ಮಂಗಳವಾರ, ಡಿಸೆಂಬರ್ 10, 2019
17 °C

ಸ್ಟೀಫನ್ಸ್‌ಗೆ ಸಿಂಗಲ್ಸ್‌ ಗರಿ

Published:
Updated:
ಸ್ಟೀಫನ್ಸ್‌ಗೆ ಸಿಂಗಲ್ಸ್‌ ಗರಿ

ಮಿಯಾಮಿ (ಎಎಫ್‌ಪಿ): ಅಮೋಘ ಆಟ ಆಡಿದ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್‌ ಅವರು ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸ್ಟೀಫನ್ಸ್‌ 7–6, 6–1ರ ನೇರ ಸೆಟ್‌ಗಳಿಂದ ಲಾಟ್ವಿಯಾದ ಜೆಲೆನಾ ಒಸ್ತಾಪೆಂಕೊ ಅವರನ್ನು ಸೋಲಿಸಿದರು.

ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಸ್ಟೀಫನ್ಸ್‌ ಮೊದಲ ಸೆಟ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟ ಆಡಿದರು. ಮಿಂಚಿನ ಸರ್ವ್‌ಗಳನ್ನು ಮಾಡಿದ ಅವರು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಗೇಮ್‌ ಜಯಿಸಿದರು.

ಫ್ರೆಂಚ್‌ ಓಪನ್ ಚಾಂಪಿಯನ್‌ ಜೆಲೆನಾ ಕೂಡ ಗುಣಮಟ್ಟದ ಆಟ ಆಡಿ ಸರ್ವ್‌ ಉಳಿಸಿಕೊಂಡು ಸಾಗಿದರು. ಹೀಗಾಗಿ 6–6ರಲ್ಲಿ ಸಮಬಲ ಕಂಡುಬಂತು. 13ನೇ ಗೇಮ್‌ನಲ್ಲಿ ಸ್ಟೀಫನ್ಸ್‌ ಮೋಡಿ ಮಾಡಿದರು. ಅಮೋಘ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು ಸೆಟ್‌ ಗೆದ್ದು ಮುನ್ನಡೆ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಒಸ್ತಾಪೆಂಕೊ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಆರಂಭದ ಎರಡು ಗೇಮ್‌ಗಳಲ್ಲಿ ಉಭಯ ಆಟಗಾರ್ತಿಯರು ಸರ್ವ್‌ ಕಾಪಾಡಿಕೊಂಡರು. ನಂತರ ಸ್ಟೀಫನ್ಸ್‌ ಆಟ ರಂಗೇರಿತು.

ಬೇಸ್‌ಲೈನ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಸತತ ಎರಡು ಗೇಮ್‌ ಜಯಿಸಿದ ಅಮೆರಿಕದ ಆಟಗಾರ್ತಿ 3–1ರ ಮುನ್ನಡೆ ಗಳಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಒಸ್ತಾಪೆಂಕೊ ಹಲವು ತಪ್ಪುಗಳನ್ನು ಮಾಡಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಸ್ಟೀಫನ್ಸ್‌ ನಂತರದ ಮೂರೂ ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದು ಗೆಲುವಿನ ತೋರಣ ಕಟ್ಟಿದರು.

20 ವರ್ಷದ ಒಸ್ತಾಪೆಂಕೊ, 2009ರ ನಂತರ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)