ಮಂಗಳವಾರ, ಡಿಸೆಂಬರ್ 10, 2019
23 °C

ಆದಾಯ ತಂದ ಅಲ್ಪ ಬೆಳೆಗಳು

Published:
Updated:
ಆದಾಯ ತಂದ ಅಲ್ಪ ಬೆಳೆಗಳು

ಹೊಲದ ತುಂಬ ಸುಗಂಧ ಸೂಸುವ ತುಳಸಿ, ಅಲ್ಲೇ ಪಕ್ಕದಲ್ಲಿ ಗಿಡಗಳ ತುಂಬ ತೂಗಾಡುತ್ತಿರುವ ದಾಳಿಂಬೆಗಳು. ಮತ್ತೊಂದೆಡೆ, ತೊನೆದಾಡುತ್ತಿರುವ ನಿಂಬೆಗಳು... ಜಮೀನಿನ ತುಂಬಾ ಹಸಿರಿನ ಹೊದಿಕೆ.

ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹೀರೆಬೆಣಕಲ್ ಗ್ರಾಮದ ಯಂಕಪ್ಪ ಕಟ್ಟಿಮನಿ ಅವರ ಜಮೀನಿನ ಚಿತ್ರಣ. ತಮ್ಮ 12 ಎಕರೆ ಜಮೀನಿನಲ್ಲಿ ದಾಳಿಂಬೆ, ನಿಂಬೆ, ಕರಿಬೇವು, ತೆಂಗು, ಪೇರಳೆ, ತುಳಸಿಯನ್ನು ಬೆಳೆದಿದ್ದಾರೆ ಇವರು.

6 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಕೆಸರ್ ತಳಿಯ ಈ ಹಣ್ಣು ತುಂಬಾ ರುಚಿಕರ. ಗಿಡವೊಂದು 70–100 ಹಣ್ಣುಗಳನ್ನು ಬಿಡುತ್ತದೆ. ದಾಳಿಂಬೆಗೆ ಹನಿನೀರಾವರಿ ಪದ್ಧತಿ ಅಳವಡಿಸಿದ್ದಾರೆ. ‘ಎಕರೆ ದಾಳಿಂಬೆ ಬೆಳೆಗೆ 1,50 ಲಕ್ಷ ರೂ‍ಪಾಯಿ ಖರ್ಚಾದರೆ, ಲಾಭ 2 ರಿಂದ 3 ಲಕ್ಷ ಆಗುತ್ತದೆ’ ಎನ್ನುತ್ತಾರೆ ಯಂಕಪ್ಪ.

ಕೇರಳ, ತಮಿಳುನಾಡಿಗೆ ದಾಳಿಂಬೆ ರಫ್ತು ಕೂಡ ಆಗುತ್ತಿದೆ. ಜೊತೆಗೆ ತಾವೇ ಸಸಿಗಳನ್ನು ಲಿಂಗಸೂರು, ಕೊಳ್ಳೆಗಾಲ, ರಾಯಚೂರು, ಮಾನ್ವಿ, ಕಾರಟಗಿ, ಕನಕಗಿರಿ ಮೊದಲಾದ ಕಡೆಗಳಲ್ಲಿ ಮಾರಾಟ ಮಾಡುತ್ತಲೂ ಇದ್ದಾರೆ.

ಸಾಮಾನ್ಯ ಮತ್ತು ಹೈಬ್ರೀಡ್ ಎಂಬ ಎರಡು ರೀತಿಯ ನಿಂಬೆ ಬೆಳೆಯುತ್ತಿದ್ದಾರೆ. ಜಮೀನಿನ ತುಂಬೆಲ್ಲ ಜವಾರಿ ಕರಿಬೇವಿನ ಪರಿಮಳವೂ ಹರಡಿದೆ. ಹೊಲದ ಸುತ್ತಮುತ್ತ ತೆಂಗು, ಚಿಕ್ಕು ಗಿಡಗಳನ್ನು ಬೆಳೆಸಿದ್ದಾರೆ. ಜಮೀನು ರಕ್ಷಣೆಗೆಂದು ನಡುವೆ ಬೇವಿನಮರ ಹಾಗೂ ಟೀಕ್‍ ಗಿಡಗಳಿವೆ.

ತುಳಸಿ ವಹಿವಾಟು: ಎರಡು ಎಕರೆಯಲ್ಲಿ ರಾಮತಳಿ ಮತ್ತು ಕೃಷ್ಣತಳಿ ಎಂಬ ಎರಡು ವಿಧದ ತುಳಸಿ ಬೆಳೆದಿದ್ದಾರೆ. ಗ್ರೀನ್‌ ಟೀ ತಯಾರಿಕೆಗೆ ಬೇಕಿರುವ ಕೃಷ್ಣತಳಿ ತುಳಸಿ ಎಲೆಗಳನ್ನು ಒಣಗಿಸಿ ಪ್ಯಾಕೆಟ್‍ಗಳಾಗಿ ಮಾಡಿ ನೀಡುತ್ತಿದ್ದಾರೆ. ಇವರ ಈ ಕೃಷಿಕಾಯಕಕ್ಕೆ ಕುಟುಂಬವೂ ಬೆನ್ನೆಲುಬಾಗಿ ನಿಂತಿದೆ.

 

ಪ್ರತಿಕ್ರಿಯಿಸಿ (+)