ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಪ್ರೀಮಿಯರ್ ಲೀಗ್‌: ವಿರಾಟ್ ಜೊತೆ ಅಭ್ಯಾಸದ ಪುಳಕ

Last Updated 1 ಏಪ್ರಿಲ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಅಂತೂ ಇಂತೂ ಆ ಇಬ್ಬರೂ ಹುಡುಗರ ಬಹುದಿನಗಳ ಕನಸು ಕೈಗೂಡಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ಅವರ ಆಸೆ ಇದೀಗ ಈಡೇರಿದೆ.

ಧಾರವಾಡದ ಪವನ್ ದೇಶಪಾಂಡೆ ಮತ್ತು ಗದುಗಿನ ಅನಿರುದ್ಧ್‌ ಜೋಶಿ ಅವರೇ ಆ ಹುಡುಗರು. ಭಾನುವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂ ಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಅಭ್ಯಾಸದಲ್ಲಿ ವಿರಾಟ್ ಮತ್ತು  ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಅವರೊಂದಿಗೆ ಅಭ್ಯಾಸ ಮಾಡಿದರು.

ಆರ್‌ಸಿಬಿ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿರುವ ಕರ್ನಾಟಕದ ಪವನ್ ಮತ್ತು ಅನಿರುದ್ಧ್‌ ಅವರಿಗೆ ಟೂರ್ನಿಯ ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವುದು ಖಚಿತವಿಲ್ಲ.  ಆದರೆ ಅವರಿಬ್ಬರಿಗೂ ತಂಡದ ಡ್ರೆಸಿಂಗ್‌ ರೂಮ್‌ನಲ್ಲಿ ದಿಗ್ಗಜರೊಂದಿಗೆ ಇರುವ ಅನುಭವ ಸಿಗಲಿದೆ. ಒಂದೊಮ್ಮೆ ಕಣಕ್ಕಿಳಿಯುವ ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇಬಿಡುವ ಹುಮ್ಮಸ್ಸಿನಲ್ಲಿದ್ದಾರೆ.

ಪವನ್ ಮನದಿಂಗಿತ: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ಧಾರವಾಡದವರು. ಅವರು ಕ್ರಿಕೆಟ್ ಆಡಲು ಆರಂಭಿಸಿದಾಗ ಹುಬ್ಬಳ್ಳಿ–ಧಾರ ವಾಡದಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಆದರೆ ಕನಸುಗಳಿಗೆ ಬರ ಇರಲಿಲ್ಲ.

‘ಹುಬ್ಬಳ್ಳಿಯ ನವನಗರದಿಂದ ನನ್ನ ಕ್ರಿಕೆಟ್‌ ಪಯಣ ಆರಂಭವಾಗಿತ್ತು. ಧಾರವಾಡದ ಕೆ.ಇ. ಬೋರ್ಡ್ಸ್‌ ಶಾಲೆಯಲ್ಲಿ ಓದಿದೆ. ಅಲ್ಲಿ ಕೋಚ್ ವಸಂತ ಮುರ್ಡೇಶ್ವರ್ ಅವರ ಅಕಾಡೆಮಿಯಲ್ಲಿ ಸಿಕ್ಕ ಮಾರ್ಗದರ್ಶನ ಬದುಕು ಬದಲಿಸಿತು. ಕ್ರಿಕೆಟ್ ಆಟವನ್ನು ಗಂಭೀರವಾಗಿ ಪರಿಗಣಿಸಿದೆ. ಬಹಳಷ್ಟು ಶ್ರಮದಿಂದ ಇಲ್ಲಿಯವರಗೆ ಬಂದಿದ್ದೇನೆ’ ಎಂದು ಪವನ್ ಹೇಳುತ್ತಾರೆ.

ಇದೇ ಮೊದಲ ಬಾರಿ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಒಳ್ಳೆಯ ಅನುಭವ ಇರುವ ಅವರು ಚುಟುಕು ಕ್ರಿಕೆಟ್‌ನಲ್ಲಿ ಹೆಜ್ಜೆಗುರುತು ಮೂಡಿಸುವ ಕನಸು ಕಾಣುತ್ತಿದ್ದಾರೆ.

‘ಆರ್‌ಸಿಬಿಗೆ ಆಯ್ಕೆಯಾಗಿದ್ದು ಅದೃಷ್ಟ. ಐಪಿಎಲ್‌ನಲ್ಲಿ ಯಾವುದಾ ದರೂ ಫ್ರ್ಯಾಂಚೈಸ್‌ಗೆ ಆಯ್ಕೆ ಆಗುವ ಭರವಸೆ ಇತ್ತು. ಆದರೆ ತವರಿನ ತಂಡದಲ್ಲಿ ಸಿಕ್ಕಿದ್ದು ಸಂತಸ ಹೆಚ್ಚಿಸಿದೆ. ಬಿಡ್ಡಿಂಗ್ ನಡೆದಿದ್ದ ದಿನ ನಾನು ಮತ್ತು ಅನಿರುದ್ಧ ಬ್ಯಾಂಕ್‌ ಪರೀಕ್ಷೆ ಬರೆಯುತ್ತಿದ್ದೇವು.  ಆಯ್ಕೆ ಬಗ್ಗೆ ತಿಳಿದಾಗ ಅಚ್ಚರಿ ಮತ್ತು ಸಂತಸ ಎರಡೂ ಆಗಿತ್ತು’ ಎಂದು ಪವನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಪಿಎಲ್‌ನಲ್ಲಿ ಆಡುವುದು ವಿಭಿನ್ನ ಅನುಭವ. ಈಚೆಗೆ ನಮಗೆ ಒಂದು ವಾರ ವಿಶೇಷ ತರಬೇತಿ ನೀಡಲಾಗಿತ್ತು. ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೋಚ್ ಡೇನಿಯಲ್ ವೆಟೊರಿ, ಬೌಲಿಂಗ್ ಕೋಚ್ ಆಶಿಶ್‌ ನೆಹ್ರಾ, ಅನುಭವಿ ಆಟಗಾರರಾದ ಮನದೀಪ್ ಸಿಂಗ್, ಸರ್ಫರಾಜ್ ಖಾನ್ ಅವರ ಮಾರ್ಗದರ್ಶನದಿಂದ ಹೊಸದನ್ನು ಕಲಿಯುವ ಅವಕಾಶ ಸಿಕ್ಕಿದೆ’ ಎಂದು ಅನುಭವ ಹಂಚಿಕೊಂಡರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಪವನ್, ಕೊನೆಯ ಹಂತದ ಓವರ್‌ಗಳಲ್ಲಿ ದಿಟ್ಟವಾಗಿ ಬ್ಯಾಟ್‌ ಬೀಸುವ ಕಲೆ ಕಲಿತಿದ್ದಾರೆ. ಆರಂಭಿಕ ವಿಕೆಟ್‌ಗಳು ಬೇಗನೆ ಪತನಗೊಂಡಾಗಲೂ ಕ್ರೀಸ್‌ನಲ್ಲಿ ನಿಂತು ರನ್‌ ಗಳಿಸುವ ಕೌಶಲವನ್ನೂ ಅವರು ವಿಜಯ್ ಹಜಾರೆ ಟ್ರೋಫಿ ಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಅವಕಾಶಕ್ಕಾಗಿ ಕಾದಿದ್ದಾರೆ.

ಬ್ರೆಂಡನ್ ಮೆಕ್ಲಮ್‌ಗೆ ಸ್ವಾಗತ..!

ನ್ಯೂಜಿಲೆಂಡ್ ತಂಡದ ಅಬ್ಬರದ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್‌ ಭಾನುವಾರ ಆರ್‌ಸಿಬಿ ತಂಡವನ್ನು ಸೇರಿಕೊಂಡರು.  ಚಿನ್ನಸ್ವಾಮಿ ಅಂಗಳದಲ್ಲಿ ವಿರಾಟ್ ಜೊತೆಗೆ ಅಭ್ಯಾಸ ಮಾಡಿದರು.

ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಅವರ ಮೇಲೆ ನಿರೀಕ್ಷೆಯ ಭಾರ ಇದೆ. ಈ ಬಾರಿ ತಂಡದಲ್ಲಿ ಕ್ರಿಸ್‌ ಗೇಲ್ ಸ್ಥಾನ ಪಡೆದಿಲ್ಲ. ಅವರು ಪಂಜಾಬ್‌ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಎರಡು ಅಬ್ಬರದ ಶತಕದ ದಾಖಲೆ ಹೊಂದಿರುವ ಬ್ರೆಂಡನ್ ಬೆಂಗಳೂರಿಗರ ಮನ ಗೆಲ್ಲುವರೇ ಎಂಬ ಕುತೂಹಲ ಈಗ ಗರಿಗೆದರಿದೆ. ವಿರಾಟ್. ಎಬಿ. ಡಿವಿಲಿಯರ್ಸ್‌ , ಮನದೀಪ್ ಸಿಂಗ್, ಸರ್ಫರಾಜ್‌ ಖಾನ್ ಅವರೊಂದಿಗೆ ಬ್ರೆಂಡನ್ ಕೂಡ ತಂಡದ ಬ್ಯಾಟಿಂಗ್‌ ವಿಭಾಗದ ಬಲ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT