ಮಂಗಳವಾರ, ಡಿಸೆಂಬರ್ 10, 2019
24 °C

ಸಂಘಟನೆಯ ಭಾರ ಹೊತ್ತು...

Published:
Updated:
ಸಂಘಟನೆಯ ಭಾರ ಹೊತ್ತು...

ಕಿವಿಗೆ ಇಂಪು ನೀಡುವ ಸಂಗೀತ, ಕಣ್ಣಿಗೆ ತಂಪು ನೀಡುವ ನೃತ್ಯ ಚೆಲುವು ಎರಡನ್ನೂ ಬಾಲ್ಯದಿಂದಲೇ ಆಸ್ವಾದಿಸುತ್ತಾ ಬಂದವ ನಾನು. ಭಾವಗಳನ್ನು ಬೆಸೆದು ಮನಸಿಗೆ ನೆಮ್ಮದಿ ತಂದುಕೊಡುವ ಕಲಾ ಪ್ರಕಾರಕ್ಕೆ ಸಂಪೂರ್ಣ ಮಾರುಹೋಗಿದ್ದೇನೆ. ಇದೇ ಸಂಘಟನೆಯ ಹಾದಿಗೂ ನಾಂದಿಯಾಯಿತು.

ನಾನು ಚಿತ್ರದುರ್ಗ ಜಿಲ್ಲೆಯ ಬಿಳಚೋಡು ಗ್ರಾಮದವನು. ಆಂಧ್ರದ ಗಡಿ ಮೊಣಕಾಲ್ಮೂರು ನನ್ನ ತಾತನ ಮನೆ. ತಂದೆ ಆರ್‌.ಎನ್‌.ವಿ. ಆಚಾರ್‌, ಸರ್ಕಾರಿ ಕೆಲಸದಲ್ಲಿದ್ದರಿಂದ ಕರ್ನಾಟಕದ ನಾನಾ ಕಡೆಗಳಲ್ಲಿ ನನ್ನ ಬಾಲ್ಯ ಅರಳಿತು. ಬಳ್ಳಾರಿಯ ಕಂಪ್ಲಿ, ಎಮ್ಮಿಗನೂರು, ಗಂಗಾವತಿ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದೆ. ಭದ್ರಾವತಿಯಲ್ಲಿ ಪಿಯುಸಿ ಮಾಡಿದೆ. ಚಿತ್ರದುರ್ಗದಲ್ಲಿ ಬಿಎಸ್ಸಿ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಮುಗಿಸಿದೆ. ರಸಾಯನ ವಿಜ್ಞಾನ ವಿಷಯದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಪಿಎಚ್‌ಡಿ ಮಾಡಿದೆ.

ಚಿತ್ರ ಬಿಡಿಸುವುದರ ಬಗೆಗೆ ಚಿಕ್ಕಂದಿನಲ್ಲಿ ವಿಪರೀತ ವ್ಯಾಮೋಹ ನನಗೆ. ಜೊತೆಗೆ ರಂಗೋಲಿ ಇಷ್ಟದ ಹವ್ಯಾಸವಾಗಿತ್ತು. ರಂಗೋಲಿ ಸ್ಪರ್ಧೆ ಎಂದರೆ ನಾನು ಒಂದಿಷ್ಟು ಬಣ್ಣ ಹಿಡಿದುಕೊಂಡು ಹಾಜರ್‌ ಇರುತ್ತಿದ್ದೆ. ಸಂಗೀತ ಕೇಳುವ ಆಸಕ್ತಿಯೂ ಸದ್ದಿಲ್ಲದೆ ಬೆಳೆದಿತ್ತು. ಹಾಡುಗಾರರಾಗಲಿ, ನೃತ್ಯಗಾರರಾಗಲಿ ಕುಟುಂಬದಲ್ಲಿ ಯಾರೂ ಇಲ್ಲದಿದ್ದರೂ ಸುಮಧುರ ಹಾಡುಗಳ, ಶಾಸ್ತ್ರೀಯ ಸಂಗೀತದ ಇಂಪು ಮನೆಯಲ್ಲಿ ರಿಂಗಣಿಸುತ್ತಿತ್ತು. ಇದು ನಾದಲೋಕಕ್ಕೆ ನಾನು ಮಾರುಹೋಗುವಂತೆ ಮಾಡಿತ್ತು. ಹೀಗೆ ಬಾಲ್ಯದಲ್ಲಿ ಮೊಳಕೆಯೊಡೆದಿದ್ದ ಸಂಗೀತ ಪ್ರೀತಿ ಹೆಮ್ಮರವಾಗಿದ್ದು ನಾನು ವಿದ್ಯಾಭ್ಯಾಸಕ್ಕೆಂದು ಮೈಸೂರು ಸೇರಿದಾಗ. ಸಂಸ್ಕೃತಿ, ಸಂಗೀತ, ಕಲೆಯ ವಿಷಯದಲ್ಲಿ ಶ್ರೀಮಂತವಾದ ನಗರವದು. ಅಲ್ಲಿಯ ದಸರಾ, ನೃತ್ಯ –ಸಂಗೀತ ಕಚೇರಿಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದೆ. ಸಮಾನ ಮನಸ್ಕ ಸ್ನೇಹಿತರ ಗುಂಪು ಇದ್ದುದು ನನ್ನ ಕನಸಿಗೆ ದಕ್ಕಿದ ಬೋನಸ್‌.

ಎಂ.ಎಸ್ಸಿ ಮುಗಿಸಿ ಪಿಎಚ್‌.ಡಿ ಪದವಿಗಾಗಿ ನಾನು ಬೆಂಗಳೂರಿಗೆ ಬಂದಿದ್ದು 1973 ಆಗಸ್ಟ್‌ 2. ಇಲ್ಲಿ ಬಂದಮೇಲೂ ನಗರದ ಸುತ್ತಮುತ್ತ ಎಲ್ಲೇ ಸಂಗೀತ ಕಛೇರಿ ನಡೆಯಲಿ ಅಲ್ಲಿ ನಮ್ಮ ಗುಂಪು ಹಾಜರಾಗುತ್ತಿತ್ತು. ಕೊನೆಕೊನೆಗೆ ಸಂಗೀತ ಕೇಳುವ ನಮ್ಮ ಹುಚ್ಚು ಎಷ್ಟು ಹೆಚ್ಚಾಯಿತು ಎಂದರೆ ನಮಗೆ ಕೊಟ್ಟ ಪಾಕೆಟ್‌ ಮನಿಯನ್ನು ಉಳಿಸಿ ನಾವೇ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾರಂಭಿಸಿದೆವು.

ವಿದ್ಯಾಭ್ಯಾಸಕ್ಕಾಗಿ 13ನೇ ವಯಸ್ಸಿಗೆ ಹಾಸ್ಟೆಲ್‌ ಸೇರಿದೆ. ಎಲ್ಲ ಕಡೆಯೂ ಕನ್ನಡ ಸಂಘ, ಜಿಮ್‌ಖಾನಾ, ಫೊಟೊಗ್ರಾಫರ್ಸ್‌ ಕ್ಲಬ್‌ ಹೀಗೆ ವಿವಿಧ ಚಟುವಟಿಕೆಗಳಲ್ಲಿ ನಾನು ಭಾಗವಹಿಸುತ್ತಲೇ ಇರುತ್ತಿದ್ದೆ. ಐಐಎಸ್‌ಸಿ ಎಂದರೆ ಮಿನಿ ಭಾರತ ಇದ್ದಹಾಗೆ. ಬೇರೆ ಬೇರೆ ರಾಜ್ಯದ, ವಿಭಿನ್ನ ಸಂಸ್ಕೃತಿಯ ಜನರು ಅಲ್ಲಿರುತ್ತಿದ್ದರು. ಅಲ್ಲಿ ವಿಭಿನ್ನ ಕಲಾ ಪ್ರಕಾರಗಳ ಅರಿವು ನನಗೆ ಆಯಿತು. ನನ್ನ ಕನಸು ಇನ್ನಷ್ಟು ಗರಿಗೆದರಿತು.

1977ರಲ್ಲಿ ಡಾಕ್ಟರೇಟ್‌ ಪದವಿ ಪಡೆದು ಸಹ ಸಂಶೋಧಕನಾಗಿ ಕೆಲಸ ಮಾಡಿದೆ. 1980ರಲ್ಲಿ ಸ್ವಂತ ಕಂಪನಿ ‘ಜಿಯಾಲಾಜಿಕಲ್‌ ಅಂಡ್‌ ಮೆಟಾಲಾಜಿಕಲ್‌ ಲ್ಯಾಬೊರೇಟರೀಸ್‌’ ಪ್ರಾರಂಭಿಸಿದೆ. ಪ್ರಾರಂಭದಲ್ಲಿ ನಷ್ಟ ಅನುಭವಿಸಿದರೂ ಕೊನೆಗೆ ಕಂಪನಿ ಕೈಹಿಡಿಯಿತು. ದುಡಿದ ದುಡ್ಡು ನಮ್ಮ ಸಂಸಾರ ತೂಗಿಸಲು ಸಾಕು ಎನಿಸಿದಾಗ ಹೆಚ್ಚಿನ ಹಣವನ್ನು ಸಂಗೀತ ಕಾರ್ಯಕ್ರಮ ಪ್ರಾಯೋಜಿಸಲು ಬಳಸಿದೆ. ವಿಭಿನ್ನ ಕಲಾವಿದರ ಸಂಗೀತ ಸವಿಯುವ ತುಮುಲ ಈ ಕೆಲಸಕ್ಕೆ ಪ್ರೇರೇಪಿಸಿತು. ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಡಿಮೆ ಇದ್ದ ಕಾಲವದು. ಹೀಗಾಗಿ ಸಂಗೀತ ನೃತ್ಯ ಕಲಿತವರಿಗೆ ಅವಕಾಶ ನೀಡುವುದರ ಜೊತೆಗೆ ಕಲಿಯಲು ಪ್ರೋತ್ಸಾಹ ನೀಡುವ ಉದ್ದೇಶವೂ ನನ್ನದಾಗಿತ್ತು.

ನನ್ನ ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಅಣ್ಣ, ರಂಗಕರ್ಮಿ ಪ್ರಸನ್ನ ‘ಕಲೆಯ ಬಗೆಗೆ ಇಷ್ಟೊಂದು ಆಸಕ್ತಿ ಇರೋನು ನೀನೇ ಯಾಕೆ ಒಂದು ಟ್ರಸ್ಟ್‌ ಪ್ರಾರಂಭಿಸಬಾರದು. ಟ್ರಸ್ಟ್‌ ಮುಖಾಂತರವೇ ನಿನಗೆ ಎಂಥ ಕಾರ್ಯಕ್ರಮಗಳು ಬೇಕು ಅದನ್ನು ಮಾಡು’ ಎಂದು ಸೂಚಿಸಿದರು. ಇದೇ 1995 ಮೇ 27ರಂದು ’ಅನನ್ಯ’ ಸಂಸ್ಥೆ ಹುಟ್ಟಿಕೊಳ್ಳಲು ಕಾರಣವಾಯಿತು. ಸಾಹಿತಿ ಅನಂತಮೂರ್ತಿ ಅಧ್ಯಕ್ಷರಾದರು. ಬಿ.ಸಿ. ರಾಮಚಂದ್ರಶಾಸ್ತ್ರಿ, ಅಗ್ರಹಾರ ಕೃಷ್ಣಮೂರ್ತಿ ಟ್ರಸ್ಟಿಗಳಾದರು.

‘ಅನನ್ಯ’ ಮೂಲಕ ಕಲಾವಿದರನ್ನು ಸೇರಿಸಿಕೊಂಡು ಶಾಲೆಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಮಾಡಿದೆವು. ಇಂಡಿಯನ್‌ ಫೌಂಡೇಷನ್‌ ಫಾರ್‌ ಆರ್ಟ್ಸ್‌ ‘ಹಾಡು ಹಕ್ಕಿ’ ಕಾರ್ಯಕ್ರಮ ಮಾಡುವ ಅವಕಾಶವನ್ನು ನಮ್ಮ ಸಂಸ್ಥೆಗೆ ನೀಡಿತು. ಸಂಘಟನಾ ಬದುಕಿನಲ್ಲಿ ನನಗೆ ಹೆಚ್ಚು ತೃಪ್ತಿ ಕೊಟ್ಟ ಕಾರ್ಯಕ್ರಮವಿದು. ಮಕ್ಕಳಿಗೆ ಅರ್ಥವಾಗುವಂತೆ, ಸಂಗೀತದ ಬಗೆಗೆ ಮಾಹಿತಿ ನೀಡುವ 21 ಕಂತಿನ ಈ ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ಇದೇ ಕಾರ್ಯಕ್ರಮವನ್ನು ಶಾಲೆಗಳಲ್ಲಿಯೂ ಪ್ರಾರಂಭಿಸಿದೆವು. ಅನನ್ಯ ಸಭಾಂಗಣದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುವುದರ ಜೊತೆಗೆ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಸವಗಳನ್ನು ಆಯೋಜಿಸುವುದು, ಸಾಧಕರಿಗೆ ಪುರಸ್ಕಾರ ಮುಂತಾದ ಕಾರ್ಯಕ್ರಮವನ್ನೂ ಮಾಡಿದೆವು.

ಶಾಲೆಗಳಲ್ಲಿ ಮಕ್ಕಳಿಗೆ ಕಾರ್ಯಕ್ರಮ ಮಾಡುವಾಗ ಕಲಾವಿದರ ಬಗೆಗೆ ಅವರಿಗೆ ಮಾಹಿತಿಯೇ ಇರಲಿಲ್ಲ. ಇದು 1996ರಲ್ಲಿ ಕ್ಯಾಲೆಂಡರ್‌ ಮಾಡಲು ಪ್ರೇರೇಪಿಸಿತು. ಕಲೆಯನ್ನು ಹಾಗೂ ಕಲಾವಿದರನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಮೈಸೂರು ಆಸ್ಥಾನದ ವಿದ್ವಾಂಸರು, ಯಕ್ಷಗಾನ ಕಲಾವಿದರು, ನೃತ್ಯ ಮುದ್ರೆಗಳು, ಸ್ವರಮಾಲಾ ಪೇಂಟಿಂಗ್‌, ರಾಜಸ್ಥಾನದ ರಾಗಮಾಲಾ ಪೇಂಟಿಂಗ್‌, ಹಿಂದೂಸ್ತಾನಿ ಕಲಾವಿದರ ಕುರಿತು, ನೃತ್ಯ ಕಲಾವಿದರ ಬಗೆಗೆ ಮಾಹಿತಿ ನೀಡುವ 15 ಕ್ಯಾಲೆಂಡರ್‌ ಅನ್ನು ತಂದೆವು. ಅದು ಗ್ರೀಟಿಂಗ್‌ ರೂಪದಲ್ಲಿಯೂ ಜನರ ಕೈ ಸೇರಿತ್ತು.

‘ಅನನ್ಯ’ದಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ನಾವು ಪೋಸ್ಟ್‌ ಮಾಡುತ್ತಿದ್ದೆವು. ಒಂದು ಪತ್ರಕ್ಕೆ 3 ರೂಪಾಯಿ ವೆಚ್ಚವಾಗುತ್ತಿತ್ತು. ಆ ಸಂದರ್ಭದಲ್ಲಿ ಸಂಗೀತದ ಕ್ಷೇತ್ರದ ಸುದ್ದಿಯನ್ನು ಪಸರಿಸುವ ಲೇಖನಗಳು ಹೆಚ್ಚು ಪ್ರಕಟವಾಗುತ್ತಿರಲಿಲ್ಲ. ಹೀಗಾಗಿ 1997ರಲ್ಲಿ ‘ಅನನ್ಯ’ ನಿಯತಕಾಲಿಕೆ ಪ್ರಾರಂಭಿಸಿದೆವು. 16 ಪುಟದಿಂದ ಪ್ರಾರಂಭವಾದ ಪತ್ರಿಕೆ ಈಗ 48 ಪುಟದಷ್ಟು ಹಿರಿದಾಗಿದೆ.

ಅದಾಗಲೇ ನನಗೆ ಕಲಾ ಜಗತ್ತಿನ ಸಾಕಷ್ಟು ಜನರ ಪರಿಚಯ ಆಗಿತ್ತು. ಒಡನಾಟವೂ ಬೆಳೆದಿತ್ತು. ಇದೇ ಸಂದರ್ಭದಲ್ಲಿ ಮೈಕೊದಲ್ಲಿ ಕೆಲಸ ಮಾಡುತ್ತಿದ್ದ ಪಿಟೀಲುವಾದಕರೊಬ್ಬರಿಗೆ ಅಪಘಾತದಲ್ಲಿ ಕೈಗೆ ಬಲವಾದ ಪೆಟ್ಟಾಯಿತು. ಇದು ಅವರ ಆದಾಯಕ್ಕೆ ದೊಡ್ಡ ಪೆಟ್ಟು ನೀಡಿತು. ಇದೇ ಹಿನ್ನೆಲೆಯಲ್ಲಿ ಕಲಾವಿದರ ಬಗೆಗೆ ಮಾಹಿತಿ ಕಲೆ ಹಾಕಿದಾಗ ಅನೇಕರಿಗೆ ಇಂಥ ಸಂಕಷ್ಟಗಳಿರುವುದು ಗೊತ್ತಾಯಿತು. ಆಗ 2001ರಲ್ಲಿ ಹುಟ್ಟಿಕೊಂಡಿದ್ದು ‘ಆರೋಗ್ಯಧಾರಾ’ ಯೋಜನೆ. ಇದುವರೆಗೆ 110 ಕಲಾವಿದರಿಗೆ ಎಷ್ಟು ಸಾಧ್ಯವೋ ಅಷ್ಟು ಆರ್ಥಿಕವಾಗಿ ನೆರವು ನೀಡಿದ್ದೇವೆ. ಆರೋಗ್ಯ ಸಂಬಂಧಿ ಶಿಬಿರಗಳನ್ನೂ ಮಾಡಿದ್ದೇವೆ. ಆರೋಗ್ಯಧಾರಾಕ್ಕಾಗಿಯೇ ಪ್ರತ್ಯೇಕ ಖಾತೆ ಮಾಡಿದ್ದು ಬಂದ ದೇಣಿಗೆ ಕಲಾವಿದರ ಯೋಗಕ್ಷೇಮಕ್ಕಾಗಿ ಮಾತ್ರ ಬಳಕೆ ಆಗುತ್ತದೆ.

ಅನನ್ಯದ ಮೂಲಕ ಇದುವರೆಗೆ 1,900ಕ್ಕೂ ಹೆಚ್ಚು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದಿವೆ. ಹೆಚ್ಚಿನ ಕಾರ್ಯಕ್ರಮಗಳು ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದವು. ಕೆಲವು ಮಾಧುರ್ಯಪೂರ್ಣ ಸುಗಮ ಸಂಗೀತ ಕಾರ್ಯಕ್ರಮಗಳೂ ನಡೆದಿವೆ. ಕೆಲವರು ಕಲಾ ಪ್ರತಿಭೆಯಿಂದ ಇಷ್ಟವಾದರೆ, ಕೆಲವರು ವ್ಯಕ್ತಿತ್ವದಿಂದ ನನಗೆ ಹತ್ತಿರವಾಗಿದ್ದಾರೆ. ಅಂಥವರಿಂದ ಸಾಕಷ್ಟು ಕಲಿತಿದ್ದೇನೆ. ಸಂಘಟಕನ ಕೆಲಸ ಇಷ್ಟೂ ವರ್ಷ ನನಗೆ ಸಂತೋಷವನ್ನೇ ನೀಡಿದೆ ಎನ್ನಲಾರೆ.

ಸಾಕಷ್ಟು ಅಪವಾದಗಳು ಅವಮಾನಗಳೂ ನನ್ನನ್ನು ಅರಸಿ ಬಂದವು. ದೊಡ್ಡ ದೊಡ್ಡ ಜಗಳಗಳೂ ನಡೆದಿವೆ. ವೈಯಕ್ತಿಕವಾಗಿ ಮಾನಹರಣ ಮಾಡುವ ಪ್ರಯತ್ನವನ್ನೂ ಅನೇಕರು ಮಾಡಿದರು. ಈ ಎಲ್ಲಾ ಹೊಡೆತಗಳು ಬಿದ್ದಷ್ಟೂ ಕಲಾ ಜಗತ್ತು, ಕಲಾವಿದರು ನನಗೆ ಇನ್ನಷ್ಟು ಹತ್ತಿರವಾದರು. ಸಾಂತ್ವನದ ಬೆಂಬಲ ನೀಡಿದರು.

ಕಲಾಪ್ರಿಯ ಮನಸುಗಳಿಗೆ ಕಾರ್ಯಕ್ರಮ ಆಯೋಜಿಸುವ ಮೂಲಕ ರಸದೌತಣ ನೀಡಲು ಕಾರಣನಾಗಿದ್ದೇನೆ.

ಮಲ್ಲೇಶ್ವರದಲ್ಲಿರುವ ನನ್ನ ಮನೆಯಿಂದ ಹೊರಗೆ ಬಂದರೆ ದಾರಿಯುದ್ದಕ್ಕೂ ನಗುಮುಖಗಳು ಸಿಗುತ್ತವೆ. ಇದಕ್ಕಿಂತ ಹೆಚ್ಚಿನ ತೃಪ್ತಿ ಬೇರೊಂದಿಲ್ಲ ಎನ್ನುವುದು ನನ್ನ ಭಾವನೆ.

ಸಂಗೀತದ ಜೊತೆಗೆ ಸಾಹಿತ್ಯ ಒಲವೂ ನನ್ನಲ್ಲಿದೆ. ವಿಮರ್ಶಕರಾದ ರಾಮಚಂದ್ರ ಶರ್ಮ ನನ್ನಲ್ಲಿ ಸಾಹಿತ್ಯಾಸಕ್ತಿ ಬೆಳೆಸಿದರು. ಸಾಹಿತ್ಯ ಲೋಕದ ಅನೇಕರು ನನಗೆ ಆಪ್ತ. ಶರ್ಮ ಅವರೊಂದಿಗೆ ಸಾಹಿತ್ಯ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದೆ. ಸಂಗೀತಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಿಗುವಂತೆ ಮಾಡಬೇಕು ಎಂದು ನನ್ನ ಮನಸಿನಲ್ಲಿ ಆಲೋಚನೆ ಬಂದು, 1998ರಲ್ಲಿ ‘ಅನನ್ಯ ಸಂಗ್ರಹ’ ಗ್ರಂಥಾಲಯ ತೆರೆದೆ. ಇಲ್ಲಿ ಸಂಗೀತ ನೃತ್ಯಕ್ಕೆ ಸಂಬಂಧಿಸಿದ ಸುಮಾರು ಒಂಬತ್ತು ಸಾವಿರ ಪುಸ್ತಕಗಳು ಇವೆ. ಉನ್ನತ ವ್ಯಾಸಂಗ ಮಾಡುವ ಅನೇಕರು ಇಲ್ಲಿ ಬಂದು ಮಾಹಿತಿ ಪಡೆಯುವುದೂ ಉಂಟು. ಅನನ್ಯದಿಂದ 18 ಪುಸ್ತಕಗಳು ಪ್ರಕಟವಾಗಿವೆ. ಸೀಡಿಗಳನ್ನೂ ಪ್ರಕಟಿಸಿದ್ದೇವೆ. ಪುಸ್ತಕ, ದಾಖಲೆ ಎಲ್ಲವನ್ನೂ ಡಿಜಿಟಲೀಕರಣ ಮಾಡುವ ಕೆಲಸ ನಡೆಯುತ್ತಿದೆ.

**

ಸಂಗೀತ ಕಲಿಯಲು ಆಗಲಿಲ್ಲ

ಸಂಗೀತ ಕೇಳುತ್ತಾ ನಾನೂ ಕಲಾವಿದನಾಗಬೇಕು ಎಂಬ ಆಸೆ 1990ರ ಹೊತ್ತಿಗೆ ಬಲವಾಯಿತು. ಹೀಗಾಗಿ ಮೂರು ವರ್ಷ ಶ್ರೀಶೈಲ ಅವರ ಬಳಿ ಮೃದಂಗವನ್ನೂ ಎರಡು ವರ್ಷಗಳ ಕಾಲ ಪಂ.ನಾಗೇಶ್‌ ಅವರ ಬಳಿ ತಬಲಾವನ್ನೂ ಕಲಿತೆ. ಕಂಪನಿ ಕೆಲಸದ ನಡುವೆ ಅಭಿರುಚಿಗೆ ಸಮಯ ಹೊಂದಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಗುರುಗಳು ಮನೆಗೇ ಬಂದು ಪಾಠ ಮಾಡುತ್ತಿದ್ದರು.

ಕೊನೆಕೊನೆಗೆ ಹೇಗಾಯಿತು ಎಂದರೆ ಗುರುಗಳೇ ಬಂದು ಕಾಯುವ ಪರಿಸ್ಥಿತಿ ಬಂತು. ಕೆಲಸದ ಒತ್ತಡ ಅಷ್ಟಿತ್ತು. ಹೀಗಾಗಿ ಸಂಗೀತ ಕಲಿಕೆಯ ಪ್ರಯತ್ನವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟೆ. ಆದರೆ ನಿರಂತರವಾಗಿ ಸಂಗೀತ ಕೇಳಿ ಖುಷಿ ಪಡುತ್ತೇನೆ. ರಾಗ, ತಾಳ ಗುರುತಿಸಬಲ್ಲೆ. ಸಂಗೀತದ ಬಗೆ ಅಲ್ಪಸ್ವಲ್ಪ ಬರೆಯುವಷ್ಟು ಬೆಳೆದಿದ್ದೇನೆ ಎಂಬ ಸಮಾಧಾನವಿದೆ.

**

ನನ್ನಾಕೆ ಪ್ರಮೀಳಾ

ಐಐಎಸ್‌ಸಿಯಲ್ಲಿ ಪಿಎಚ್‌.ಡಿ ಮಾಡುವಾಗ ಸಿಕ್ಕವಳು ನನ್ನಾಕೆ ಡಾ.ಆರ್‌.ಎನ್‌.ಪ್ರಮೀಳಾ. ನಾನು ಕಂಪನಿ ನೋಡಿಕೊಳ್ಳುತ್ತಿದ್ದರೆ ಆಕೆ ಐಐಎಸ್‌ಸಿಯಲ್ಲಿ ಮೆಕ್ಯಾನಿಕಲ್‌ ವಿಷಯದ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದಳು. ನಮ್ಮ ಅವಶ್ಯಕತೆಯೇ ತೀರಾ ಸೀಮಿತವಾಗಿತ್ತು. ಸಿನಿಮಾ ನೋಡುತ್ತಿದ್ದು ಕಡಿಮೆ. ಮಲ್ಲೇಶ್ವರದ ವೀಣಾ ಸ್ಟೋರ್ಸ್‌, ಜನತಾ ಹೋಟೆಲ್‌ ನಾವು ಹೆಚ್ಚು ಹೋಗುತ್ತಿದ್ದ ಹೋಟೆಲ್‌ಗಳು.

ಸಂಜೆ ಸಂಗೀತ ಕೇಳುವುದು ನಮ್ಮ ನಿತ್ಯದ ಕೆಲಸವಾಗಿತ್ತು. 1995ರಲ್ಲಿ ಆಕೆಯೂ ನನ್ನ ಲ್ಯಾಬ್‌ ಕೆಲಸಕ್ಕೇ ಸೇರಿಕೊಂಡಳು. ನನಗೆ ಇಬ್ಬರು ಮಕ್ಕಳು. ಮಗ ಸುನಿಲ್‌ ರಾಘವೇಂದ್ರ ಬಿ.ಇ. ಮುಗಿಸಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿ ಕೊಂಡಿದ್ದಾನೆ. ಮಗಳು ಅಮೆರಿಕದಲ್ಲಿ ವಾಸ್ತುಶಿಲ್ಪ ಅಧ್ಯಯನ ಮಾಡುತ್ತಿದ್ದಾಳೆ.

**

ಪರಿಚಯ

ಹುಟ್ಟಿದ್ದು– ಡಿಸೆಂಬರ್ 17, 1952

ತಂದೆ– ಆರ್‌.ಎನ್‌.ವಿ. ಆಚಾರ್‌

ತಾಯಿ– ಆರ್‌.ವಿ. ಸುಶೀಲಾಬಾಯಿ

ಪತ್ನಿ– ಡಾ.ಬಿ.ಎನ್‌.ಪ್ರಮೀಳಾ

ಮಕ್ಕಳು– ಸುನಿಲ್‌ ರಾಘವೇಂದ್ರ, ಸುಮನಾ

ಸಂಪರ್ಕಕ್ಕೆ– 99809 91110, bengaluruananya@gmail.com,

**

ಗಾಂಧಿ ಬಜಾರ್‌ ಮತ್ತು ಮಲ್ಲೇಶ್ವರ ಬೆಂಗಳೂರಿನಲ್ಲಿ ನನಗೆ ಹೆಚ್ಚು ಆಪ್ತವಾದ ಸ್ಥಳಗಳು. ಗಾಂಧಿ ಬಜಾರ್‌ನಲ್ಲಿ ಮರಗಳ ಕೆಳಗೆ ವಾಕ್‌ ಮಾಡುವುದೂ ಖುಷಿ ನೀಡುತ್ತದೆ. ಮಲ್ಲೇಶ್ವರದಲ್ಲಿ 4 ಹಾಗೂ 6ನೇ ಮುಖ್ಯರಸ್ತೆ, ಸ್ಯಾಂಕಿ ಟ್ಯಾಂಕ್‌ ನನಗೆ ವಿಶೇಷ. ಬೆಂಗಳೂರಿನ ಹಳೆಯ ಸೊಗಡು ಹೆಚ್ಚು ಉಳಿದಿರುವುದು ಈ ಸ್ಥಳಗಳಲ್ಲಿಯೇ ಎನಿಸುತ್ತದೆ.

-‘ಅನನ್ಯ’ ರಾಘವೇಂದ್ರ

 

ಪ್ರತಿಕ್ರಿಯಿಸಿ (+)