ಸೋಮವಾರ, ಜುಲೈ 13, 2020
25 °C

ಅದಿತಿಯ ಅವಕಾಶ ತತ್ತ್ವ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಅದಿತಿಯ ಅವಕಾಶ ತತ್ತ್ವ

ಅಪ್ಪ ಎಹಸಾನ್ ಹೈದರಿ. ಅಮ್ಮ ವಿದ್ಯಾ ರಾವ್. ಮಗಳ ಹೆಸರು ಅದಿತಿ ರಾವ್ ಹೈದರಿ. ಅಂತರ್ಧರ್ಮೀಯ ಮದುವೆಯಾಗಿದ್ದ ಅಪ್ಪ-ಅಮ್ಮ ಬೇರೆ ಬೇರೆಯಾಗಿ ಬದುಕ ತೊಡಗಿದಾಗ ಅದಿತಿ ತೊದಲುತ್ತಿದ್ದ, ಎರಡು ವರ್ಷದ ಕೂಸು.

ಚಿಕ್ಕಪ್ರಾಯದಲ್ಲಿಯೇ ಭರತನಾಟ್ಯ ಕಲಿಯಲು ತೊಡಗಿದ್ದು ಅಮ್ಮನ ಪ್ರೇರಣೆಯಿಂದ. ಅಮ್ಮ ಠುಮ್ರಿ ಹಾಡುವುದರಲ್ಲಿ, ಶಾಸ್ತ್ರೀಯ ನೃತ್ಯದಲ್ಲಿ ಎತ್ತಿದಕೈ. ಹೈದರಾಬಾದ್‌ನಲ್ಲಿ ಆಗ ಹೆಸರು ಮಾಡಿದ್ದ ಲೀಲಾ ಸ್ಯಾಮ್ಸನ್ ಬಳಿ ಭರತನಾಟ್ಯ ಕಲಿಯಲು ಆರಂಭಿಸಿದ ಅದಿತಿ ಹನ್ನೊಂದನೇ ವಯಸ್ಸಿನ ಹೊತ್ತಿಗೆ ಪ್ರೇಕ್ಷಕರ ಮನಸೂರೆಗೊಳ್ಳಲಾರಂಭಿಸಿದ್ದನ್ನು ಅಮ್ಮ ಸೂಕ್ಷ್ಮವಾಗಿ ಗಮನಿಸಿದರು.

ದೊಡ್ಡವಳಾದ ಮೇಲೆ ಏನಾಗುವೆ ಎಂದು ಯಾರು ಪ್ರಶ್ನಿಸಿದರೂ ಅದಿತಿ ಕೊಡುತ್ತಿದ್ದ ಉತ್ತರ ‘ನಟಿಯಾಗುವೆ’ ಎನ್ನುವುದೇ ಆಗಿರುತ್ತಿತ್ತು. ನೃತ್ಯನಂಟಿನ ಕಾರಣಕ್ಕೆ ತಮಿಳು ಚಿತ್ರರಂಗ ಅದಿತಿ ಚಹರೆಯನ್ನು ಬೇಗ ಗುರುತಿಸಿತು. ನೃತ್ಯಗಾರ್ತಿ ಪದ್ಮಿನಿ ರವಿ ನಿರ್ಮಾಣದ ‘ಶೃಂಗಾರಂ’ ತಮಿಳು ಚಲನಚಿತ್ರದಲ್ಲಿ ಮೊದಲಿಗೆ ಅದಿತಿ ನಟಿಸಿದರು. 2004ರಲ್ಲಿ ತೆರೆಕಂಡ ಆ ಸಿನಿಮಾ ನಿರ್ದೇಶಿಸಿದವರು ಶಾರದಾ ರಾಮನಾಥನ್. ಅದರಲ್ಲಿನ ದೇವದಾಸಿಯ ಪಾತ್ರ ಕೆಲವು ಚಿತ್ರೋತ್ಸವಗಳಲ್ಲಿ ಅದಿತಿಗೆ ಹೆಸರು ತಂದುಕೊಟ್ಟಿತು. 2007ರಲ್ಲಿ ಅದು ತೆರೆಕಂಡಿತಾದರೂ ಜನಪ್ರಿಯವಾಗಲಿಲ್ಲ. ಆದರೆ, ವಿಮರ್ಶಕರ ಮೆಚ್ಚುಗೆ ಗಳಿಸಿತು.

ನಟಿ ಶೋಭನಾ ಮುಖ ಲಕ್ಷಣದ ಹೋಲಿಕೆ ಇದ್ದ ಅದಿತಿ ಹೆಸರನ್ನು ಸುಹಾಸಿನಿ ಮಲಯಾಳಂ ಸಿನಿಮಾಗೂ ಶಿಫಾರಸು ಮಾಡಿದರು. ಅದರ ಫಲವೇ ಮಮ್ಮುಟ್ಟಿ ಅಭಿನಯದ ‘ಪ್ರಜಾಪತಿ’ ಸಿನಿಮಾದಲ್ಲಿನ ಅವಕಾಶ.

ಅದಿತಿ ಜಿಗಿದರು. ದೆಹಲಿಯಲ್ಲಿ ಒಂದು ಕಾಲು, ಚೆನ್ನೈನಲ್ಲಿ ಇನ್ನೊಂದು, ಹೈದರಾಬಾದ್ ನಲ್ಲಿ ಮತ್ತೊಂದು. ನೃತ್ಯ ವೇದಿಕೆ ಕರೆದರೆ ಅಲ್ಲಿಗೂ ಸೈ. ಮಾಡೆಲಿಂಗ್‌ಗೆ ಬುಲಾವು ಬಂದರೆ ಅದಕ್ಕೂ ಜೈ. ಅಭಿನಯಿಸುವ ಅವಕಾಶ ಕೈಬೀಸಿ ಕರೆದರಂತೂ ಪುಳಕ. ‘ನಾನು ಜನ್ಮಜಾತ ಡ್ರಾಮಾ ಕ್ವೀನ್’ ಎಂದೇ ತನ್ನನ್ನು ಈಗಲೂ ಬಣ್ಣಿಸಿಕೊಳ್ಳುವ ಅದಿತಿ ತಮ್ಮ ಮುಕ್ತತೆಯ ಕಾರಣದಿಂದಲೇ ಮಿತಿಯನ್ನೂ ಹಾಕಿಕೊಂಡುಬಿಟ್ಟರು. ಪೋಷಕ ಪಾತ್ರಗಳಿಗೆ ಮೊದ ಮೊದಲು ಹೆಚ್ಚಾಗಿ ಒಪ್ಪಿಕೊಂಡಿದ್ದೇ ಅವರಿಗೆ ಒಂದು ರೀತಿ ಮಿತಿಯನ್ನೂ ಹೇರಿತು. ‘ನನಗೆ ದೊಡ್ಡ ಪಾತ್ರಗಳನ್ನು ಕೊಡಿ’ ಎಂದು ಅವರು ಸುದ್ದಿಗೋಷ್ಠಿಯಲ್ಲೇ ಒಮ್ಮೆ ವಿನಂತಿಯ ಧಾಟಿಯಲ್ಲಿ ಕೇಳಿಕೊಂಡಿದ್ದರು.

‘ರಾಕ್ ಸ್ಟಾರ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೋಡಿಯಾಗಿ ಕಾಶ್ಮೀರಿ ಹುಡುಗಿಯನ್ನು ಹೋಲುವ ಮುಖವನ್ನು ನಿರ್ದೇಶಕ ಇಮ್ತಿಯಾಜ್ ಅಲಿ ಹುಡುಕುತ್ತಿದ್ದರು. ಆಡಿಷನ್‌ಗೆ ಅದಿತಿ ಕೂಡ ಹೋದರು. ಆಮೇಲೆ ಅವರಿಗೆ ಆ ಚಿತ್ರದಲ್ಲಿ ಸಿಕ್ಕಿದ್ದೂ ಪೋಷಕ ನಟಿಯ ಪಾತ್ರ. ‘ಡೆಲ್ಲಿ 6’ ಸಿನಿಮಾದಲ್ಲಿ ಕೂಡ ಅಂಥ ಅವಕಾಶವೇ ಒಲಿದದ್ದು.

ಅದಿತಿ ಕೊನೆಗೆ ಒಂದು ತೀರ್ಮಾನಕ್ಕೆ ಬಂದರು. ಪ್ರತಿಭಾವಂತ ನಿರ್ದೇಶಕರು ಯಾವ ಪಾತ್ರ ಕೊಟ್ಟರೂ ಸೈ ಎಂದು ಘೋಷಿಸಿದರು. ವಿಶಾಲ್ ಭಾರದ್ವಾಜ್, ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಎಲ್ಲರೂ ಅದಿತಿ ಅವರಿಗೆ ಫೋನ್ ಮಾಡಲಾರಂಭಿಸಿದ್ದೇ ಈ ಘೋಷಣೆ ಹೊರಬಿದ್ದ ನಂತರ.

‘ನನ್ನ ಭುಜಗಳ ಮೇಲೆ ಗುಳಿ ಬೀಳುತ್ತವೆ. ಅವನ್ನು ಫೋಟೊಶಾಪ್‌ನಲ್ಲಿ ಅಳಿಸಬೇಡಿ. ನನ್ನ ಕುರಿತು ಒಂದೇ ಸಾಲಿನಲ್ಲಿ ಬಣ್ಣಿಸಿಕೊಳ್ಳುವಂತೆ ಕೇಳಬೇಡಿ. ಕಡಿಮೆ ಪದಗಳಲ್ಲಿ ನನ್ನನ್ನು ನಾನು ಮಾರುಕಟ್ಟೆ ಮಾಡಿಕೊಳ್ಳಲಾರೆ’ ಎಂದು ಮಾರ್ಮಿಕವಾಗಿ ಹೇಳುವ ಅದಿತಿ ಒಂದು ಕಾಲದ ಹೈದರಾಬಾದ್ ರಾಜರ ಮೊಮ್ಮಗಳು. ಇದನ್ನು ಅವರು ಎಂದೂ ಒತ್ತಿ ಹೇಳಿಕೊಂಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.