ಒಂದೇ ದಿನ 22 ಹಳ್ಳಿ ಸುತ್ತಿದ ಮುಖ್ಯಮಂತ್ರಿ

7
ಸಿ.ಎಂ.ಗೆ ಸ್ವಕ್ಷೇತ್ರದ ಮೇಲೆ ದಿಢೀರ್‌ ಪ್ರೀತಿ: ಎಚ್.ಡಿ. ದೇವೇಗೌಡ ವ್ಯಂಗ್ಯ

ಒಂದೇ ದಿನ 22 ಹಳ್ಳಿ ಸುತ್ತಿದ ಮುಖ್ಯಮಂತ್ರಿ

Published:
Updated:

 

ಹಾಸನ: ‘ಜೆಡಿಎಸ್-ಬಿಜೆಪಿ ಒಂದಾದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಆಗಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ, ‘ಚುನಾವಣೆಗೆ ಇನ್ನೂ 40 ದಿನ ಇದೆ. ಅಲ್ಲಿಯವರೆಗೂ ಕಾದು ನೋಡಲಿ’ ಎಂದು ಸಂಸದ ಎಚ್.ಡಿ.ದೇವೇಗೌಡ ತೀರುಗೇಟು ನೀಡಿದರು.ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ಕಾಲ ಬಂದಿಲ್ಲ. ಮುಂದಿನ ವಾರ ಹೋಗುವೆ. ಎಂಥಾ ದೊಡ್ಡ ಮನುಷ್ಯರಾಗಲೀ, ಅವರನ್ನು ಸೋಲಿಸುವ ಶಕ್ತಿ ಜನರಿಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿರಾಗಾಂಧಿ, ಕಾಮರಾಜ್ ನಾಯ್ಡು ಹಾಗೂ ನಾನು ಸೋತಿಲ್ಲವೇ? ಯಾರೇ ಆಗಲಿ ಗರ್ವದಿಂದ ಮಾತನಾಡಬಾರದು. ತೀರ್ಮಾನ ಮಾಡುವವರು ಮಹಾಜನತೆ’ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.ನಾಲ್ಕು ಮುಕ್ಕಾಲು ವರ್ಷಗಳಿಂದ ಸ್ವ ಕ್ಷೇತ್ರಕ್ಕೆ ಭೇಟಿ ನೀಡದವರಿಗೆ ಈಗ ಜನರ ಮೇಲೆ ದಿಢೀರ್ ಪ್ರೀತಿ ಉಕ್ಕಿ ಒಂದೇ ದಿನ 22 ಹಳ್ಳಿ ಸುತ್ತಿದ್ದಾರೆ. ಏನು ಆಶ್ಚರ್ಯ ಎಂದು ಗೌಡರು ವ್ಯಂಗ್ಯವಾಡಿದರು.

‘ಹೋದ ಕಡೆಯೆಲ್ಲೆಲ್ಲಾ ಜನರು ಆರತಿ ಎತ್ತಿ ಸ್ವಾಗತಿಸುತ್ತಿದ್ದಾರೆ. ಇದೆಲ್ಲಾ ಪೂರ್ವ ನಿಯೋಜಿತ ಪ್ರವಾಸ. ಜನರು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲಿದ್ದಾರೆ. ವರುಣಾದಲ್ಲಿ ಅವರಿಗೆ ಗೆಲುವು ಸುಲಭವಾಗಿಲ್ಲ ’ ಎಂದು ಭವಿಷ್ಯ ನುಡಿದ ಗೌಡರು, ‘ನಾನೂ ಸೇರಿದಂತೆ ಎಲ್ಲರನ್ನೂ ಜನರು 5 ವರ್ಷಕ್ಕೊಮ್ಮೆ ಪರೀಕ್ಷೆಗೆ ಗುರಿಪಡಿಸುತ್ತಾರೆ. ಹಾಗಾಗಿ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು. ಅವರ ಎಲ್ಲಾ ಟೀಕೆಗಳಿಗೆ ಜನರೇ ಉತ್ತರ ನೀಡಲಿದ್ದಾರೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry