ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರದಿಂದ ಜೆಡಿಎಸ್‌ ಪ್ರಚಾರ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪಾಂಡವಪುರ: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನದಂದು ಪಾಂಡವಪುರ ನೆಲದಿಂದ ಅಧಿಕೃತವಾಗಿ ನಮ್ಮ ಪಕ್ಷದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇವೆ’ ಎಂದು ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಘೋಷಣೆ ಮಾಡಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್‌ ರೈತ ಚೈತನ್ಯ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಸಿ.ಎಸ್‌. ಪುಟ್ಟರಾಜು ಅವರಿಗೆ ವಹಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಎನ್‌. ಚಲುವರಾಯಸ್ವಾಮಿ ಅವರನ್ನು ನಂಬಿ ಜಿಲ್ಲೆಯ ನಾಯಕನನ್ನಾಗಿ ಬೆಳೆಸಿದ್ದರು. ಆದರೆ, ಚಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕಿ ಮಿತ್ರದ್ರೋಹಿಯಾದರು. ಹೀಗಾಗಿ ಪುಟ್ಟರಾಜು ಅವರ ಸಂಸತ್‌ ಸದಸ್ಯತ್ವದ ಅವಧಿ ಒಂದು ವರ್ಷ ಬಾಕಿ ಇದ್ದರೂ ಅವರನ್ನೇ ವಿಧಾನಸಭಾ ಚುನಾವಣಾ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುತ್ತಿದ್ದೇವೆ’ ಎಂದರು.

‘ಜಮೀರ್‌ ಅಹಮದ್‌ ಖಾನ್‌ಗೆ ಸರಿಸಮನಾದ ಪೈಲ್ವಾನ್‌ ಒಬ್ಬನನ್ನು ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್‌ ಸೇರಿ ನಮಗೆ ಸರಿಸಮನಾದವರು ಯಾರೂ ಇಲ್ಲ ಎಂದು ಮೆರೆಯುತ್ತಿದ್ದಾರೆ. ಅವರ ಕ್ಷೇತ್ರದಲ್ಲೇ ಅವರಿಗೆ ಸಮನಾದ ನಾಯಕರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳುತ್ತಿದ್ದೇವೆ. ನಾನಾಗಲೀ, ಕುಮಾರಸ್ವಾಮಿ ಆಗಲೀ ಜೆಡಿಎಸ್‌ಗೆ ನಾಯಕರಲ್ಲ. ಕಾರ್ಯಕರ್ತರೇ ನಮಗೆ ನಾಯಕರು. ಜೆಡಿಎಸ್‌ಗೆ ಮತ ಹಾಕುವುದು ವ್ಯರ್ಥ ಎಂದು ಬಿಜೆಪಿಯ ಅಮಿತ್‌ ಶಾ ಹೇಳಿದ್ದಾರೆ. ಅವರ ತಂತ್ರಗಾರಿಕೆ ಇಲ್ಲಿ ನಡೆಯದು’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್‌ ಮುಖಂಡ ಪಿ.ಜಿ.ಆರ್. ಸಿಂಧ್ಯ, ‘ನೀವು ಸಮಾಜವಾದಿ ಎನ್ನುತ್ತೀರಿ. ಸಮಾಜ ಒಡೆಯುವ ಕೆಲಸ ಮಾಡುತ್ತೀರಿ. ರೈತ, ದಲಿತ, ಅಲ್ಪಸಂಖ್ಯಾತರ ಪರ ಎನ್ನುತ್ತೀರಿ. ಅವರಿಗೆ ನೀವು ಕೊಟ್ಟಿರುವ ಕೊಡುಗೆ ಏನು? ಆನಂದ್‌ ಸಿಂಗ್‌ ಗಣಿ ಅಕ್ರಮದ ವಿರುದ್ಧ ಪಾದಯಾತ್ರೆ ಮಾಡಿದಿರಿ. ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿರಿ. ಯಾಕ್ರೀ ನಿಮಗೆ ಎರಡು ನಾಲಗೆ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷರಿಂದ ಹಣ ಹಂಚಿಕೆ’

ಕೊರಟಗೆರೆ: ‘ವಿಕಾಸ ಪರ್ವ ಸಮಾವೇಶಕ್ಕೆ ಹೆಚ್ಚಿನ ಜನರು ಸೇರದಂತೆ ತಡೆಯಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ₹ 23 ಲಕ್ಷ ಹಂಚಿದ್ದಾರೆ. ಮಾದರಿ ನೀತಿ ಸಂಹಿತೆ ಕಾಪಾಡಬೇಕಾದ ಚುನಾವಣಾ ಅಧಿಕಾರಿಗಳಿಗೆ ಇದು ಏಕೆ ಕಂಡಿಲ್ಲ?’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಭಾನುವಾರ ಇಲ್ಲಿ ಜೆಡಿಎಸ್ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿದ ಅವರು, ‘ತುಂಬಾಡಿ ಗ್ರಾಮದಲ್ಲಿ ಪ್ರತಿ ಬೂತ್‌ಗೆ ತಲಾ ₹ 10 ಸಾವಿರದಂತೆ ಹಂಚಿದ್ದಾರೆ. ಹಣ ತೆಗೆದುಕೊಂಡು ಮನೆಯಲ್ಲೇ ಊಟ ಮಾಡಿಕೊಳ್ಳಿ ಎಂದು ಹೇಳಿರುವುದಾಗಿ ಜೆಡಿಎಸ್ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT