ಶನಿವಾರ, ಡಿಸೆಂಬರ್ 14, 2019
20 °C
ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನರು ಹೈರಾಣ: ಮಡಿಕೆಗೆ ಹೆಚ್ಚಿದ ಬೇಡಿಕೆ

ತಂಪಾದ ನೀರಿಗೆ ಮಡಿಕೆಯೇ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂಪಾದ ನೀರಿಗೆ ಮಡಿಕೆಯೇ ಆಸರೆ

ಕೊಪ್ಪಳ: 'ಫೆಬ್ರುವರಿಯಲ್ಲಿ ಶುರುವಾಗಬೇಕಿದ್ದ ಬೇಸಿಗೆ ಈ ಬಾರಿ ತಡವಾಗಿ ಆರಂಭವಾಗಿದೆ. ಬಿಸಿಲಿನ ಪ್ರಮಾಣ ಕೊಂಚ ಏರಿಕೆಯಾಗುತ್ತಿದೆ. ಹಾಗಾಗಿ ಜಿಲ್ಲೆಯ ಜನರು ಮಡಿಕೆ ಖರೀದಿಗೆ ಮುಂದಾಗಿದ್ದಾರೆ'.ಇದು ನಗರದ ಸಾಲರಜಂಗ್‍ ರಸ್ತೆಯ ಚೆನ್ನಮ್ಮ ವೃತ್ತದ ಬಳಿಯ ಮಡಿಕೆ ವ್ಯಾಪಾರಿ ಬಸವರಾಜ್‍ ಕುಂಬಾರ ಅವರ ಅಭಿಪ್ರಾಯ.

'ಕುಂಬಾರಿಕೆ ವಂಶ ಪರಂಪರಾಗತವಾಗಿ ಬಂದ ಕುಲಕಸುಬು. ನಾನು ಸುಮಾರು 15 ವರ್ಷದಿಂದ ಮಡಿಕೆ ವ್ಯಾಪಾರ ಮಾಡುತ್ತಿದ್ದೇನೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಮಡಿಕೆ ಮಾರಾಟ ಮಾಡುತ್ತೇವೆ. ಹಬ್ಬಗಳು ಹಾಗೂ ಸಿಜನ್ ಗೆ ತಕ್ಕಂತೆ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಗಣೇಶ ಚತುರ್ಥಿಯಲ್ಲಿ ಗಣೇಶನ ಮೂರ್ತಿ, ದೀಪಾವಳಿಯಲ್ಲಿ ಹಣತೆಗಳು ಹೀಗೆ ಅವಶ್ಯಕತೆಗೆ ಅನುಗುಣವಾಗಿ ತಯಾರಿಸಿ ಮಾರಾಟ ಮಾಡುತ್ತೇವೆ. ಅಲ್ಲದೆ ಹಣ ಸಂಗ್ರಹದ ಹುಂಡಿ, ಸಣ್ಣ ಕುಡಿಕೆಗಳು, ಒಲೆಗಳು, ಮಣ್ಣಿನ ತಟ್ಟೆಗಳು ಹೀಗೆ ಮಣ್ಣಿನ ವಸ್ತುಗಳನ್ನು ಮಾರಾಟ ಮಾಡುತ್ತೇವೆ' ಎಂದು ಬಸವರಾಜ್‍ ಹೇಳಿದರು.'ನಗರದಲ್ಲಿ 26 ಕುಂಬಾರ ಕುಟುಂಬಗಳಿವೆ. ಈ ಪೈಕಿ 4 ಕುಟುಂಬಗಳು ಮಾತ್ರ ಕುಂಬಾರಿಕೆಯಿಂದಲೇ ಜೀವನ ಸಾಗಿಸುತ್ತಿವೆ.' ಎಂದರು.

'ಜನರು ಆರಂಭದಲ್ಲಿ ಫ್ರಿಡ್ಜ್ ಖರೀದಿಗೆ ಮುಂದಾಗಿದ್ದರು. ಆದರೆ ಅದರಲ್ಲಿ ಸಂಗ್ರಹಿಸಿಟ್ಟ ನೀರು ಕುಡಿಯುವುದರಿಂದ ಗಂಟಲು ನೋವು ಬರುತ್ತದೆ. ಅಲ್ಲದೆ ಮಣ್ಣಿನ ಮಡಿಕೆಯನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಶ್ರೀಮಂತರು ಬಡವರು ಹೀಗೆ ಎಲ್ಲ ವರ್ಗದವರು ಮಡಿಕೆ ಖರೀದಿಗೆ ಮುಂದಾಗುತ್ತಿದ್ದಾರೆ' ಎಂದು ಜನರ ನಾಡಿಮಿಡಿತ ತಿಳಿಸಿದರು ಬಸವರಾಜ್‍.

'6 ತರಹದ ಮಡಿಕೆಗಳು ಬರುತ್ತವೆ. ಒಂದು ಕೊಡ ನೀರಿನ ಸಾಮರ್ಥ್ಯದ ಮಡಿಕೆಗೆ ₹ 250 ದರ ಇದೆ. ವೈಟ್‍ ಮಡಿಕೆಗೆ ₹ 500ರಿಂದ ₹ 600 ರವರೆಗೆ ಬೆಲೆ ಇದೆ. ಹೀಗೆ ಮಡಿಕೆಯ ಅಳತೆಗೆ ತಕ್ಕಂತೆ ದರ ಬದಲಾಗುತ್ತದೆ. ಮೊದಲು ನಾವೇ ಮಡಿಕೆ ತಯಾರಿಸುತ್ತಿದ್ದೇವು. ಆದರೆ ಭಟ್ಟಿ ಮಾಡಲು ಜಾಗದ ಕೊರತೆ ಇರುವುದರಿಂದ ಕಳೆದ 2 ವರ್ಷದಿಂದ ಹರಿಹರ, ಕೂಡ್ಲಿಗಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಹೀಗೆ ವಿವಿಧ ಕಡೆಗಳಿಂದ ಮಡಿಕೆ ಆಮದು ಮಾಡಿಕೊಳ್ಳುತ್ತೇವೆ. ಆದರೆ ಈ ಬಾರಿ ರಾಜಸ್ತಾನದಿಂದ ತರಿಸಿಕೊಂಡಿದ್ದೇವ. ಇದರಿಂದ ಗ್ರಾಹಕರಿಗೆ ಕೊಂಚ ದರ ತುಟ್ಟಿ ಆಗಲಿದೆ. ನಾವೇ ತಯಾರಿಸಿ ಮಾರಾಟ ಮಾಡಿದರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಡಿಕೆ ಸಿಗುತ್ತದೆ. ಅಲ್ಲದೆ ನಮಗೆ ವಾಹನ ವೆಚ್ಚವು ಉಳಿತಾಯವಾಗುತ್ತದೆ. ನಮಗೂ ಲಾಭ ಆಗುತ್ತದೆ' ಎಂದು ಬಸವರಾಜ್‍ ಹೇಳಿದರು.

ಕುಂಬಾರಿಕೆ ಉಳಿಸಲು ಮನವಿ

‘ಕುಂಬಾರಿಕೆ ಮಾಡಲು ಬಟ್ಟಿ ತಯಾರಿಸಲು ಹೊರವಲಯದಲ್ಲಿ ಜಾಗ ಬೇಕು. ಇಲ್ಲಿಯೇ ಮಡಿಕೆಗಳನ್ನು ತಯಾರಿಸಬಹುದು. ಇದರಿಂದ ಕುಂಬಾರರಿಗೂ ಲಾಭ ಆಗುತ್ತದೆ. ಮಡಿಕೆ ಬೆಲೆ ಕೊಂಚ ಇಳಿಮುಖ ವಾಗುತ್ತದೆ. ಗ್ರಾಹಕರಿಗೂ ಖರೀದಿಸಲು ಅನುಕೂಲ ಆಗುತ್ತದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದು ಬಸವರಾಜ್‍ ತಿಳಿಸಿದರು.

**

ಕೊಪ್ಪಳದಲ್ಲಿ 26 ಕುಂಬಾರ ಕುಟುಂಬಗಳಿವೆ. 4 ಕುಟುಂಬಗಳು ಕುಂಬಾರಿಕೆಯಿಂದ ಜೀವನ ಸಾಗಿಸುತ್ತಿವೆ. ವ್ಯಾಪಾರದ ಕೊರತೆಯಿಂದ ಕುಟುಂಬಗಳು ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿವೆ – ಬಸವರಾಜ್‍ ಕುಂಬಾರ, ಮಡಿಕೆ ವ್ಯಾಪಾರಿ .

**

ಅನಿಲ್‍ ಬಾಚನಹಳ್ಳಿ

ಪ್ರತಿಕ್ರಿಯಿಸಿ (+)