ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಚಿತ್ರ ಮರೆಮಾಚಿದ ಅಧಿಕಾರಿಗಳು

ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ
Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಇಂದಿರಾ ಗಾಂಧಿ ಭಾವಚಿತ್ರಗಳನ್ನು ಅಧಿಕಾರಿಗಳು ಭಾನುವಾರ ಮರೆಮಾಚಿದ್ದಾರೆ.

ಕ್ಯಾಂಟೀನ್‌ಗಳಲ್ಲಿ ಅಳವಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನು ತೆರವುಗೊಳಿಸಿದ್ದಾರೆ.

ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ರಾಷ್ಟ್ರೀಯ ನಾಯಕರು ನಿಧನರಾಗಿ ಹಲವಾರು ವರ್ಷಗಳು ಕಳೆದಿದ್ದರೆ, ಅವರ ಭಾವಚಿತ್ರವನ್ನು ತೆಗೆಯುವ ಅಗತ್ಯವಿಲ್ಲ. ಇಂದಿರಾ ಭಾವಚಿತ್ರವನ್ನು ತೆರವುಗೊಳಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.ಆದರೆ, ದಾಸರಹಳ್ಳಿ ವಲಯದ ಮಲ್ಲಸಂದ್ರ ವಾರ್ಡ್‌ನ ಕ್ಯಾಂಟೀನ್‌ನಲ್ಲಿ ಇಂದಿರಾ ಭಾವಚಿತ್ರವಿರುವ ಗೋಡೆಯನ್ನು ಪೇಪರ್‌ ಶೀಟ್‌ಗಳಿಂದ ಮುಚ್ಚಲಾಗಿದೆ.

‘ನಿಯಮಗಳ ಪ್ರಕಾರ, ಈಗಿನ ರಾಜಕಾರಣಿಗಳ ಚಿತ್ರಗಳನ್ನು ತೆರವುಗೊಳಿಸಬಹುದು. ಆದರೆ, ನಿಧನರಾಗಿರುವವರ ಚಿತ್ರಗಳನ್ನು ತೆರವುಗೊಳಿಸುವ ಅಗತ್ಯವಿಲ್ಲ. ಕ್ಯಾಂಟೀನ್‌ನಲ್ಲಿ ಇಂದಿರಾ ಚಿತ್ರಗಳಿದ್ದರೆ, ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.
**
ಸೀರೆ, ಹೊಲಿಗೆ ಯಂತ್ರ ವಶ
ಮತದಾರರಿಗೆ ವಿತರಿಸುವ ಸಲುವಾಗಿ ದಾಸ್ತಾನು ಮಾಡಿದ್ದ ಸೀರೆ, ಹೊಲಿಗೆ ಯಂತ್ರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಅಧಿಕಾರಿಗಳು ಶನಿವಾರ ರಾತ್ರಿ ವಶ ಪಡಿಸಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆಯ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಸುಮಾರು 100 ಕುಕ್ಕರ್‌ಗಳು ಮತ್ತು 350 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಬಾಕ್ಸ್‌ಗಳ ಮೇಲೆ ಶಾಸಕ ಮುನಿರತ್ನ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಕೆಲ ಬಾಕ್ಸ್‌ಗಳ ಮೇಲೆ ‘ಮುನಿರತ್ನ ಕುರುಕ್ಷೇತ್ರ’ ಚಲನಚಿತ್ರದ ಪೋಸ್ಟರ್‌ಗಳಿವೆ.


ಲಗ್ಗೆರೆಯಲ್ಲಿ ವಶಪಡಿಸಿಕೊಂಡ ಕುಕ್ಕರ್‌ ಹಾಗೂ ಸೀರೆಗಳು

ಮಹದೇವಪುರ ಕ್ಷೇತ್ರದ ಚೀಮಸಂದ್ರದ ಗೋದಾಮು ಒಂದರಲ್ಲಿ 100ಕ್ಕಿಂತ ಹೆಚ್ಚಿನ ಹೊಲಿಗೆ ಯಂತ್ರಗಳು ಹಾಗೂ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಲಿಗೆ ಯಂತ್ರಗಳನ್ನು ವಿತರಿಸಲು ಕಾಂಗ್ರೆಸ್‌ ಮುಖಂಡರು ಸಿದ್ಧತೆ ನಡೆಸಿದ್ದರು. ಪ್ಲಾಸ್ಟಿಕ್‌ ಬಕೆಟ್‌ಗಳನ್ನು ಬಿಜೆಪಿ ಮುಖಂಡರು ದಾಸ್ತಾನಿಟ್ಟಿದ್ದರು.

ಮಲ್ಲೇಶ್ವರದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಭಾವಚಿತ್ರಗಳಿದ್ದ 220 ನೀರಿನ ಕ್ಯಾನ್‌ಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ನೇತೃತ್ವದಲ್ಲಿ ಕೆ.ಆರ್‌.ಪುರ ತಹಶೀಲ್ದಾರ್‌ ರಾಮಲಕ್ಷ್ಮಣ್‌ ತಂಡವು ಇಲ್ಲಿನ ಕೆಲ ಗ್ರಾಮಗಳ ಗೋದಾಮುಗಳಿಗೆ ದಾಳಿ ನಡೆಸಿ ₹3.65 ಲಕ್ಷ ಮೌಲ್ಯದ 70 ಹೊಲಿಗೆ ಯಂತ್ರಗಳು ಹಾಗೂ 159 ಬಕೆಟ್‌ಗಳನ್ನು ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT