ಶುಕ್ರವಾರ, ಡಿಸೆಂಬರ್ 6, 2019
25 °C
ಅಲ್ಪಾವಧಿ ಬೆಳವಣಿಗೆಯಲ್ಲಿ ಭಾರತದ ನಗರಗಳು ಮುಂದೆ

ಹೈದರಾಬಾದ್‌ ಪ್ರಥಮ, ಬೆಂಗಳೂರು ದ್ವಿತೀಯ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ ಪ್ರಥಮ, ಬೆಂಗಳೂರು ದ್ವಿತೀಯ

ನವದೆಹಲಿ : ಅಲ್ಪಾವಧಿಯಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡ ಜಗತ್ತಿನ 30 ನಗರಗಳ ಪಟ್ಟಿಯಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ ಎಂದು ಜಾಗತಿಕ ರಿಯಲ್‌ ಎಸ್ಟೇಟ್‌ ಹೂಡಿಕೆ ಸಲಹಾ ಸಂಸ್ಥೆ ಜೋನ್ಸ್‌ ಲ್ಯಾಂಗ್‌ ಲಾಸಲ್ಲೆ (ಜೆಎಲ್‌ಎಲ್‌) ಭಾನುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

ಜೆಎಲ್‌ಎಲ್‌ನ ‘ನಗರ ಬೆಳವಣಿಗೆ ಸೂಚ್ಯಂಕ (ಸಿಎಂಐ) 2018’ ಆಧರಿತ ಅಲ್ಪಾವಧಿ ಬೆಳವಣಿಗೆ ರ‍್ಯಾಂಕಿಂಗ್‌ ವಾರ್ಷಿಕ ಪಟ್ಟಿಯಲ್ಲಿ ದೇಶದ ಪ್ರಮುಖ ನಗರಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ ಸಂಗತಿ.

ಹೈದರಾಬಾದ್‌ ಮತ್ತು ಬೆಂಗಳೂರು ಜತೆಗೆ ಪುಣೆ, ಕೋಲ್ಕತ್ತ, ದೆಹಲಿ ಮೊದಲ ಹತ್ತು ನಗರಗಳಲ್ಲಿ ಸ್ಥಾನ ಪಡೆದಿವೆ. ಚೆನ್ನೈ ಮತ್ತು ಮುಂಬೈ 20 ನಗರಗಳಲ್ಲಿ ಸ್ಥಾನ ಪಡೆದಿವೆ.

ಆರ್ಥಿಕತೆ, ರಿಯಲ್‌ ಎಸ್ಟೇಟ್‌ ಪ್ರಗತಿ ಮಾನದಂಡ: ಇತ್ತೀಚಿನ ದಿನಗಳಲ್ಲಿ ತೀವ್ರ ಬೆಳವಣಿಗೆ ಕಾಣುತ್ತಿರುವ ನಗರಗಳ ಆರ್ಥಿಕತೆ ಮತ್ತು ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಪ್ರಗತಿಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗಿದೆ ಎಂದು ಜೆಎಲ್‌ಎಲ್‌ ವರದಿ ಹೇಳಿದೆ.

ಮಾನವ ಸಂಪನ್ಮೂಲ, ಸಂಪರ್ಕ, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ, ಆಸ್ತಿಗಳ ಬೆಲೆ, ಕಾರ್ಪೊರೇಟ್‌ ಚಟುವಟಿಕೆ, ನಿರ್ಮಾಣ ಚಟುವಟಿಕೆ ಮತ್ತು ಚಿಲ್ಲರೆ ಮಾರಾಟ ಮಾರುಕಟ್ಟೆ ಮುಂತಾದ ಮಾನದಂಡಗಳಲ್ಲಿ ಭಾರತದ ನಗರಗಳು ಉತ್ತಮ ಸಾಧನೆ ತೋರಿವೆ.

ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದ ಈ ನಗರಗಳು ಉತ್ತಮ ಆರ್ಥಿಕ ಬೆಳವಣಿಗೆ ಸಾಧಿಸಿದ್ದು, ಬಂಡವಾಳ ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ನೆಚ್ಚಿನ ತಾಣಗಳಾಗಿ ಹೊರಹೊಮ್ಮಿವೆ. ಈ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರಗಳು ಅನುದಾನ ನೀಡಿವೆ ಎಂದು ವರದಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಮುಂದಿರುವ ಸವಾಲುಗಳು: ಉತ್ತಮ ಬೆಳವಣಿಗೆ ನಡುವೆಯೂ ಈ ಏಳೂ ನಗರಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ಭವಿಷ್ಯದಲ್ಲಿ ದೀರ್ಘಾವಧಿ ಬೆಳವಣಿಗೆ ಕಾಣಲಿವೆ ಎಂದು ಜೆಎಲ್‌ಎಲ್‌ ಇಂಡಿಯಾ ಮುಖ್ಯಸ್ಥ ರಮೇಶ್‌ ನಾಯರ್‌ ಸಲಹೆ ಮಾಡಿದ್ದಾರೆ.

ಮೂಲಸೌಕರ್ಯಗಳ ಕೊರತೆ, ಆರ್ಥಿಕ ಅಸಮತೋಲನ, ವಸತಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಗುಣಮಟ್ಟದ ಭೌತಿಕ ಮತ್ತು ತಾಂತ್ರಿಕ ಮೂಲಸೌಲಭ್ಯ, ಪಾರದರ್ಶಕ ಆಡಳಿತ, ಜೀವನಮಟ್ಟ ಸುಧಾರಣೆ, ಬೆಲೆ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ನಾಯರ್‌ ಕಿವಿಮಾತು ಹೇಳಿದ್ದಾರೆ.

**

ಐ.ಟಿ, ರಿಯಲ್‌ ಎಸ್ಟೇಟ್‌ ಕಾರಣ

ಮಾಹಿತಿ ತಂತ್ರಜ್ಞಾನ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಿಂದಾಗಿ ಹೈದರಾಬಾದ್‌ ಮತ್ತು ಬೆಂಗಳೂರು ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿವೆ.

ವಾಣಿಜ್ಯ ಮತ್ತು ಕಚೇರಿ ಸ್ಥಳಗಳ ಮಾರುಕಟ್ಟೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಕಚೇರಿ ಸ್ಥಳಗಳ ಗುತ್ತಿಗೆ ವಹಿವಾಟು ಇಲ್ಲಿ ದೊಡ್ಡದಾಗಿ ನಡೆಯುತ್ತಿದೆ.

ಬಹುರಾಷ್ಟ್ರೀಯ ಸಂಸ್ಥೆಗಳ ಮೆಚ್ಚಿನ ಹೊರಗುತ್ತಿಗೆ ತಾಣಗಳಾಗಿರುವ ಈ ಎರಡೂ ನಗರಗಳು ಜಾಗತಿಕ ಕಂಪನಿಗಳಿಗೆ ಪೂರಕವಾದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಹೊಂದಿವೆ.

**

ಅಲ್ಪಾವಧಿ ಬೆಳವಣಿಗೆ ಸೂಚ್ಯಂಕ’ದಲ್ಲಿ ಭಾರತದ ನಗರಗಳು ಅತ್ಯುತ್ತಮ ಸಾಧನೆ ತೋರಿವೆ. ಭವಿಷ್ಯದಲ್ಲಿ ದೀರ್ಘಾವಧಿ ಹೂಡಿಕೆ ತಾಣಗಳಾಗಿ ಬೆಳವಣಿಗೆ ಕಾಣುವ ಎಲ್ಲ ಸಾಧ್ಯತೆಗಳಿವೆ

ರಮೇಶ್‌ ನಾಯರ್‌ , ಜೆಎಲ್‌ಎಲ್‌ ಇಂಡಿಯಾ

ಪ್ರತಿಕ್ರಿಯಿಸಿ (+)