ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನು ಸಡಿಲಗೊಳಿಸಲು ಕ್ರಮ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ದಿಮೆದಾರರಿಗೆ ಅನುಕೂಲ ಆಗುವಂತೆ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಬಿಜೆಪಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಪ್ರಕೋಷ್ಠದಿಂದ ನಗರದ ಕಾಸಿಯಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ನವ ಕರ್ನಾಟಕ ಜನಪರ ಶಕ್ತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಮಿಕರಿಗೆ ಕನಿಷ್ಠ ವೇತನ ಸೌಲಭ್ಯ ನೀಡಬೇಕೆಂಬ ಕಾನೂನು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೂ ಅನ್ವಯವಾಗುತ್ತಿದೆ. ಒಟ್ಟು 38 ಕಾರ್ಮಿಕ ಕಾನೂನುಗಳನ್ನು
ಉದ್ಯಮಿಗಳ ಮೇಲೆ ಹೇರಲಾಗಿದೆ. ಇದನ್ನು ಪಾಲಿಸುವುದು ಕಷ್ಟವಾಗುತ್ತಿದೆ ಎಂಬುದನ್ನು ಉದ್ಯಮಿಗಳು ನನ್ನ ಗಮನಕ್ಕೆ ತಂದಿದ್ದಾರೆ’ ಎಂದು ಹೇಳಿದರು.

ಕಾನೂನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಕಾರ್ಮಿಕ ಇಲಾಖೆಯಲ್ಲಿ ಸಮಿತಿ ಕೂಡ ರಚನೆಯಾಗಿದೆ ಎಂದು ಹೇಳಿದರು.

ಪುನರ್ವಸತಿ ಕೇಂದ್ರಗಳಾಗಿರುವ ನ್ಯಾಯಮಂಡಳಿ: ವಿವಾದಕ್ಕೊಂದು ನ್ಯಾಯಮಂಡಳಿ ರಚನೆ ಮಾಡುವುದು ಹವ್ಯಾಸವಾಗಿದೆ. ಎಲ್ಲ ನದಿಗಳ ಹೆಸರಿನಲ್ಲೂ ನ್ಯಾಯ ಮಂಡಳಿಗಳಿದ್ದು, ಅವು ಕೆಲವರಿಗೆ ಪುನರ್ವಸತಿ ಕೇಂದ್ರಗಳೂ ಆಗಿವೆ. ಒಟ್ಟು 37 ನ್ಯಾಯ ಮಂಡಳಿಗಳಿದ್ದು, ಈ ಪೈಕಿ 16 ಅನ್ನು ಮಾತ್ರ ಉಳಿಸಿಕೊಳ್ಳುವ ಚಿಂತನೆ ಇದೆ ಎಂದರು. ‘ನರೇಂದ್ರ ಮೋದಿ ಪ್ರಧಾನಿಯಾದ ನಂತರ 1,187 ಕಾನೂನುಗಳನ್ನು ಕೈಬಿಟ್ಟಿದ್ದೇವೆ. ಅನಗತ್ಯ ಗೊಂದಲ ಸೃಷ್ಟಿಸುವ ಇನ್ನಷ್ಟು ಕಾನೂನುಗಳನ್ನು ಕಾನೂನು ಪುಸ್ತಕದಿಂದ ತೆಗೆಯಲು ನಿರ್ಧಾರ ಮಾಡಿದ್ದೇವೆ’ ಎಂದು ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ‘ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ಯಮಿಗಳ ಪರವಾಗಿ ಕೇಂದ್ರ ಸರ್ಕಾರ ಇದ್ದು, ಎಲ್ಲ ಬೇಡಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಭೆ ನಡೆಸಲಾಗುವುದು’ ಎಂದರು.

‘ಸೀಸನಲ್ ಭಕ್ತರು’
‘ಚುನಾವಣೆ ಸಂದರ್ಭದಲ್ಲಿ ದೇಗುಲಕ್ಕೆ ಹೋಗುವ ಸೀಸನಲ್  ಭಕ್ತರು ಹುಟ್ಟಿಕೊಂಡಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ್, ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಲೇವಡಿ ಮಾಡಿದರು. ‘ನಾವು ಹುಟ್ಟಿನಿಂದಲೇ ಭಕ್ತರು. ಪ್ರತಿ ದಿನ ಮಠ–ಮಂದಿರಗಳಿಗೆ ಹೋಗುತ್ತೇವೆ. ಕೆಲವರು ಚುನಾವಣೆ ಭಕ್ತರು ಇದ್ದಾರೆ’ ಎಂದು ಹೇಳಿದರು.

**

ಕಾರ್ಮಿಕ ಕಾನೂನುಗಳ 38ರ ಪೈಕಿ ಉದ್ಯಮಿ ಸ್ನೇಹಿಯಾದ 9ರಿಂದ 10 ಕಾನೂನುಗಳನ್ನು ಮಾತ್ರ ಉಳಿಸಿಕೊಳ್ಳಲಾಗುವುದು
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT