ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ನಿಜವಾದ ದೇಶಪ್ರೇಮಿಗಳು

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೋರಮಂಗಲದಿಂದ ಇಂದಿರಾನಗರಕ್ಕೆ ಹೋಗುವ ಹಾದಿ ಮಧ್ಯೆ ದೊಮ್ಮಲೂರಿಗಿಂತ ತುಸು ಮೊದಲು ಹಸಿರನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿರುವ ಸೈನ್ಯ ತರಬೇತಿ ಸ್ಥಳವಿದೆ. ಮಳೆಗಾಲವೊಂದನ್ನು ಬಿಟ್ಟು ಉಳಿದೆಲ್ಲ ಕಾಲದಲ್ಲಿಯೂ ಈ ಹಾದಿಯ ಇಕ್ಕೆಲಗಳಲ್ಲೂ ಮಜ್ಜಿಗೆ ಮತ್ತು ಅಂಬಲಿ ಮಾರುವ ಹಲವು ತಳ್ಳುಗಾಡಿಗಳು ಕಾಣಿಸುತ್ತವೆ. ಈ ತಳ್ಳುಗಾಡಿಗಳನ್ನೇ ಅವಲಂಬಿಸಿ ಅನೇಕ ಬಡ ಕುಟುಂಬಗಳು ಜೀವನ ನಿರ್ವಹಿಸುತ್ತಿವೆ.

ಆ ಹಾದಿಯಲ್ಲಿ ಹೋಗುವಾಗ ಯಾವುದಾದರೊಂದು ತಳ್ಳುಗಾಡಿಯ ಬಳಿ ನಿಂತು ಗುಟುಕು ಅಂಬಲಿಯನ್ನೋ, ಮಜ್ಜಿಗೆಯನ್ನೋ ಕುಡಿದು, ಅಂಗಡಿಯವರೊಡನೆ ಒಂದಿಷ್ಟು ಹರಟಿ ಮುಂದುವರಿಯುವುದು ಅಭ್ಯಾಸ. ಒಂದು ದಿನ ಯಾವುದೋ ಕೆಲಸದ ಮೇಲೆ ಇಂದಿರಾನಗರದ ಕಡೆ ಹೋಗುತ್ತಿದ್ದೆ. ತಳ್ಳುಗಾಡಿಯೊಂದರ ಮುಂದೆ ಮಜ್ಜಿಗೆಗಾಗಿ ಬೈಕ್ ನಿಲ್ಲಿಸಿದ್ದೆ.

ಮಜ್ಜಿಗೆ ಮತ್ತು ಅಂಬಲಿ ಮಾರುತ್ತಿದ್ದ ಮಧ್ಯ ವಯಸ್ಸಿನ ಹೆಂಗಸು, ಬೇಲಿಯ ಆಚೆಕಡೆ ನಿಂತು ಏನನ್ನೋ ಕೇಳುತ್ತಿದ್ದ ಸೈನಿಕನೊಬ್ಬನ ಮುಖವನ್ನೇ ನೋಡುತ್ತಾ ನಿಂತಿದ್ದರು. ಪಕ್ಕದಲ್ಲಿ ಅಂಬಲಿ ಕುಡಿಯುತ್ತಿದ್ದ ಇಬ್ಬರು ಕ್ಯಾಬ್ ಡ್ರೈವರ್‌ಗಳು ಕೂಡ ಮುಖಮುಖ ನೋಡುತ್ತಾ ನಿಂತು ಕೊಂಡಿದ್ದರು.

ಸಮಸ್ಯೆ ಇಷ್ಟೇ ಸೈನಿಕನಿಗೆ ಎರಡು ಲೋಟ ಮಜ್ಜಿಗೆ ಬೇಕು. ಅವನದನ್ನು ಹಿಂದಿಯಲ್ಲಿ ಕೇಳುತಿದ್ದಾನೆ. ಈಕೆ ಕನ್ನಡತಿ ಅವನ ಭಾಷೆ ಅರ್ಥವಾಗುತ್ತಿಲ್ಲ. ನಾನು ಆತನ ಹತ್ತಿರ ಹೋಗಿ ವಿಚಾರಿಸಿದೆ. ‘ಎರಡು ಲೋಟ ಮಜ್ಜಿಗೆ ಕೇಳ್ತಾ ಇದ್ದಾನೆ, ಕೊಡಮ್ಮ’ ಎಂದೆ. ‘ಅಯ್ಯೋ, ಅಷ್ಟೇನಾ ಸಾ’ ಎಂದವಳೇ ಅವನು ಬೇಲಿಯಾಚೆಗಿನಿಂದ ಚಾಚಿದ ಚೊಂಬಿಗೆ ಮಜ್ಜಿಗೆ ಹುಯ್ದು ನನಗೂ ಮಜ್ಜಿಗೆ ಕೈಗಿಟ್ಟಿದ್ದಳು.

ಮುಂದೆ ನಡೆದಿದ್ದು ದೇಶಭಕ್ತಿಯ ಪಾಠ.

ಮಜ್ಜಿಗೆ ಕುಡಿದ ಸೈನಿಕ ಮೂವತ್ತು ರೂಪಾಯಿಯನ್ನು ಈಕೆಯತ್ತ ಚಾಚಿದ. ಆಕೆ ನನ್ನತ್ತ ತಿರುಗಿ, ‘ಅಣ್ಣ ದುಡ್ಡು ಬೇಡ ಅಂತ ಹೇಳಿ ಅವ್ರಿಗೆ. ಅವ್ರ ಭಾಷೇಲಿ’ ಎಂದಳು. ನಾನು ಆಶ್ಚರ್ಯದಿಂದ ‘ಯಾಕಮ್ಮಾ’ ಎಂದೆ.

‘ಅಣ್ಣ ಅವ್ರು ದೇಶ ಕಾಯೋರು. ಅವ್ರ ದಾಹ ತೀರಿಸಿದ್ದಕ್ಕೆ ದುಡ್ಡು ಇಸ್ಕೊಂಡ್ರೆ ಶಿವ ಮೆಚ್ತಾನಾ’ ಎಂದಳು.

ಮೂರು ಜನ್ಮ ಕುಳಿತು ತಿನ್ನುವಷ್ಟಿದ್ದರೂ, ಸೈನಿಕರ ಭತ್ಯೆ, ಶಸ್ತ್ರಾಸ್ತ್ರಗಳ ದುಡ್ಡನ್ನು ತಿನ್ನುವ ನೀಚ ರಾಜಕಾರಣಿಗಳು ನನ್ನ ಕಣ್ಮುಂದೆ ಹಾದು ಹೋದರು. ಆಕೆಯ ಬಗ್ಗೆ ಹೆಮ್ಮೆ ಮೂಡಿತು. ನಾನು ಸೈನಿಕನ ಸಮೀಪ ಹೋಗಿ, ‘ಆಕೆಗೆ ಹಣ ಬೇಡಂತೆ ನೀನಿನ್ನು ಚೆನ್ನಾಗಿ ದೇಶ ಕಾಯಬೇಕಂತೆ’ ಎಂದೆ.

‘ಇಲ್ಲ ಅಣ್ಣ, ನಾನೊಬ್ಬ ಸೈನಿಕ, ದೇಶಕಾಯೋದು ನನ್ನ ಕರ್ತವ್ಯ. ಅದಕ್ಕೆ ಸರ್ಕಾರ ಸಂಬಳಕೊಡುತ್ತೆ. ಜನಸಾಮಾನ್ಯರ ದುಡ್ಡು ಬೇಡ’ ಎಂದು ಅವರು ಖಡಾಖಂಡಿತವಾಗಿ ಹೇಳಿದರು. ನನಗೆ ತಕ್ಷಣ ನೆನಪಾಗಿದ್ದು ಬೀದಿಬದಿಯ ವ್ಯಾಪಾರಿಗಳನ್ನು ಹತ್ತು ಇಪ್ಪತ್ತು ರೂಪಾಯಿಗಳಿಗೆ ಪೀಡಿಸುವ ನಮ್ಮ ಪೊಲೀಸರು.

ಇಬ್ಬರನ್ನೂ ಸಮಾಧಾನಿಸಿ, ಆಕೆಗೆ ನಾ ಕುಡಿದ ಮಜ್ಜಿಗೆಯ ಜೊತೆ ಸೈನಿಕನ ಮಜ್ಜಿಗೆಯ ದುಡ್ಡು ಕೊಟ್ಟು, ನಿಮ್ಮಿಬ್ಬರ ದೇಶಭಕ್ತಿಗೆ ನನ್ನಿಂದೊಂದು ಚಿಕ್ಕ ಸಹಾಯ ಎಂದು ಅಲ್ಲಿಂದ ಹೊರಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT