ಶುಕ್ರವಾರ, ಡಿಸೆಂಬರ್ 6, 2019
18 °C

ಪೊಲೀಸ್ ವೆಬ್‌ಸೈಟ್‌ ಹ್ಯಾಕ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ವೆಬ್‌ಸೈಟ್‌ ಹ್ಯಾಕ್‌?

ಮೈಸೂರು: ನಗರ ಪೊಲೀಸರ ವೆಬ್‌ಸೈಟನ್ನು ಭಾನುವಾರ ‘ಹ್ಯಾಕ್‌’ ಮಾಡಿದ ದುಷ್ಕರ್ಮಿಗಳು, ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಪೋಸ್ಟ್‌ ಅನ್ನು ಹೋಮ್‌ಪೇಜ್‌ನಲ್ಲಿ ಪ್ರಕಟಿಸಿದ್ದಾರೆ.

ವೆಬ್‌ಸೈಟ್‌ (www.mysorecitypolice.gov.in) ಹ್ಯಾಕ್‌ ಆಗಿರುವುದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪೊಲೀಸರ ಗಮನಕ್ಕೆ ಬಂದಿದೆ. ಹೊಸ ಪೇಜ್‌ ಸೃಷ್ಟಿಸಿದ ದುಷ್ಕರ್ಮಿಗಳು ‘ಮೈಸೂರು ಸಿಟಿ ಪೊಲೀಸ್ ವೆಬ್‌ಸೈಟ್‌– ಗೌವರ್ನಮೆಂಟ್‌ ಆಫ್‌ ಇಂಡಿಯಾ #ಹ್ಯಾಕ್ಡ್‌’ ಎಂದು ಪ್ರಕಟಿಸಿದ್ದಾರೆ.

ಭಾರತದ ತ್ರಿವರ್ಣ ಧ್ವಜವನ್ನು ಕಾಲಿನಲ್ಲಿ ತುಳಿಯುತ್ತಿರುವ ಚಿತ್ರವೊಂದು ಹೋಮ್‌ ಪೇಜ್‌ನಲ್ಲಿ ಪ್ರಕಟವಾಗಿದೆ. ಕೆಳಭಾಗದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ನಮೂದಿಸಲಾಗಿದೆ. ಶನಿವಾರ ತಡರಾತ್ರಿ ವೆಬ್‌ಸೈಟ್‌ನಲ್ಲಿ ಇದು ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ಪೊಲೀಸರಿಗೆ ಇದು ಗಮನಕ್ಕೆ ಬಂದಿದೆ. ತಕ್ಷಣ ಈ ಮಾಹಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತುಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಪೋಸ್ಟ್‌ ತೆಗೆದುಹಾಕಿದ್ದಾರೆ. ಸಂಜೆಯ ಬಳಿಕ ವೆಬ್‌ಸೈಟ್‌ ಮಾಮೂಲಿಯಂತೆ ಕಾರ್ಯನಿರ್ವಹಿಸುತ್ತಿದೆ.

‘ಪೊಲೀಸ್‌ ವೆಬ್‌ಸೈಟ್‌ ಹ್ಯಾಕ್‌ ಆಗಿಲ್ಲ. ವೈರಸ್‌ ದಾಳಿಯಿಂದ ಈ ಸಮಸ್ಯೆ ಉಂಟಾಗಿದೆ. ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಗೆ ಮಾಹಿತಿ ನೀಡಲಾಗಿದ್ದು, ಸರಿಪಡಿಸಲಾಗಿದೆ. ಇದರಿಂದ ಯಾವುದೇ ಮಾಹಿತಿಗೆ ಹಾನಿಯಾಗಿಲ್ಲ’ ಎಂದು ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)