ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರಿಗೂ ಟಿಕೆಟ್‌ ಕೊಡಿ

Last Updated 1 ಏಪ್ರಿಲ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರಿಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದರು.

ವಿಧಾನಸಭಾ ಚುನಾವಣೆಗೆ ಬ್ರಾಹ್ಮಣ ಸಮುದಾಯಗಳಿಗೆ ಟಿಕೆಟ್‌ ನೀಡುವಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸುವ ಸಲುವಾಗಿ ಮಲ್ಲೇಶ್ವರ ಬ್ರಾಹ್ಮಣ ಸಭಾ ಇಲ್ಲಿ ಭಾನುವಾರ ಆಯೋಜಿಸಿದ್ದ ‘ವಿಪ್ರ ಶಕ್ತಿ–ಮಹಾ ಶಕ್ತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚುನಾವಣೆಯಲ್ಲಿ ಯಾರಿಗೆ ಎಲ್ಲೆಲ್ಲಿ ಟಿಕೆಟ್‌ ನೀಡಬೇಕೆನ್ನುವುದನ್ನು ರಾಜಕೀಯ ಪಕ್ಷಗಳೇ ತೀರ್ಮಾನಿಸಬೇಕು. ಇದನ್ನು ನಾನು ಹೇಳುವುದು ಸರಿಯಲ್ಲ. ನನಗೆ ಎಲ್ಲರೂ ಬೇಕಾದವರೆ. ಜಾತಿವಾರು ಕೊಡಿ ಎಂದು ನಾನು ಹೇಳುವುದಿಲ್ಲ. ಒಂದು ಕಡೆ ಬ್ರಾಹ್ಮಣರಿದ್ದರೆ, ಇನ್ನು ಕೆಲವು ಕಡೆ ಬೇರೆ ಜಾತಿಯವರಿರುತ್ತಾರೆ. ಆದರೆ, ರಾಜಕೀಯ ಪ್ರಾತಿನಿಧ್ಯದಲ್ಲಿ ಬ್ರಾಹ್ಮಣರಿಗೂ ಅನ್ಯಾಯವಾಗಬಾರದು, ಉಳಿದವರಿಗೂ ಅನ್ಯಾಯವಾಗಬಾರದು’ ಎಂದರು.

‘ಮತದಾರರು ಬುದ್ಧಿವಂತರಿದ್ದು, ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗಬಾರದು. ಸ್ವತಂತ್ರವಾಗಿ ವಿಚಾರ ಮಾಡಬೇಕು. ಯಾರಿಗೆ ಮತ ನೀಡಬೇಕು ಎನ್ನುವುದನ್ನು ಬ್ರಾಹ್ಮಣರೆಲ್ಲರೂ ಒಗ್ಗಟ್ಟಿನಿಂದ ತೀರ್ಮಾನಿಸಬೇಕು. ನಾನು ಯಾವುದೇ ವ್ಯಕ್ತಿ ಮತ್ತು ಪಕ್ಷದ ಹೆಸರು ಸೂಚಿಸುವುದಿಲ್ಲ. ಯೋಗ್ಯ ವ್ಯಕ್ತಿಯನ್ನು ನೀವೇ ನಿರ್ಧರಿಸಿ, ಅವರಿಗೆ ಮತ ನೀಡಿ’ ಎಂದು ಹೇಳಿದರು.

‘ಬ್ರಾಹ್ಮಣರು ಮತ್ತು ಉಳಿದವರ ನಡುವೆ ದ್ವೇಷ, ವಿರೋಧ ಬೆಳೆದರೆ ಅದಕ್ಕೆ ಬ್ರಾಹ್ಮಣರೇ ನೇರ ಕಾರಣವೆಂದು ಕೆಲವು ಬುದ್ಧಿಜೀವಿಗಳು ಆರೋಪಿಸುತ್ತಿದ್ದಾರೆ. ಆದರೆ, ನಿಜವಾಗಿಯೂ ಸಮಗ್ರ ಸಮಾಜದ ಕಲ್ಯಾಣಕ್ಕೆ ಬ್ರಾಹ್ಮಣರೇ ಹೋರಾಟ ಮಾಡಿದ್ದಾರೆ. ಅಸ್ಪೃಶ್ಯತೆ ನಿವಾರಣೆಗೂ ಕೆಲಸ ಮಾಡಿದ್ದಾರೆ. ಅವರು ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸಾಮಾನ್ಯ ಜನರಿಗೂ ಅವರ ಮೇಲೆ ದ್ವೇಷವಿಲ್ಲ. ಆದರೆ, ಕೆಲವರು ಬೇಕೆಂದೇ ದ್ವೇಷ ಹುಟ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಲಿಂಗಾಯತ–ವೀರಶೈವ ಬೇರ್ಪಡಿಸಬೇಡಿ’
‘ಲಿಂಗಾಯತರು ಇಷ್ಟಲಿಂಗ ಆರಾಧಕರು, ವೀರಶೈವರು ಮೂರ್ತಿ ಆರಾಧಕರು. ಆದರೆ, ಇವೆರಡೂ ಒಂದೇ. ಶಿವನ ಆರಾಧಕರೆಲ್ಲರೂ ಹಿಂದೂಗಳೇ. ಇವರು ಹಿಂದೂ ಧರ್ಮದಿಂದ ಬೇರೆಯಾಗಬಾರದು’ ಎಂದು ಪೇಜಾವರ ಶ್ರೀಗಳು ಹೇಳಿದರು.

‘ಬ್ರಾಹ್ಮಣರಲ್ಲೂ ಒಳ ಪಂಗಡಗಳಿವೆ. ಆದರೆ, ನಾವು ಎಲ್ಲರೂ ಹಿಂದೂಗಳೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT