ಬುಧವಾರ, ಡಿಸೆಂಬರ್ 11, 2019
16 °C

ದತ್ತು ಪುತ್ರನ ಮೈ ಬಣ್ಣ ಬೆಳ್ಳಗಾಗಿಸಲು ಕಪ್ಪು ಕಲ್ಲಿನಿಂದ ತಿಕ್ಕಿ ತೊಳೆದು ಗಾಯಗೊಳಿಸಿದ ಅಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದತ್ತು ಪುತ್ರನ ಮೈ ಬಣ್ಣ ಬೆಳ್ಳಗಾಗಿಸಲು ಕಪ್ಪು ಕಲ್ಲಿನಿಂದ ತಿಕ್ಕಿ ತೊಳೆದು ಗಾಯಗೊಳಿಸಿದ ಅಮ್ಮ

ಭೋಪಾಲ್: ದತ್ತು ಪಡೆದ 5 ವರ್ಷದ ಬಾಲಕನನ್ನು ಬೆಳ್ಳಗಾಗಿಸಲು ಆತನ ಮೈಯನ್ನು ಕಪ್ಪು ಕಲ್ಲಿನಿಂದ ತಿಕ್ಕಿ ತೊಳೆದು ಗಾಯಗೊಳಿಸಿ ಕಿರುಕುಳ ನೀಡಿದ ಘಟನೆ ಇಲ್ಲಿನ ನಿಶಾತ್‍ಪುರ ಎಂಬಲ್ಲಿ ನಡೆದಿದೆ.

ಬಾಲಕನ ಮೈಯನ್ನು ಕಲ್ಲಿನಿಂದ ತಿಕ್ಕಿ ತೊಳೆದು ಗಾಯಗೊಳಿಸುತ್ತಿರುವುದನ್ನು ನೋಡಿ ಬಾಲಕನ ಅಮ್ಮನ ಸಹೋದರಿ ಮಕ್ಕಳ ರಕ್ಷಣಾ ತಂಡಕ್ಕೆ ಕರೆ ಮಾಡಿದ್ದರು.

ನಿಶಾತ್‍ಪುರದಲ್ಲಿ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯಾಗಿರುವ ಸುಧಾ ತಿವಾರಿ ಎಂಬಾಕೆ ಒಂದೂವರೆ ವರ್ಷಗಳ ಹಿಂದೆ ಉತ್ತರಾಖಂಡದ ಮಾತೃಛಾಯಾದಿಂದ ಮಗುವೊಂದನ್ನು ದತ್ತು ಪಡೆದಿದ್ದರು. ಇವರ ಪತಿ ಖಾಸಗಿ ಆಸ್ಪತ್ರೆಯೊಂದರ ನೌಕರರಾಗಿದ್ದಾರೆ.

ಬಾಲಕನನ್ನು ಭೋಪಾಲಕ್ಕೆ ಕರೆ ತಂದಾಗ ಸುಧಾ ಅವರಿಗೆ ಬಾಲಕನ ಚರ್ಮದ ಬಣ್ಣ ಇಷ್ಟವಿರಲಿಲ್ಲ.ಬಾಲಕ ಕಪ್ಪಗಿದ್ದಾನೆ ಎಂದು ಅವನ ಬಗ್ಗೆ ನಿರಾಸಕ್ತಿ ಇತ್ತು. ಹೀಗಿರುವಾಗ ಯಾರೋ ಒಬ್ಬರು ಮಗುವಿನ ಮೈಯನ್ನು ಕಪ್ಪು ಕಲ್ಲಿನಿಂದ ತಿಕ್ಕಿದರೆ ಬೆಳ್ಳಗಾಗುತ್ತದೆ ಎಂದಿದ್ದರು. ಇದನ್ನು ಕೇಳಿ ಸುಧಾ ಬಾಲಕನ ಮೈಯನ್ನು ಕಲ್ಲಿನಿಂದ ತಿಕ್ಕಿ ತೊಳೆದಿದ್ದು, ಆತನ ಸೊಂಟ, ಭುಜ, ಕಾಲು ಕೈಗಳ ಮೇಲೆ ಗಾಯಗಳಾಗಿದ್ದವು.

ನಿಶಾತ್‍ಪುರ ಪೊಲೀಸ್ ಮತ್ತು ಮಕ್ಕಳ ಸಹಾಯಕೇಂದ್ರದ ಸಹಾಯದಿಂದ ಬಾಲಕನ್ನು ರಕ್ಷಣೆ ಮಾಡಲಾಗಿದೆ. ಹಮಿದಿಯಾ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮಕ್ಕಳ ಸಹಾಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಸುಧಾ ಅವರು ಬಾಲಕನಿಗೆ ಕಿರುಕುಳ ನೀಡುತ್ತಿರುವುದನ್ನು ತಡೆಯಲು ನಾನು ಹಲವಾರು ಬಾರಿ ಪ್ರಯತ್ನಿಸಿದ್ದೆ. ಆದರೆ ಆಕೆ ನನ್ನ ಮಾತು ಕೇಳದೇ ಇದ್ದಾಗ ಮಕ್ಕಳ ಸಹಾಯ ಕೇಂದ್ರ ಮತ್ತು ಪೊಲೀಸರ ಸಹಾಯ ಬೇಡಿದೆ ಎಂದು ಸುಧಾ ಅವರ ಸಹೋದರಿ ಶೋಭಾ ಶರ್ಮ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)