ಬಿರುಸುಗೊಂಡ ರಾಜಕೀಯ ಮುಖಂಡರ ಪ್ರಚಾರ

7
ಸುಡು ಬಿಸಿಲಿನಲ್ಲಿ ಬಿರುಸಿನ ಸುತ್ತಾಟ; ಮತದಾರರ ಒಲವು ಗಳಿಸಲು ನಾನಾ ರೀತಿಯ ಕಸರತ್ತು

ಬಿರುಸುಗೊಂಡ ರಾಜಕೀಯ ಮುಖಂಡರ ಪ್ರಚಾರ

Published:
Updated:

ಕೆಜಿಎಫ್: ವಿಧಾನಸಭಾ ಚುನಾವಣೆಗೆ ಪೂರಕವಾಗಿ ಪ್ರಮುಖ ರಾಜಕೀಯ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು ಮತಯಾಚನೆ ಆರಂಭಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್‌ ಮೂರು ದಿನಗಳಿಂದ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಸುಂದರಪಾಳ್ಯ, ಕ್ಯಾಸಂಬಳ್ಳಿ ಹಾಗೂ ಮಾರಿಕುಪ್ಪಂ ಪಂಚಾಯಿತಿಗಳಲ್ಲಿ ಪ್ರಚಾರ ನಡೆಸಿ, ಭಾನುವಾರ ನಗರದ ಹಲವು ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ರೂಪಾ ಅವರಿಗೆ ಈ ಬಾರಿಯೂ ಟಿಕೆಟ್‌ ಸಿಗುವುದು ಖಚಿತವಾಗಿಲ್ಲ. ಆದರೂ ತಂದೆಯ ಕೃಪಾಕಟಾಕ್ಷದಿಂದ ಟಿಕೆಟ್‌ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈಚೆಗೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ಮುನಿಯಪ್ಪ ಕಾರ್ಯಕರ್ತರಿಗೆ ಸ್ಪಷ್ಟವಾದ ಸಂದೇಶ ನೀಡಿದ್ದರು. ರಾಜ್ಯ ಸಮಿತಿ ರೂ‍‍ಪಾ ಅವರ ಹೆಸರನ್ನು ಮಾತ್ರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಟಿಕೆಟ್ ಸಿಗುವುದರ ಬಗ್ಗೆ ಅನುಮಾನ ಬೇಡ. ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಬೇಕು ಎಂದಿದ್ದರು. ಕೇಂದ್ರ ಸಮಿತಿಯ ಆಯ್ಕೆ ಸಮಿತಿಯಲ್ಲಿ ಮುನಿಯಪ್ಪ ಆಹ್ವಾನಿತ ಸದಸ್ಯರಾಗಿದ್ದಾರೆ. ಆ ವಿಶ್ವಾಸದಿಂದಲೇ ರೂಪಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ.

ಜೆಡಿಎಸ್‌ನಲ್ಲಿ ಎಂ.ಭಕ್ತವತ್ಸಲಂ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಜೆಡಿಎಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿದ ಕಾರ್ಮಿಕ ಮುಖಂಡ ಕೆ. ರಾಜೇಂದ್ರನ್ ಹಾಗೂ ಇತರ ಆಕಾಂಕ್ಷಿಗಳು ತಣ್ಣಾಗಾಗಿದ್ದಾರೆ. ಭಕ್ತವತ್ಸಲಂ ನಗರದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಆಂಡರಸನ್‌ಪೇಟೆಯ ಚರ್ಚ್‌ಗಳಿಗೆ ಭೇಟಿ ನೀಡಿ, ಕ್ರೈಸ್ತ ಸಮುದಾಯ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಯಲ್ಲಿ ಟಿಕೆಟ್ ಇನ್ನೂ ಕಗ್ಗಂಟಾಗಿದೆ. ಪಕ್ಷದಲ್ಲಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ವೈ.ಸಂಪಂಗಿ ಮತ್ತೆ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಲೋಕಾಯುಕ್ತ ಪ್ರಕರಣದಿಂದಾಗಿ ಕಳೆದ ಬಾರಿ ಟಿಕೆಟ್ ವಂಚಿತರಾಗಿದ್ದ ಅವರು, ತಮ್ಮ ತಾಯಿ ರಾಮಕ್ಕ ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದರು. ರಾಮಕ್ಕ ಶಾಸಕರಾದರೂ, ಕ್ಷೇತ್ರದ ಎಲ್ಲಾ ಉಸ್ತುವಾರಿಯನ್ನು ಸಂಪಂಗಿ ಅವರೇ ವಹಿಸಿಕೊಂಡಿದ್ದರು. ಅಧಿಕಾರಿಗಳೂ ಎಲ್ಲ ಕೆಲಸಕ್ಕೆ ಇವರನ್ನೇ ಮಾಹಿತಿ ಕೇಳುತ್ತಿದ್ದರು. ಲಂಚ ಪ್ರಕರಣಕ್ಕೆ ಸಂಬಂಧಿಸಿದ ಮೊಕದ್ದಮೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸಂಪಂಗಿ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಪಕ್ಷದ ನಾಯಕರೂ ಕೂಡ ಅವರಿಗೇ ಟಿಕೆಟ್‌ ನೀಡಬೇಕು ಎಂದು ಹೇಳುತ್ತಿದ್ದಾರೆ. ಅಕಸ್ಮಾತ್‌ ಅವರಿಗೆ ಟಿಕೆಟ್ ತಪ್ಪಿದರೆ, ಅವರ ತಾಯಿ ರಾಮಕ್ಕ ಅಥವಾ ಅವರ ಪುತ್ರಿ ಅಶ್ವಿನಿಗೆ ಟಿಕೆಟ್‌ ಪಡೆಯಲಿದ್ದಾರೆಯೆ ಎಂಬುದು ಕುತೂಹಲದ ಸಂಗತಿ.

ರಿಪಬ್ಲಿಕನ್‌ ಪಕ್ಷದ ಎಸ್‌. ರಾಜೇಂದ್ರನ್‌ ಪ್ರಚಾರ ನಡೆಸುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಅವರಿಗೆ ಗ್ರಾಮೀಣ ಭಾಗ ಸ್ವಲ್ಪ ಕಬ್ಬಿಣದ ಕಡಲೆಯಾಗಿದೆ. ನಗರದ ವಿವಿಧ ಕಾಲೊನಿಗಳಲ್ಲಿ ನಿರಂತರವಾಗಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ವಳ್ಳಲ್‌ ಮುನಿಸ್ವಾಮಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಚುನಾವಣೆ ಘೋಷಣೆಗೆ ಮೊದಲೇ ಆಟೊ ಚಾಲಕರು, ಪೌರ ಕಾರ್ಮಿಕರಿಗೆ ವಿಶೇಷ ಕೊಡುಗೆ, ಸಮವಸ್ತ್ರ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್‌, ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂದು ಈಗಾಗಲೇ ಘೋಷಣೆಯಾಗಿದ್ದು, ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದಾರೆ. ದೇವಾಲಯ, ಸಂಘ ಸಂಸ್ಥೆಗಳಿಗೆ ಅಪಾರ ಕೊಡುಗೆ ನೀಡಿ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry