ಪರಿಹಾರ ಕೋರಿ ಸರ್ಕಾರಕ್ಕೆ ಪತ್ರ

7
ಆಲಿಕಲ್ಲು ಮಳೆ; ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಸುಧಾಕರ್ ಭೇಟಿ

ಪರಿಹಾರ ಕೋರಿ ಸರ್ಕಾರಕ್ಕೆ ಪತ್ರ

Published:
Updated:

ಚಿಕ್ಕಬಳ್ಳಾಪುರ: ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ನಷ್ಟಕ್ಕೆ ತುತ್ತಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.ಇತ್ತೀಚೆಗೆ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ರೈತರು ದ್ರಾಕ್ಷಿ ಬೆಳೆಗೆ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಸರ್ಕಾರ ದ್ರಾಕ್ಷಿ ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಅದರಲ್ಲೂ ಬೆಳೆ ಕೊಯ್ಲಿನ ಸಂದರ್ಭದಲ್ಲಿ ಪ್ರಕೃತಿಯ ವಿಕೋಪಕ್ಕೆ ಬೆಳೆ ನಾಶವಾದರೆ ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಹೇಳಿದರು.ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ಈ ಭಾಗಗಳಲ್ಲಿ ಬೆಳೆದ ಗುಣಮಟ್ಟದ ದ್ರಾಕ್ಷಿ ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ದ್ರಾಕ್ಷಿ ರಸ ಕಾರ್ಖಾನೆ ಸ್ಥಾಪಿಸಲು  ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕ್ಷೇತ್ರದಲ್ಲಿ ಜನರ ಆಶೀರ್ವಾದದಿಂದ ಮತ್ತೊಮ್ಮೆ ನಾನೇ ಶಾಸಕನಾಗಲಿದ್ದೇನೆ. ಶಾಸಕನಾಗಿ ಆಯ್ಕೆಯಾದ ಕೂಡಲೇ ಪ್ರಥಮ ಆದ್ಯತೆಯಲ್ಲಿ ಈ ಘಟಕ ಸ್ಥಾಪಿಸಲಾಗುವುದು. ಜತೆಗೆ ಈ ಭಾಗದ ದ್ರಾಕ್ಷಿ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಹೊಸಹುಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾತವಾರ ಗ್ರಾಮದ ಕೃಷ್ಣಪ್ಪ, ಗಿಡ್ನಹಳ್ಳಿ ಗ್ರಾಮದ ಕೇಶವಮೂರ್ತಿ, ನಾರಾಯಣಸ್ವಾಮಿ, ಅನಿಲ್ ಮತ್ತು ಗೋಪಾಲರೆಡ್ಡಿ ತೋಟಗಳಿಗೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಮುಖಂಡರಾದ ದಾವೂದ್, ತಮ್ಮನಾಯಕನಹಳ್ಳಿ ಜಗದೀಶ್, ಮುನೇಗೌಡ, ಗಿಡ್ನಹಳ್ಳಿ ನಾರಾಯಣಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry