ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳು ಆತ್ಮಕಥಾನಕಗಳು

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶರಣರ ವಚನಗಳು ಆತ್ಮಕಥಾನಕಗಳು. ಅವರು ಲೋಕವನ್ನು ವಿವರಸಿಕೊಂಡದ್ದಕ್ಕಿಂತ ಹೆಚ್ಚಾಗಿ ತಮ್ಮನ್ನು ತಮ್ಮ ನಡೆ ನುಡಿಯನ್ನು ವಿವರಿಸಿಕೊಂಡವರು. ಆ ಮುಖೇನ ಬದುಕನ್ನು ವ್ಯಾವರ್ಣಿಸಿದವರು. ಇದು ಸಿದ್ಧಾಂತ ಮುಖಿಯಾದ ಬಾಳುವೆಯಲ್ಲ; ಅನುಭವ ಭೂಮಿಕೆಯಲ್ಲಿ ಬದುಕಿನ ಅರ್ಥ ಹುಡುಕಿದ ಬಾಳುವೆ. ಹೀಗಾಗಿ ವಚನ ರಚನೆಯೆಂದರೆ ಅನುಭವ ದ್ರವ್ಯದಲ್ಲಿ ಆಲೋಡನೆಗೊಂಡದ್ದು. ಆಲೋಡನೆ ಅಂದರೆ ಚಿಂತನೆ; ಮಥಿಸಿ ಮಥಿಸಿ ಫಲಿಸಿದ ಚಿಂತನೆ. ಇದನ್ನು ಸಂವೇದನಾಶೀಲ ಮನಸ್ಸು ಮಾತ್ರ ಮಾಡಬಲ್ಲುದು. ಆದ್ದರಿಂದ ವಚನಕಾರರು ಸಂವೇದನಾಶೀಲ ಮನೋಧರ್ಮವನ್ನು ಒಳಗೊಂಡವರು. ತಲೆಯಿಂದ ಮಾತನಾಡಿದವರಲ್ಲ ಹಾಗೆಯೇ ಬರೀ ಹೃದಯದಿಂದ ಮಾತನಾಡಿದವರೂ ಅಲ್ಲ. ತಲೆ ಮತ್ತು ಹೃದಯಗಳ ಸಂಘರ್ಷ ಸಾಂಗತ್ಯದಲ್ಲಿ ಮಾತು ಫಲಿಸಿದವರು. ಇದನ್ನೇ ಕುವೆಂಪು ಬುದ್ಧಿ ಭಾವಗಳ ವಿದ್ಯುದಾಲಿಂಗನ ಪ್ರತಿಭೆ ಎಂದು ಕರೆದಿದಾರೆ. ಅಂದರೆ ಪ್ರತಿಭೆ ಎಂಬುದು ಭಾವಾವೇಶದ ಬೊಬ್ಬೆಯಲ್ಲ ಒಣ ವೈಚಾರಿಕ ಚರ್ಚೆಯಲ್ಲ; ಇವೆರೆಡರ ವಿದ್ಯುದಾಲಿಂಗನ ಸಂಲಗ್ನದ ಫಲಿತರೂಪ, ಇದು ಬೆಳಗು, ಮಹಾ ಬೆಳಗು. ಇಂಥ ಬೆಳಗು ತನ್ನ ವ್ಯಾಪ್ತಿಯ ಕತ್ತಲನ್ನು ಕಳೆದು ವಾಸ್ತವವನ್ನು ಕಾಣಿಸುತ್ತದೆ. ಈ ವಾಸ್ತವವೆಂಬುದು ಅರಿವು ಕಂಡ ಬೆರಗು. ಇಂಥ ಬೆರಗನ್ನು ವ್ಯಾವರ್ಣಿಸ ತೊಡಗಿದಂತೆ ಮೂಡಿದ ರಚನೆಗಳು ವಚನಗಳು. ಹೀಗಾಗಿ ಸ್ವಾನುಭವದ ಭೂಮಿಕೆಯಲ್ಲಿ ಬೇರುಬಿಟ್ಟಂತೆ ಲೋಕಾನುಭವದ ಟೊಂಗೆ ಟಿಸಿಲುಗಳಲ್ಲಿ ಉಸಿರಾಡಿದ ಹಸಿರು ಹೂವು ಕಾಯಿ ಹಣ್ಣು ಇವು. ಕಣ್ಣಿಗೆ ಕಾಣದ ಭೂಮಿಯಾಳದ ಬೇರಿನ ಬದುಕು ಕಣ್ಣಿಗೆ ಕಾಣುವ ಹಸಿರೇ ಉಸಿರಾದ ಋತುಫಲದ ಬದುಕು ಇಂಥ ತರು ಪ್ರಜ್ಞೆಯ ಚಾಕ್ಷುಷ ಸ್ವರೂಪಗಳು ವಚನಗಳು. ಬಸವಣ್ಣನವರ ವಿಚಾರ ಪತ್ನಿ ಎಂದು ಹೆಸರಾದ ನೀಲಮ್ಮನವರ ಒಂದು ವಚನ ಇಂತಿದೆ.
ಮಾಯದ ಮನದ ಕರ್ಮದ ಹಂಗ ಹರಿದು
ಅನುಭವವ ನನ್ನಲ್ಲಿಯಡಗಿಸಿ
ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯಾ
ನಮಸ್ಕಾರವನಳಿದು
ವಿಶ್ವರೂಪಳಾದೆನಯ್ಯಾ ಸಂಗಯ್ಯಾ.

ತನ್ನನ್ನು ತಾನು ನಿರ್ವಚಿಸಿಕೊಳ್ಳುತ್ತಿರುವ ಈ ವಚನದಲ್ಲಿ ನಿಸರ್ಗ ಧರ್ಮಕ್ಕೆ ತೆರೆದುಕೊಂಡ ಮರದ ಮನಸ್ಥಿತಿಯ ಅನುಶೀಲನಾ ಗುಣವಿದೆ. ಇಲ್ಲಿ ಅಹಂಕಾರದ ಠೇಂಕಾರವಿಲ್ಲ; ಸದುವಿನಯದ ಸ್ವಭಾವಾನುಸಾರಿ ಗತಿಯಿದೆ. ಬುದ್ಧಿ ಭಾವಗಳ ವಿದ್ಯುದಾಲಿಂಗನ ಪ್ರಭೆಯಿದೆ. ಈ ಪ್ರಭೆಯ ಸ್ವರೂಪದ ಬಗ್ಗೆ ನೀಲಮ್ಮನೇ ತನ್ನ ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾಳೆ.

ಮಾತನಳಿದು ಮನವಳಿದು ಭೀತಿಯ ಕಳೆದು ಪ್ರಸಂಗವ ಕಳೆದು
ಪ್ರಸಾದವಳಿದು ಪ್ರಸನ್ನಹಿಂಗಿ ಪ್ರಭೆಯ ಕಂಡು
ಗಮನ ನಿರ್ಗಮನವಾಯಿತ್ತಯ್ಯಾ
ಸಂಗಯ್ಯಾ ನಿಮ್ಮ ಬಸವನ ಹಂಗ ಕಳೆದೆ ನಾನು.

ಇಲ್ಲಿಯ ಕಳೆದುಕೊಳ್ಳುವ ಪಡೆದುಕೊಳ್ಳುವ ಕಾಣದಾಗುವ ಕಂಡುಕೊಳ್ಳುವ ಪ್ರಯಾಣದ ಗತಿ ಪರಂಜ್ಯೋತಿ ವಸ್ತುವ ಕಂಡು ಬದುಕುವ ಬದುಕನರಿತು ಬದುಕುವ ಪರಿಗತಿಯದು. ಇದು ನಿಸರ್ಗ ಧರ್ಮವನರಿತಂತೆ ನಿಸರ್ಗ ಧರ್ಮಕ್ಕೆ ಎರವಾಗದಂತೆ ಬದುಕುವ ಪರಿ. ಇದು ವಚನ ಧರ್ಮದ ದಾರಿಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT