ಶನಿವಾರ, ಆಗಸ್ಟ್ 8, 2020
22 °C
ಆಮೆಗತಿಯಲ್ಲಿ ಅಭಿವೃದ್ಧಿ ಕಾಮಗಾರಿ, ಜನರ ಪರದಾಟ

ಅಪಾಯ ಆಹ್ವಾನಿಸುವ ರಸ್ತೆ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಾಯ ಆಹ್ವಾನಿಸುವ ರಸ್ತೆ ಸಂಚಾರ

ಚಾಮರಾಜನಗರ: ನಗರದ ದೊಡ್ಡ ಅಂಗಡಿ ಬೀದಿ ಹಾಗೂ ಚಿಕ್ಕ ಅಂಗಡಿ ಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಬೇಕಿದೆ. ಸ್ವಲ್ಪ ಗಮನ ತಪ್ಪಿದರೂ ಗುಂಡಿಯೊಳಗೆ ಬೀಳುವ ಅಪಾಯವಿದೆ. ದೈನಂದಿನ ಬಳಕೆಯ ಸಾಮಗ್ರಿಗಳು, ಮನೆ ಹಾಗೂ ಕಚೇರಿಯಲ್ಲಿ ಬಳ ಸುವ ಅಗತ್ಯ ಮತ್ತು ಐಷಾರಾಮಿ ವಸ್ತುಗಳೆಲ್ಲವೂ ಇಲ್ಲಿನ ಸಾಲು ಸಾಲು ಅಂಗಡಿಗಳಲ್ಲಿ ಲಭ್ಯ. ಆದರೆ, ಕಿರಿದಾಗಿ ರುವ ಮತ್ತು ಸಂಚಾರ ದಟ್ಟಣೆ ಇರುವ ಈ ಬೀದಿಯ ಒಳಹೊಕ್ಕು ಹೊರಬರು ವುದು ಹರಸಾಹಸ ಎಂಬಂತಾಗಿದೆ. ಕಿತ್ತು ಹೋದ ರಸ್ತೆಯಿಂದ ಪಾದಚಾರಿ ಗಳು ಮತ್ತು ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ನಗರೋತ್ಥಾನ ಯೋಜನೆಯಡಿ ಸಂತೇಮರಹಳ್ಳಿ ವೃತ್ತದಿಂದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಮಾರ್ಗವಾಗಿ ಗುಂಡ್ಲುಪೇಟೆ ವೃತ್ತದವರೆಗೆ ₹ 2 ಕೋಟಿ ವೆಚ್ಚದಲ್ಲಿ 40 ಅಡಿಯ ರಸ್ತೆ ನಿರ್ಮಿಸಲಾಗುತ್ತಿದೆ. ಮೊದಲ ಕೆಲವು ದಿನ ವೇಗವಾಗಿ ನಡೆದ ಕಾಮಗಾರಿ ನಂತರ ನಿಂತು ಹೋಗಿದೆ. ಇದರಿಂದ ರಸ್ತೆಯುದ್ದಕ್ಕೂ ಹಳ್ಳ, ದಿಣ್ಣೆಗಳು ಸೃಷ್ಟಿಯಾಗಿವೆ. ಜತೆಗೆ, ರಸ್ತೆಯ ಮಧ್ಯಭಾಗದಲ್ಲಿ ಮ್ಯಾನ್‌ ಹೋಲ್‌ಗಳು ಬಾಯ್ತೆರೆದು ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆಯ ಮೇಲೆಯೇ ಹರಿಯುತ್ತಿರುವ ಚರಂಡಿ ನೀರು: ‘ಮೊದಲು ತೆರೆದ ಚರಂಡಿ ಇತ್ತು. ಕಾಮಗಾರಿಗಾಗಿ ಅದನ್ನು ಬಂದ್‌ ಮಾಡಲಾಗಿದೆ. ಒಳಚರಂಡಿಯ ಮ್ಯಾನ್‌ಹೋಲ್‌ ಮತ್ತು ಕೊಳವೆ ಮಾರ್ಗ ಕೆಲಸ ಮುಗಿದಿದ್ದರೂ, ಅದಕ್ಕೆ ಸಂಪರ್ಕ ನೀಡಿಲ್ಲ. ಹೀಗಾಗಿ, ಕೊಳಚೆ ನೀರು ಹರಿದುಹೋಗಲು ಇಲ್ಲಿ ಜಾಗವೇ ಇಲ್ಲ. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದರೆ ಯಾರು ಕೂಡ ಸ್ಪಂದಿಸುತ್ತಿಲ್ಲ ಇದರಿಂದ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ’ ಎಂದು ವರ್ತಕ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚರಂಡಿ ವ್ಯವಸ್ಥೆ ಇಲ್ಲದಿರುವುದ ರಿಂದ ಮಳೆ ಬಂದರಂತೂ ಓಡಾಟ ಮತ್ತಷ್ಟು ದುಸ್ತರವಾಗುತ್ತದೆ. ಈಗಾ ಗಲೇ ಬೈಕ್‌ ಸವಾರರು ಬಿದ್ದು ಗಾಯಗೊಂಡಿರುವ ನಿರ್ದಶನಗಳು ಇವೆ. ಈ ರಸ್ತೆಯು ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿ ರುವುದರಿಂದ ವಾಹನಗಳ ಸಂಚಾರ ಸಹಜವಾಗಿಯೇ ಹೆಚ್ಚಿರುತ್ತದೆ. ಈ ಜಾಗದಲ್ಲಿಯೇ ಕಾಮಗಾರಿ ವಿಳಂಬವಾ ದರೆ ನಗರದ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ ಎನ್ನುವುದು ಸ್ಥಳೀಯರ ಪ್ರಶ್ನೆ.

ಬಾಯ್ತೆರೆದಿರುವ ಮ್ಯಾನ್‌ಹೋಲ್‌ಗಳು: ನಗರದಲ್ಲಿ ಆರೇಳು ವರ್ಷಗಳ ಹಿಂದೆ ಪ್ರಾರಂಭವಾದ ಒಳಚರಂಡಿ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳು ಸದಾ ಬಾಯ್ತೆರೆದುಕೊಂಡಿರುತ್ತವೆ. ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿಯೇ ಮ್ಯಾನ್‌ಹೋಲ್‌ಗಳಿದ್ದು, ಹಲವೆಡೆ ಅವುಗಳಿಗೆ ಮುಚ್ಚಳಗಳನ್ನು ಅಳವಡಿ ಸಿಲ್ಲ. ಅಲ್ಲಿ ಮ್ಯಾನ್‌ಹೋಲ್‌ಗಳು ಇವೆ ಎಂಬ ಸೂಚನೆಯೂ ಇಲ್ಲ. ವಾಹನ ಸವಾರರು ಹತ್ತಿರ ಸಮೀಪಿಸುವವರೆಗೂ ಅಲ್ಲಿ ಮ್ಯಾನ್‌ಹೋಲ್‌ ಇರುವುದೇ ಗೊತ್ತಾಗುವುದಿಲ್ಲ.

ಸಂಪರ್ಕ ಸಿಕ್ಕಿಲ್ಲ: ಚರಂಡಿಯನ್ನು ಎತ್ತರ ವಾಗಿ ನಿರ್ಮಾಣ ಮಾಡಿರುವುದ ರಿಂದ ರಸ್ತೆಯ ಎರಡು ಬದಿಯ ಬೀದಿಗಳ ರಸ್ತೆ ಸಂಪರ್ಕ ಸ್ಥಗಿತವಾಗಿದೆ. ಇದರಿಂದ ವಾಹನ ಸವಾರರು ಮಾರುಕಟ್ಟೆಗೆ ಹೋಗಲು ಸುತ್ತಾಟ ನಡೆಸಬೇಕಿದೆ. ಕೆಲವು ಕಡೆ ರಸ್ತೆ ಸಂಪರ್ಕವಿಲ್ಲ ಎಂದು ಕೂಡ ತಿಳಿಯುವುದಿಲ್ಲ. ಅಧಿಕಾರಿಗಳು ಅಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸಿಲ್ಲ. ಹೊಸದಾಗಿ ನಗರಕ್ಕೆ ಬರುವ ಜನರು ಮೈ ಮರೆತು ವಾಹನ ಚಾಲನೆ ಮಾಡಿ ದರೆ ದೊಡ್ಡ ಅವಘಡವೇ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ, ಅಧಿಕಾರಿಗಳು ಇಂತಹ ಅಪಾಯ ಸ್ಥಳಗಳಲ್ಲಿ ಸೂಚನ ಫಲಕ ಅಳವಡಿಸಬೇಕು. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ವ್ಯಾಪಾರ ವಾಹಿವಾಟು ಕುಸಿತ

ನಗರದ ದೊಡ್ಡ ಅಂಗಡಿ ಬೀದಿಗೆ ಹಲವು ದಶಕಗಳ ಇತಿಹಾಸವಿದೆ. ತಲೆಮಾರುಗಳಿಂದಲೂ ನಗರದ ಜನರು ವ್ಯಾಪಾರ ವಹಿವಾಟಿಗೆ ಹೆಚ್ಚಾಗಿ ಇಲ್ಲಿಗೇ ಬರುತ್ತಾರೆ. ನಗರ ಬೆಳೆದಂತೆ ದಟ್ಟಣೆಯೂ ಹೆಚ್ಚುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ಈಗಾಗಲೇ ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದೆ. ಆದರೆ, ನಿಧಾನಗತಿ ಕಾಮಗಾರಿಯಿಂದ ವ್ಯಾಪಾರ ವಹಿವಾಟಿನ ಮೇಲೆ ದುಷ್ಟಪರಿಣಾಮ ಬೀರಿದೆ.

‘ಸರಕು ಸಾಗಣೆ ಲಾರಿಗಳು ಬೆಳಿಗ್ಗೆ 7ರಿಂದ 9 ಗಂಟೆ ಒಳಗೆ ಬಂದು ಹೋಗಬೇಕು ಎಂಬ ನಿಯಮ ಮಾಡಿದ್ದಾರೆ. ಲಾರಿಗಳನ್ನು ನಿಲ್ಲಿಸಿ ಸರಕು ಇಳಿಸಲು ಸರಿಯಾದ ಜಾಗವಿಲ್ಲ. ತಡವಾದರೆ, ಸಂಜೆ 7 ಗಂಟೆವರೆಗೆ ಕಾಯಬೇಕು. ಮಹಾರಾಷ್ಟ್ರ, ಬೆಳಗಾವಿ ಮುಂತಾದೆಡೆಯಿಂದ ಬರುವ ಲಾರಿಗಳಿಗೆ ವೇಟಿಂಗ್‌ ಚಾರ್ಜ್‌ ನೀಡುವಂತಾದರೆ ಹೆಚ್ಚುವರಿ ಹೊರೆಯಾಗುತ್ತದೆ. ಅದನ್ನು ನಾವು ಗ್ರಾಹಕರ ಮೇಲೆ ವರ್ಗಾಯಿಸಬೇಕಾಗುತ್ತದೆ’ ಎಂದು ವ್ಯಾಪಾರಿ ಸುನಿಲ್‌ ತಿಳಿಸಿದರು.‘ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಪರ್ಯಾಯ ಇಕ್ಕಟ್ಟಾದ ರಸ್ತೆಯಲ್ಲಿ ಚಾಲನೆ ಮಾಡಬೇಕು. ಎದುರಿನಿಂದ ಬೈಕ್‌ ಬಂದರೂ ತೆರಳಲು ಜಾಗವಿರುವುದಿಲ್ಲ. ಒಮ್ಮೊಮ್ಮೆ 100 ಅಡಿ ಚಲಿಸಲು ಅರ್ಧಗಂಟೆ ಬೇಕಾಗುತ್ತದೆ’ ಎಂದು ಲಾರಿ ಮಾಲೀಕ ಶಿವಣ್ಣ ಬೇಸರ ವ್ಯಕ್ತಪಡಿಸಿದರು.

**

ಕಾರ್ಮಿಕರ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ನಾಳೆಯಿಂದ ಮತ್ತೆ ಕಾಮಗಾರಿ ಆರಂಭಿಸಲಾಗುವುದು. ಸೂಚನಾ ಫಲಕ ಅಳವಡಿಸಲಾಗುವುದು – ಸತ್ಯಮೂರ್ತಿ, ನಗರಸಭೆ ಸಹಾಯಕ ಎಂಜಿನಿಯರ್, ಚಾಮರಾಜನಗರ.

**

ಎಸ್.ಪ್ರತಾಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.