ಶನಿವಾರ, ಡಿಸೆಂಬರ್ 14, 2019
20 °C
ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

ವಿ.ಎಲ್‌.ನಗರದಲ್ಲಿರುವುದು ಒಂದೇ ನಲ್ಲಿ .!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ಎಲ್‌.ನಗರದಲ್ಲಿರುವುದು ಒಂದೇ ನಲ್ಲಿ .!

ಕಡೂರು: ಈ ಗ್ರಾಮದಲ್ಲಿ ಇರುವುದು ಒಂದೇ ನಲ್ಲಿ. ಮಹಿಳೆಯರು ನೀರಿಗೋಸ್ಕರ ಕೂಲಿಗೆ ಹೋಗದೇ ಸಂಜೆಯವರೆಗೂ ಕ್ಯೂನಲ್ಲಿ ನಿಲ್ಲಬೇಕು.ಪಟ್ಟಣದಿಂದ 2 ಕಿಲೋ ಮೀಟರ್ ದೂರದಲ್ಲಿರುವ ವಿ.ಎಲ್.ನಗರದಲ್ಲಿರುವ ಪರಿಸ್ಥಿತಿ ಇದು.ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಇರುವ ನಲ್ಲಿಯಲ್ಲಿ ಸಣ್ಣಗೆ ನೀರು ಬರುತ್ತದೆ. ಇದನ್ನೇ ಮಹಿಳೆಯರು ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿ.ಎಲ್.ನಗರ ತಂಗಲಿ ಗ್ರಾಮ ಪಂಚಾಯ್ತಿವ್ಯಾಪ್ತಿಗೆ ಬರಲಿದ್ದು, ಈ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳೆಲ್ಲ ಬತ್ತಿ ಹೋಗಿವೆ.

ಗ್ರಾಮದಿಂದ ಅನತಿ ದೂರದಲ್ಲಿ ಕೊಳವೆಬಾವಿಯಲ್ಲಿ ಅತ್ಯಲ್ಪ ಪ್ರಮಾಣದ ನೀರಿದ್ದು, ಅದನ್ನೇ ಪಂಪ್ ಮಾಡಿ ಅದನ್ನು ನೇರವಾಗಿ ಈ ನಲ್ಲಿಗೆ ಸಂಪರ್ಕಿಸಲಾಗಿದೆ. ಗ್ರಾಮದ ಎಲ್ಲ ಮನೆಯವರು ಹಿಡಿದುಕೊಳ್ಳಲು ಬರುತ್ತಾರೆ. ಸುಮಾರು ಅರ್ಧ ಕಿ.ಮೀ. ದೂರದವರೆಗೂ ನೀರು ಹೊರಬೇಕಾದ ಪರಿಸ್ಥಿತಿ ಮಹಿಳೆಯರದು. ಈ ನೀರು ಅನಿವಾರ್ಯವಾದ್ದರಿಂದ ಅವರಿಗೆ ಕೂಲಿ ಹೋಗಲೂ ಆಗುತ್ತಿಲ್ಲ. ಕೂಲಿಗೆ ಹೋದರೆ ನೀರಿಲ್ಲ. ನೀರಿಗೆ ಬಂದರೆ ಕೂಲಿಗೆ ಹೋಗುವಂತಿಲ್ಲ. ಇದು ಇಲ್ಲಿನ ಮಹಿಳೆಯರ ಪರಿಸ್ಥಿತಿಯಾಗಿದೆ.‘ಈ ಒಂದು ನಲ್ಲಿಗೆ ಬರುತ್ತಿರುವ ನೀರನ್ನು ಗ್ರಾಮದೊಳಗಿರುವ ನಲ್ಲಿಗಳಿಗೆ ಸಂಪರ್ಕಿಸಲು ಆಗುವುದಿಲ್ಲ. ಏಕೆಂದರೆ ನಲ್ಲಿಗಳ ಸಂಖ್ಯೆ ಹೆಚ್ಚಾದರೆ ನೀರಿನ ಹರಿವು ಕಡಿಮೆಯಾಗುವುದರಿಂದ ಯಾವ ನಲ್ಲಿಯಲ್ಲೂ ನೀರು ಸಿಗುವುದಿಲ್ಲ’ ಎನ್ನುತ್ತಾರೆ ವಾಟರ್‌ಮನ್‌ ಕೃಷ್ಣಾನಾಯ್ಕ.

‘ಗ್ರಾಮ ಪಂಚಾಯ್ತಿಯಿಂದ, ಜನಪ್ರತಿನಿಧಿಗಳ ಅನುದಾನದಿಂದ ಮೂರ್ನಾಲ್ಕು ಕೊಳವೆ ಬಾವಿ ಕೊರೆಸಿದರೂ ಅದರಲ್ಲಿ ನೀರು ಬಾರದೆ ವಿಫಲವಾಗಿವೆ. ಟ್ಯಾಂಕರ್ ಮೂಲಕ ನೀರು ಕೊಡಲೂ ಅನುಮತಿಯಿಲ್ಲ. ಟಾಸ್ಕ್‌ಫೋರ್ಸ್ ಮೂಲಕ ನೀರು ನೀಡಲು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಸಾಧ್ಯವಿಲ್ಲ. ತಾಲ್ಲೂಕು ಪಂಚಾಯಿತಿ ಇಒ ಅವರು ಇದರತ್ತ ಗಮನ ಹರಿಸಬೇಕು’ ಎನ್ನುತ್ತಾರೆ ವಿ.ಎಲ್.ನಗರದ ರಮಾಮಣಿ ಎನ್.ನಾಯ್ಕ.

ಕಡೂರಿನಿಂದ 4 ಕಿ.ಮೀ.ದೂರದಲ್ಲಿರುವ ಮಚ್ಚೇರಿ ಗ್ರಾಮದಲ್ಲಿ ಇರುವ ಕೊಳವೆ ಬಾವಿಯಲ್ಲಿ ಅಲ್ಪ ಪ್ರಮಾಣದ ನೀರಿದೆ. ಖಾಸಗಿಯವರಿಂದಲೂ ನೀರು ಪಡೆದು ಸರದಿ ಮೇಲೆ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಆದರೆ ಅದನ್ನೂ ಬಿಡುವುದು ಬೆಳಿಗ್ಗೆ ಮಾತ್ರ. ಆದರೆ ಆ ಸಮಯದಲ್ಲಿ ಇಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಿರುತ್ತದೆ. ಕೆಲವರಿಗೆ ಪಂಪ್ ಮಾಡಿಕೊಳ್ಳಲಾಗದೆ ನೀರೇ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಎಂ.ಕೋಡಿಹಳ್ಳಿಯಲ್ಲಿ ಈಚೆಗೆ ತೆಗೆಸಿರುವ ಬೋರ್ವೆಲ್ ನಲ್ಲಿ ನೀರಿದೆ. ಆದರೆ ಪೈಪ್‌ಲೈನ್ ಇಲ್ಲದೆ ಆ ಬಾವಿಯ ನೀರು ಇನ್ನೂ ಜನಬಳಕೆಗೆ ಲಭ್ಯವಾಗಿಲ್ಲ. ಕುಡಿಯುವ ನೀರನ್ನು ಖಾಸಗಿ ಘಟಕಗಳಿಂದ ತರಲಾಗುತ್ತಿದೆ. ತಾಲ್ಲೂಕಿನ 19 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 34 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಕುಡಿಯುವ ನೀರು ಮತ್ತು ಜಾನುವಾರು ತೊಟ್ಟಿಗಳಿಗೆ ಪ್ರತಿ ದಿನ ನೀರು ಸಿಕ್ಕುವಂತೆ ಟಾಸ್ಕ್ ಫೋರ್ಸ್ ಕಾರ್ಯದರ್ಶಿಯೂ ಆಗಿರುವ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ನೀರಿನ ಸಮಸ್ಯೆ ಪರಿಹರಿಸಲು ಕ್ರಮ

‘ವಿ.ಎಲ್.ನಗರದ ನೀರಿನ ಸಮಸ್ಯೆ ಪರಿಹರಿಸಲು ಸ್ಮಶಾನದ ಬಳಿ ಇರುವ ಬೋರ್ವೆಲ್‌ನಲ್ಲಿ ನೀರು ಇದೆಯೇ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಎಂ.ಕೋಡಿಹಳ್ಳಿಯಲ್ಲಿ ಪೈಪ್‌ಲೈನ್ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಎಲ್ಲಿಯೇ ನೀರಿನ ತೊಂದರೆಯಾದರೂ ನಮ್ಮ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ’ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ದೇವರಾಜನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

**

ಗ್ರಾಮದಲ್ಲಿ ಒಂದೇ ನಲ್ಲಿ ಇರುವುದರಿಂದ ಅನಿವಾರ್ಯವಾಗಿ ಇಲ್ಲಿಯೇ ನೀರು ಹಿಡಿದುಕೊಳ್ಳಬೇಕಿದೆ. ಇದರಿಂದ ಕೂಲಿ ಹೋಗಲೂ ತೊಂದರೆಯಾಗಿದೆ – ರಮಾಮಣಿ ಎನ್.ನಾಯ್ಕ,ವಿ.ಎಲ್.ನಗರ.

**

3ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಆದರೆ ಕರೆಂಟ್ ಇಲ್ಲದ್ದರಿಂದ ಬಂದಷ್ಟು ನೀರನ್ನು ಪಂಪ್ ಮಡಿಕೊಳ್ಳಲೂ ಆಗುತ್ತಿಲ್ಲ. ಕೂಲಿಗೆ ಹೋದರೆ ನೀರು ಹಿಡಿದಿಡಲಾಗುವುದಿಲ್ಲ – ಚಿಕ್ಕಮ್ಮ, ಗೃಹಿಣಿ,ಮಚ್ಚೇರಿ

**

ಬಾಲುಮಚ್ಚೇರಿ,ಕಡೂರು

ಪ್ರತಿಕ್ರಿಯಿಸಿ (+)