ಭಾನುವಾರ, ಡಿಸೆಂಬರ್ 15, 2019
25 °C
ಜಿಲ್ಲಾ ಪಂಚಾಯ್ತಿಯಿಂದ ವಿಧಾನಸೌಧದವರೆಗೆ ಸೀಮಾ ಮಸೂತಿ ಪಯಣ

‘ಮಹಿಳೆಯ ಛಲಕ್ಕೆ ದಕ್ಕಿದ ಗೆಲುವು’

ಇ.ಎಸ್‌.ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

‘ಮಹಿಳೆಯ ಛಲಕ್ಕೆ ದಕ್ಕಿದ ಗೆಲುವು’

ಧಾರವಾಡ: ‘ಮೊದಲ ಬಾರಿಗೆ 2008ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರತಿಪಕ್ಷಗಳ ಸವಾಲು ಒಂದೆಡೆಯಾದರೆ, ಮಹಿಳೆಯಾಗಿ ಟಿಕೆಟ್‌ ಪಡೆದಿದ್ದು, ನಮ್ಮದೇ ಪಕ್ಷದಲ್ಲಿನ ಕೆಲ ಕಾರ್ಯಕರ್ತರಿಗೆ ಅಸಮಾಧಾನ ಉಂಟು ಮಾಡಿತ್ತು. ಅದನ್ನೂ ಎದುರಿಸಬೇಕಿತ್ತು. ಮಹಿಳೆಯಾಗಿ ಗೆಲುವು ಸಾಧಿಸಿ ತೋರಿಸಬೇಕು ಛಲದ ಹೋರಾಟಕ್ಕೆ ಗೆಲುವು ಸಿಕ್ಕಿತು’ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ನೆನಪಿಸಿಕೊಂಡರು.‘ರಾಜಕೀಯಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. 2000ನೇ ಇಸ್ವಿಯಲ್ಲಿ ನಮ್ಮ ಕುಟುಂಬ ಉಪ್ಪಿನ ಬೆಟಗೇರಿಯಿಂದ ಧಾರವಾಡಕ್ಕೆ ಬಂದು ನೆಲೆಸಿತು. ಆಗಷ್ಟೇ ಮಕ್ಕಳನ್ನು ಶಾಲೆಗೆ ಸೇರಿಸಿದ್ದೆವು. ಅದೇ ಹೊತ್ತಿಗೆ ಜಿಲ್ಲಾ ಪಂಚಾಯ್ತಿ ಚುನಾವಣೆ ಘೋಷಣೆಯಾಗಿತ್ತು. ಉಪ್ಪಿನ ಬೆಟಗೇರಿ ಕ್ಷೇತ್ರ ಮಹಿಳೆಗೆ ಮೀಸಲಾಗಿದ್ದರಿಂದ ಮಾವ (ಪತಿಯ ಅಣ್ಣ) ಚನ್ನಬಸಪ್ಪ ಮಸೂತಿ ಅವರು, ನೀನೇ ಸ್ಪರ್ಧಿಸಬೇಕು’ ಎಂದು ತಿಳಿಸಿದರು.

‘ಅಲ್ಲಿಯವರೆಗೂ ಮಹಿಳೆಯರ ಪರ ಒಂದಷ್ಟು ಹೋರಾಟಗಳನ್ನು ಮಾಡಿದ ಅನುಭವ ಇತ್ತು. ವೈನಿ ಡಾ. ಹೇಮಾ ಪಟ್ಟಣಶೆಟ್ಟಿ ಅವರೊಂದಿಗೆ ಹೋರಾಟಗಳಲ್ಲಿ ಭಾಗವಹಿಸಿದ್ದೆ. ಆದರೆ, ರಾಜಕೀಯ ತೀರಾ ಅಪರಿಚಿತ ಲೋಕವಾಗಿತ್ತು. ಮನೆಯಲ್ಲಿ ನಿರ್ಧರಿಸಿದ್ದರಿಂದ ನಾಮಪತ್ರ ಸಲ್ಲಿಕೆಗೆ ಅವರೇ ದಿನಾಂಕ ಗೊತ್ತು

ಪಡಿಸಿ, ಚುನಾವಣೆಗೆ ನಿಲ್ಲಿಸಿದರು. ಮನೆಯವರೆಲ್ಲರ ಶ್ರಮ, ಕಾರ್ಯಕರ್ತರ ಹೋರಾಟದಿಂದ ಗೆಲುವು ನನ್ನದಾಯಿತು’ ಎಂದರು.

‘2005ರಲ್ಲಿ ಗರಗದಿಂದ ಸ್ಪರ್ಧಿಸಲು ಹೇಳಿದರು. ನನ್ನ ಕ್ಷೇತ್ರವಲ್ಲದಿದ್ದರೂ, ಉಪ್ಪಿನ ಬೆಟಗೇರಿಯಲ್ಲಿ ಮಾಡಿದ ಒಂದಷ್ಟು ಕೆಲಸಗಳ ಧೈರ್ಯದ ಮೇಲೆ ಸ್ಪರ್ಧಿಸಿದ್ದೆ. ಆದರೆ, ಅಲ್ಲಿ ಸೋಲಾಯಿತು. ಅಷ್ಟೊತ್ತಿಗೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಪರಿಚಯವಾಗಿತ್ತು. ಪಕ್ಷದ ಕಾರ್ಯಕರ್ತರು, ಮುಖಂಡರೂ ಗೊತ್ತಾಗಿದ್ದರು. ಹೋರಾಟ ಮನೋವಭಾವದಿಂದಾಗಿ 2008ರಲ್ಲಿ ಧಾರವಾಡ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು’ ಎಂದು ವಿವರಿಸಿದರು.

‘ಮಹಿಳೆಯೊಬ್ಬಳಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಸಿಕ್ಕಿದ್ದು ಪಕ್ಷದಲ್ಲಿದ್ದ ಕೆಲವರಿಗೆ ಅಸಮಾಧಾನ ಉಂಟು ಮಾಡಿತ್ತು. ಅವರು, ಧಾರವಾಡದಿಂದ ವಾಹನ ಮಾಡಿಕೊಂಡು ಹೋಗಿ, ಆಗಿನ ರಾಜ್ಯ ಉಸ್ತುವಾರಿಯಾಗಿದ್ದ ಸುಷ್ಮಾ ಸ್ವರಾಜ್‌ ಅವರಲ್ಲಿ ಟಿಕೆಟ್ ನೀಡದಂತೆ ಮನವಿ ಮಾಡಿಕೊಂಡಿದ್ದರು. ‘ಆಕೆ ಹೆಣ್ಣು ಮಗಳು ಅದಾಳ. ಆಕಿ ಕೈಯಲ್ಲಿ ಗೆಲ್ಲೂದಕ್ಕ ಆಗುದಿಲ್ಲ. ಟಿಕೆಟ್ ಬ್ಯಾರೆವರಿಗೆ ಕೊಡ್ರಿ’ ಎಂದು ದುಂಬಾಲು ಬಿದ್ದದ್ದು ನನಗೆ ಬಳಿಕ ಗೊತ್ತಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರೇ, ‘ಆಕೆ ಸೀಮಾ ಮಸೂತಿ ಮಾತ್ರವಲ್ಲ, ಮಹಿಷಾಸುರ ಮರ್ಧಿನಿಯೂ ಹೌದು’ಎಂದು ಹೇಳಿ ದೂರು ನೀಡಿದವರ ಬಾಯಿ ಮುಚ್ಚಿಸಿದ್ದರು. ಚುನಾವಣೆಯಲ್ಲಿ ನನ್ನೊಂದಿಗೆ ಓಡಾಡಲು ಹೆಚ್ಚು ಜನ ಹಾಗೂ ಖರ್ಚು ಮಾಡಲು ಸಾಕಷ್ಟು ಹಣವೂ ಇರಲಿಲ್ಲ. ಜನರ ಭೇಟಿ ಸಂದರ್ಭದಲ್ಲಿ ಅವರು ತೋರಿಸಿದ ಪ್ರೀತಿಯಿಂದ ಆತ್ಮವಿಶ್ವಾಸ ಹೆಚ್ಚಾಗಿತ್ತು. ಗೆಲುವಿನ ವಿಶ್ವಾಸ ಹೆಚ್ಚಾಗುತ್ತಾ ಹೋಯಿತು’ ಎಂದು ಸೀಮಾ ಹೇಳಿದರು.

‘ಎದುರಾಳಿಯ ಚುನಾವಣಾ ಪ್ರಚಾರದ ಗಿಮಿಕ್‌ಗಳ ಮುಂದೆ ನನ್ನದೇನೂ ಅಲ್ಲ ಎಂದೆನಿಸುತ್ತಿತ್ತು. ಚುನಾವಣಾ ತಂತ್ರವಾಗಿ ನನ್ನ ಮೈದುನನ (ಪತಿಯ ತಮ್ಮ) ಪತ್ನಿಯನ್ನೇ ನನ್ನ ವಿರುದ್ಧ ನಿಲ್ಲಿಸಿದ್ದರು. ‘ಅಕ್ಕಾರು ನಾಲ್ಕನೇ ಸ್ಥಾನ ಪಡಿಬಹುದು’ ಎಂದು ಪ್ರಚಾರ ಮಾಡಲಾಗುತ್ತಿತ್ತು.  ಅದೇ ಹೊತ್ತಿಗೆ ತಂದೆ ತೀರಾ ಅನಾರೋಗ್ಯಕ್ಕೀಡಾಗಿದ್ದರಿಂದ ಅವ

ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯವರೆಲ್ಲರೂ ‘ಅಪ್ಪ ಆರಾಮಾಗಿದ್ದಾರೆ ಎಂದು ಹೇಳಿ, ನನ್ನ ಮನಸ್ಸನ್ನು ಚುನಾವಣೆ ಕಡೆ ತಿರುಗಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಫಲಿತಾಂಶ ಆರೋಗ್ಯದ ಮೇಲೆ ಪರಿಣಾಮ ಆಗಬಾರದು ಎಂದು ಯೋಗಾಭ್ಯಾಸದ ತರಬೇತಿ ಕೊಡಿಸುತ್ತಿದ್ದರು. ಮತ ಎಣಿಕೆ ಕೇಂದ್ರಕ್ಕೆ ಹೋಗುವುದು ಬೇಡ ಎಂದು ಹುಬ್ಬಳ್ಳಿಯಲ್ಲಿದ್ದ ನನ್ನ ಸಹೋದರನ ಮನೆಗೆ ಕರೆದುಕೊಂಡು ಬಂದಿದ್ದರು. ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಒಂದೆಡೆಯಾದರೆ, ಕರೆದುಕೊಂಡು ಹೋಗುವವರಿಲ್ಲವಲ್ಲ ಎಂಬ ಬೇಸರ ಮತ್ತೊಂದೆಡೆ ಇತ್ತು’ ಎಂದು ಹೇಳಿದರು.

‘ಮತ ಎಣಿಕೆ ಕೇಂದ್ರಕ್ಕೆ ಹೋಗೋಣ ಎಂದು ಕರೆದುಕೊಂಡು ಹೊರಟರು. ಕೇಂದ್ರದ ಹತ್ತಿರ ಬರುವವರೆಗೂ ವಿಷಯ ಗೊತ್ತಿರಲಿಲ್ಲ. ಕೇಂದ್ರದ ಎದುರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದ ರೀತಿಯಿಂದಲೇ ಗೆಲುವು ನನ್ನದಾಗಿದೆ ಎಂಬುದು ಖಚಿತ

ವಾಯಿತು. ಇದೆಲ್ಲದಕ್ಕೂ ಕಾರಣರಾದ ಪತಿ ಅಶೋಕ ಮಸೂತಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು ಎಂದು ಸಾಷ್ಟಾಂಗ ನಮಸ್ಕಾರ ಮಾಡಿದೆ’ ಎಂದು ನೆನಪಿಸಿಕೊಂಡ ಸೀಮಾ ಮಸೂತಿ ಭಾವುಕರಾದರು.

ಸೀಮಾ ಮಸೂತಿ ರಾಜಕೀಯ ಹಾದಿ

l 2000ನೇ ಇಸ್ವಿಯಲ್ಲಿ ಉಪ್ಪಿನ ಬೆಟಗೇರಿ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧೆ– ಗೆಲುವು

l 2005ರಲ್ಲಿ ಗರಗ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧೆ– ಸೋಲು

l 2008ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ– ಗೆಲುವು

l 2013ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ– ಸೋಲು

**

ನನ್ನ ಅಣ್ಣ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು, ‘ಧರ್ಮದಿಂದ ಇರು. ಧರ್ಮ ಎಂದಿಗೂ ನಿನ್ನ ಕೈಬಿಡುವುದಿಲ್ಲ’ ಎಂದು ಹೇಳಿದ ಮಾತು ನನ್ನಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿತ್ತು – ಸೀಮಾ ಮಸೂತಿ, ಮಾಜಿ ಶಾಸಕಿ.

**

ಪ್ರತಿಕ್ರಿಯಿಸಿ (+)