ಕಲ್ಲಂಗಡಿ, ತಂಪುಪಾನೀಯಗಳಿಗೆ ಬೇಡಿಕೆ

7
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲ ಝಳ; ಬೇಡಿಕೆ ಹಿಂದೆಯೇ ಕಲ್ಲಂಗಡಿ ಬೆಲೆ ಏರಿಕೆ

ಕಲ್ಲಂಗಡಿ, ತಂಪುಪಾನೀಯಗಳಿಗೆ ಬೇಡಿಕೆ

Published:
Updated:

 

ಹಾಸನ: ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದು, ದಾಹ ನೀಗಿಸಿಕೊಳ್ಳಲು ಜನರು ಕಲ್ಲಂಗಡಿ, ಸೌತೆಕಾಯಿ, ಎಳನೀರು ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ವಿವಿಧ ಹಣ್ಣುಗಳು, ತಂಪು ಪಾನೀಯ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಗರಿಷ್ಠ 35 ಡಿಗ್ರಿ ತಲುಪಿದೆ. ಇದರಿಂದಾಗಿ ಕಲ್ಲಂಗಡಿ, ಸೌತೆಕಾಯಿ, ಐಸ್‌ಕ್ರೀಮ್, ಕಬ್ಬಿನ ರಸ, ಎಳನೀರು ಮಾರಾಟ ಜೋರಾಗಿದೆ. ನಗರದ ಡೇರಿ ವೃತ್ತ, ಸಹ್ಯಾದ್ರಿ ವೃತ್ತ, ಹಾಸನಾಂಬ ಕಲಾಕ್ಷೇತ್ರ ಮುಂಭಾಗ, ಬಿ.ಎಂ. ರಸ್ತೆ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ರಾಶಿಗಟ್ಟಲೆ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಜನರು ಚೌಕಸಿ ಮಾಡಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ಬೆಲೆಯೂ ಏರಿಕೆಯಾಗಿದೆ.

‘ಬೇಸಿಗೆ ಆರಂಭಕ್ಕೂ ಮುನ್ನ ಕೆ.ಜಿ.ಗೆ ₹ 15 ರಂತೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಈಗ ₹ 20ಕ್ಕೇರಿದೆ. ತಮಿಳುನಾಡು ಮತ್ತು ಕೇರಳ ರಾಜ್ಯದಿಂದ ಹಾಸನಕ್ಕೆ ಕಲ್ಲಂಗಡಿ ಹಣ್ಣು ತರಿಸಲಾಗುತ್ತಿದೆ. ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ ದಿನಗಳಲ್ಲೂ ದರ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ರವೀಶ್‌. ಬಿ.ಎಂ. ರಸ್ತೆ, ಜಿಲ್ಲಾ ಆಸ್ಪತ್ರೆ ಮುಂಭಾಗ, ಹೈಸ್ಕೂಲ್‌ ಮೈದಾನದ ರಸ್ತೆ, ಸಾಲಗಾಮೆ ರಸ್ತೆ, ಆರ್.ಸಿ. ರಸ್ತೆಯಲ್ಲಿ ಎಳನೀರು ಮಾರಾಟ ಮಾಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನ ಎಳನೀರು ₹ 30ಕ್ಕೆ ಮಾರಾಟವಾಗುತ್ತಿದ್ದರೆ, ಈಗ ₹ 35ಕ್ಕೆ ಏರಿದೆ.ಅಂತರ್ಜಲ ಹಾಗೂ ತೇವಾಂಶ ಕೊರತೆಯಿಂದಾಗಿ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಭಾಗದಲ್ಲಿ ತೆಂಗಿನ ಮರಗಳು ನಾಶವಾದ ಕಾರಣ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಮಾರುಕಟ್ಟೆಗೆ ಬರುತ್ತಿಲ್ಲ. ಆದ್ದರಿಂದ ಬೆಲೆಯೂ ಏರಿಕೆಯಾಗಿದೆ.

ಹಾಸನದ ನಾಟಿ ಸೌತೆಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ವಾರದ ಹಿಂದೆ ಎರಡು ಸೌತೆಕಾಯಿ ದರ ₹ 10 ಇತ್ತು. ಈಗ ಸೌತೆಕಾಯಿ ಬೆಲೆ ₹ 10.

‘ಜಿಲ್ಲೆಯ ಹೊಳನರಸೀಪುರ, ಅರಕಲಗೂಡು, ಬೇಲೂರು, ಹಳೇಬೀಡು, ಸೌದರಹಳ್ಳಿ, ಸಾಲಗಾಮೆಯಿಂದ ಹಾಸನ ಮಾರುಕಟ್ಟೆಗೆ ಸೌತೆಕಾಯಿ ಬರುತ್ತಿದೆ. ಬಿಸಿಲು ಹೆಚ್ಚಾದ ಪರಿಣಾಮ ಕಲ್ಲಂಗಡಿ ಹಣ್ಣು ಖರೀದಿಸುತ್ತಿದ್ದಾರೆ. ವ್ಯಾಪಾರ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ವ್ಯಾಪಾರಿ ಮಲ್ಲಪ್ಪ.

‘ದಾಹ ನೀಗಿಸಿಕೊಳ್ಳಲು ತಂಪು ಪಾನೀಯಗಳಿಗಿಂತ ಹಣ್ಣು, ಎಳನೀರು ಆರೋಗ್ಯಕ್ಕೆ ಒಳ್ಳೆಯದು. ಈಗ ಹಣ್ಣುಗಳ ದರವೂ ಹೆಚ್ಚಾಗಿದೆ. ರಸ್ತೆಬದಿ ವ್ಯಾಪಾರಿಗಳಿಗೆ ಶುಚಿತ್ವ ಕಾಪಾಡುವಂತೆ ನಗರಸಭೆ ಸೂಚನೆ ನೀಡಬೇಕು.’ ಎನ್ನುತ್ತಾರೆ ಚನ್ನಪಟ್ಟಣ ನಿವಾಸಿ ಬಸವರಾಜ್‌.

ಜೆ.ಎಸ್‌.ಮಹೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry