಲ್ಸಾ ಸಿಂಗಾಪುರ ಹಾಗೂ ದಕ್ಷಿಣ ಅಮೆರಿಕದಿಂದ ರಫ್ತಾಗುವ ಕಾರಣ ಬೆಲೆ ಹೆಚ್ಚು. ಒಂದು ಸುಸಜ್ಜಿತ ಹಾರುವ ವಿಮಾನ ತಯಾರಿಕೆಗೆ ₹20,000 ಖರ್ಚಾಗುತ್ತದೆ. ಗಾಳಿಪಟ ಮಾದರಿಯ ವಿಮಾನವನ್ನು ₹120 ಖರ್ಚಿನಲ್ಲಿಯೂ ತಯಾರಿಸಬಹುದು. ಸ್ಕೇಲ್‌ ಮಾಡೆಲ್‌ಗಳನ್ನು ರಚನೆಗೆ ₹4,000 ಬೇಕಾಗುತ್ತದೆ. ತಯಾರಿಸುವ ಹಂತದಲ್ಲಿ ಕ್ರ್ಯಾಶ್‌ ಆಗುವ ಸಾಧ್ಯತೆಯೂ ಇರುತ್ತದೆ. ಬಹಳ ನಾಜೂಕಿನಿಂದ ನಿರ್ವಹಿಸಬೇಕು ಎನ್ನುವುದು ಮಹೇಂದ್ರ ಅವರ ಸಲಹೆ.

ಮಹೇಂದ್ರ ಅವರು ಹವ್ಯಾಸ ಫೇಸ್‌ಬುಕ್ ಸಮೂಹದ ಮೂಲಕ ವಾರಾಂತ್ಯಗಳಲ್ಲಿ ಆಸಕ್ತರಿಗೆ ಕಲಿಕಾ ತರಬೇತಿಗಳನ್ನು ನೀಡುತ್ತಾರೆ. ಅದರ ಮೂಲಕವೇ ಮಾರಾಟವನ್ನು ಮಾಡುತ್ತಿದ್ದಾರೆ.

ಸಂಪರ್ಕ: 98800 35516

ಪ್ರತಿಕ್ರಿಯಿಸಿ (+)