ಸಮುದಾಯದ ಸಹಾಯ ಪಡೆಯಲಿ

7
ಜಾತಿ ಪ್ರಮಾಣ ಪತ್ರ ಪಡೆಯುವಾಗ ಎಚ್ಚರ ವಹಿಸಿ: ಶಾಸಕ ಸಿ.ಟಿ.ರವಿ ಸಲಹೆ

ಸಮುದಾಯದ ಸಹಾಯ ಪಡೆಯಲಿ

Published:
Updated:

ಚಿಕ್ಕಮಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ವಾಮಾ ಮಾರ್ಗಗಳು ಹುಟ್ಟಿಕೊಂಡಿದ್ದು, ಅದನ್ನು ತಪ್ಪಿಸಬೇಕಾದರೆ ಸಮುದಾಯಗಳ ಸಂಘದ ಸಹಕಾರ ಪಡೆದು ಸರ್ಕಾರ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟರು.ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ 4ನೇ ವಾರ್ಷಿಕ ಸಭೆಯ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶತಮಾನಗಳ ಹಿಂದೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಎಂದು ಹೇಳಿಕೊಳ್ಳಲು ಭಯಪಡುವ ಸ್ಥಿತಿ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಪರಿಶಿಷ್ಟರು ಎಂದು ಹೇಳಿಕೊಳ್ಳಲು ಸ್ಪರ್ಧೆ ಏರ್ಪಟ್ಟಿದೆ’ ಎಂದರು.‘ಆದಿ ದ್ರಾವಿಡ ಸಮುದಾಯದವರಿಗೆ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಜಾತಿ ಹೆಸರಿನಲ್ಲಿ ದೃಢೀಕರಣ ಪತ್ರ ನೀಡುತ್ತಿದ್ದು,  ಅದನ್ನು ತಪ್ಪಿಸಲು ಆದಿ ದ್ರಾವಿಡ ಸಂಘದ ಶಿಫಾರಸು ಪಡೆದು ಸಮುದಾಯದವರಿಗೆಲ್ಲರಿಗೂ ಒಂದೇ ಜಾತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಮಾಣ ಪತ್ರ ನೀಡಬೇಕು’ ಎಂದು ಹೇಳಿದರು.‘ಸತ್ಯಸಾರಮಾನಿ ಸಮುದಾ ಯದವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಅವರಿಗೆ ಕಾಫಿ ಬೆಳೆ ಮತ್ತು ಗಿಡ ಕಸಿ ಮಾಡುವುದರ ಬಗ್ಗೆ ಆಳವಾದ ಜ್ಞಾನ ಇದೆ. ಜಿಲ್ಲೆಯನ್ನು ಕಾಫಿ ಕೇಂದ್ರವಾಗಿಸಲು ಅವರ ಕೊಡುಗೆ ಇದೆ. ಅವರು ಸಂಘರ್ಷಕ್ಕೆ ಹೋದವರಲ್ಲ. ಸಹಕಾರಿ ಮನೋಭಾವದವರು’ ಎಂದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ಅಮೂಲ್ಯವಾದ ಮತವನ್ನು ಮಾರಿ ಕೊಳ್ಳಬಾರದು. ಆಮಿಷಗಳಿಗೆ ಬಲಿಯಾ ಗಬಾರದು. ಜನರಿಗೆ ಸ್ಪಂದಿಸುವ ಅಭ್ಯರ್ಥಿ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಸಂತಾ ಅನಿಲ್ ಕುಮಾರ್, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ, ಗೌರವ ಅಧ್ಯಕ್ಷ ಬಿ.ಕೆ.ಚೆಲ್ಲು, ಕಾರ್ಯದರ್ಶಿ ಸುರೇಶ್‌ಹಾಂದಿ, ಸಿಪಿಎಂಎಲ್ ಮುಖಂಡ ರುದ್ರಯ್ಯ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry