ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಆಕ್ಷೇಪ

7
ನಗರೋತ್ಥಾನ 3ರ ಅಡಿಯಲ್ಲಿ ಕಾಮಗಾರಿ; ಸರ್ವೆ ಕಾರ್ಯ ನಡೆಸದೇ ಆರಂಭವಾದ ಕೆಲಸ: ಆರೋಪ

ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಆಕ್ಷೇಪ

Published:
Updated:

ಶಿರಸಿ: ನಗರೋತ್ಥಾನ 3ರ ಅಡಿಯಲ್ಲಿ ಇಲ್ಲಿನ ಮಾರಿಕಾಂಬಾ ನಗರದ ಪರಿಶಿಷ್ಟರ ಕಾಲೊನಿ ಬಳಿ ನಡೆಯುತ್ತಿರುವ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.‘ಮಾರಿಕಾಂಬಾನಗರ ಹಾಗೂ ರಾಮನಬೈಲ್ ಗಡಿಯಲ್ಲಿರುವ ಪರಿಶಿಷ್ಟರ ಮನೆಗಳು ಸರ್ಕಾರದಿಂದ ಅಧಿಕೃತವಾಗಿ 1962ರಲ್ಲಿ ಮಂಜೂರಾಗಿತ್ತು. ಇಲ್ಲಿ ಮೊದಲು ಚರಂಡಿಯೊಂದು ಇದೆ. ಅದನ್ನು ಹೊರತುಪಡಿಸಿ ನಗರಸಭೆ ಸದಸ್ಯರೊಬ್ಬರ ರಾಜಕೀಯ ಪ್ರಭಾವದಿಂದ ಇಲ್ಲಿನ ಮನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಈಗ ಇಲ್ಲೇ ಸಮೀಪದಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಮೀಕ್ಷೆ ನಡೆಸಿ ಮೂಲ ಸ್ಥಳದಲ್ಲಿಯೇ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

‘ಸ್ಥಳೀಯರು ಯಾರೂ ಇಲ್ಲದ ವೇಳೆಯಲ್ಲಿ ಸಂಚಾರಕ್ಕೆ ತಡೆಯಾಗುವಂತೆ ನಗರಸಭೆ ವತಿಯಿಂದ ಚರಂಡಿಗೆ ಮಣ್ಣು ತೆಗೆಯಲಾಗಿದೆ. ಅಲ್ಲಿಯೇ ಇರುವ ಹಸಿ ಮರಗಳನ್ನು ಕಡಿಯಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಬೇಕು.ಮಳೆಗಾಲದಲ್ಲಿ ಇಲ್ಲಿನ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಗುತ್ತಿಗೆದಾರರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರಿಂದ ನಮಗೆ ಮುಕ್ತಿ ಬೇಕಿದೆ’ ಎಂದು ಸ್ಥಳೀಯರಾದ ರವಿ ಮುರ್ಡೇಶ್ವರ ಆಗ್ರಹಿಸಿದರು.

‘1962ರಿಂದ ಸರ್ಕಾರದ ಎಸ್.ಸಿ ಕೋಟಾದ ಅಡಿಯಲ್ಲಿ ಮಂಜೂರಾದ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ಈಗ ನಗರಸಭೆಯ ವತಿಯಿಂದ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸುವುದಾಗಿ ಹೇಳಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ಯಾವುದೇ ಸರ್ವೆ ಕಾರ್ಯ ನಡೆಸದೇ ಕೆಲಸ ಪ್ರಾರಂಭಿಸಲಾಗಿದೆ. ಸರ್ಕಾರದಿಂದ ನೀಡಲಾದ ಜಾಗದಲ್ಲಿ ನಿರ್ಮಾಣ ಮಾಡಿಕೊಂಡಿರುವ ಮನೆಯನ್ನು ಮೂರು ಅಡಿಯಷ್ಟು ತೆಗೆಯಲು ಹೇಳುತ್ತಿದ್ದಾರೆ. ಅಧಿಕಾರಿಗಳೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಸರ್ವೆ ಕಾರ್ಯನಡೆಸಿದ ಬಳಿಕ ಚರಂಡಿಯನ್ನು ನಿರ್ಮಿಸಿಕೊಡಬೇಕು’ ಎಂದರು.

ಸ್ಥಳೀಯರಾದ ಜನಾರ್ದನ ದೇಶಭಾಗ್, ವಿಶಾಲ್ ಮರಾಠೆ, ಶ್ರೀಧರ ಭಟ್, ಮನೋಹರ ಆಚಾರಿ, ಪ್ರವೀಣ ಆಚಾರಿ, ಮಹಾಬಲೇಶ್ವರ ಆಚಾರಿ, ವಿಜಯ ಮುರ್ಡೇಶ್ವರ, ಲೋಕೇಶ್ ಮುರ್ಡೇಶ್ವರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry