ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವರಮಾನ ಹಂಚಿಕೆ: ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿರಲಿ

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ದಕ್ಷಿಣದ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಎನ್ನುವ ಅಪಸ್ವರವು ಈಗ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ವರಮಾನ ಹಂಚಿಕೆ ವಿಷಯದಲ್ಲಿ ಮೊದಲಿನಿಂದಲೂ ಸಂಘರ್ಷ ಇದ್ದೇ ಇದೆ. ಅದೀಗ ತೀಕ್ಷ್ಣ ಸ್ವರೂಪ ಪಡೆಯುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣದ ರಾಜ್ಯಗಳು ಒಂದೇ ದನಿಯಲ್ಲಿ ಮಾತನಾಡುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ತಮ್ಮ ಹೊಸ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರದ ಜತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಘರ್ಷಕ್ಕೆ ಇಳಿದಿದ್ದಾರೆ. ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರು 10 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜ್ಯಗಳಿಗೆ ಕೇಂದ್ರ ಅನುದಾನ ವಿತರಣೆಯ ತಾರತಮ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ಇದೇ 10ರಂದು ದಕ್ಷಿಣ ರಾಜ್ಯಗಳ ಹಣಕಾಸು ಸಚಿವರ ಸಭೆಗೆ ಕೇರಳ ಆತಿಥ್ಯ ವಹಿಸಿದೆ. ತೆರಿಗೆ ವರಮಾನವನ್ನು ವಿವಿಧ ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವುದರ ಕುರಿತ ಕೇಂದ್ರದ ಹೊಸ ಪ್ರಸ್ತಾವವು ಈ ಸಂಘರ್ಷಕ್ಕೆ ಹೊಸ ತೀವ್ರತೆ ನೀಡಿದೆ. ತೆರಿಗೆ ಹಂಚಿಕೆ ಸೂತ್ರಕ್ಕೆ ರಾಜ್ಯಗಳ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳಬೇಕು. 1971ರ ಜನಸಂಖ್ಯೆ ಬದಲಿಗೆ 2011ರ ಜನಸಂಖ್ಯೆ ಆಧರಿಸಿ ತೆರಿಗೆ ವರಮಾನ ಹಂಚಿಕೆಯ ಶಿಫಾರಸು ಮಾಡಬೇಕು ಎಂದು 15ನೇ ಹಣಕಾಸು ಆಯೋಗಕ್ಕೆ ವಿಧಿಸಲಾಗಿರುವ ಕಾರ್ಯಷರತ್ತು  ದಕ್ಷಿಣದ ರಾಜ್ಯಗಳಿಗೆ ಪಥ್ಯವಾಗಿಲ್ಲ. 1971 ರಿಂದ 2011ರ ಅವಧಿಯಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿನ ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ವಿಧಿಸಲಾಗಿದೆ. ತೆರಿಗೆ ವರಮಾನ ಹಂಚಿಕೆಗೆ ಇದೇ ಮಾನದಂಡವಾದರೆ ತಮಗೆ ಅನ್ಯಾಯವಾಗಲಿದೆ ಎನ್ನುವುದು ಅವುಗಳ ಅಹವಾಲು. ಇದು ಸಮರ್ಥನೀಯವಾದ ತರ್ಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಗತಿಪರ ನೀತಿಗಳು ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ತಾವು ಸಾಧಿಸಿದ ಅಭಿವೃದ್ಧಿ ಕಾರಣದಿಂದಾಗಿಯೇ ಕಡಿಮೆ ಅನುದಾನ ಪಡೆಯುವಂತಾಗುವುದು ಎಷ್ಟು ಸರಿ ಎಂಬಂಥ ದಕ್ಷಿಣದ ರಾಜ್ಯಗಳ ವಾದದಲ್ಲಿ ಹುರುಳಿದೆ.

ಕೇಂದ್ರದ ಒಟ್ಟಾರೆ ವರಮಾನದಲ್ಲಿ  ಕರ್ನಾಟಕದ ಪಾಲು ಶೇ 9.56ರಷ್ಟಿದೆ. ತೆರಿಗೆ ವರಮಾನದ ಮರುಹಂಚಿಕೆಯಲ್ಲಿ ರಾಜ್ಯವು ಶೇ 4.5ರಷ್ಟನ್ನು ಮಾತ್ರ ಪಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶವು ತನ್ನ ಪ್ರತಿ ಒಂದು ರೂಪಾಯಿ ತೆರಿಗೆ ಕೊಡುಗೆಗೆ  ಕೇಂದ್ರದಿಂದ ₹ 1.79 ಪಡೆಯುತ್ತದೆ. ಕರ್ನಾಟಕದ ವಿಷಯದಲ್ಲಿ ಇದು ಕೇವಲ 47 ಪೈಸೆಗಳಷ್ಟು ಇರುವುದು ತಾರತಮ್ಯ ನೀತಿಗೆ ಸ್ಪಷ್ಟ ನಿದರ್ಶನವಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಕ್ಷಿಣ ರಾಜ್ಯಗಳಿಗೆ ಭೇಟಿ ನೀಡಿದಾಗಲೆಲ್ಲಾ ಕೇಂದ್ರದ ಅನುದಾನ ಬಳಕೆ ಬಗ್ಗೆ ರಾಜ್ಯಗಳ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ‘ಪ್ರತಿಪಕ್ಷದ ಸರ್ಕಾರವಿರುವ ಕರ್ನಾಟಕದಲ್ಲಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಲಕ್ಷ ಕೋಟಿ ರೂಪಾಯಿಗಳಲ್ಲಿ ನೀಡಿದ ಅನುದಾನ ಎಲ್ಲಿ ಹೋಯಿತು’ ಎಂದೆಲ್ಲಾ  ಈಗಂತೂ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪದೇ ಪದೇ ಕೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಈ ಧಾಟಿಯ ಮಾತುಗಳು ಎಷ್ಟು ಸರಿ? ದಕ್ಷಿಣದ ರಾಜ್ಯಗಳ ಮೇಲೆ ಭಾಷಿಕವಾಗಿ, ಸಾಂಸ್ಕೃತಿಕವಾಗಿ ಉತ್ತರಭಾರತ ಸವಾರಿ ಮಾಡಲೆತ್ನಿಸುವುದು ನಡೆದೇ ಇದೆ. ಇತ್ತೀಚೆಗೆ ಬೆಂಗಳೂರು ಮೆಟ್ರೊ ವ್ಯವಸ್ಥೆಯಲ್ಲಿ  ಹಿಂದಿ ಭಾಷೆ ಹೇರಿಕೆಯ ಬಗ್ಗೆ ಕರ್ನಾಟಕ ತೋರಿದ ತೀವ್ರ ಪ್ರತಿರೋಧ ನೆನಪಿಸಿಕೊಳ್ಳಬಹುದು. ಇಂತಹ ವಾತಾವರಣದಲ್ಲಿ ಕನ್ನಡ ಅಸ್ಮಿತೆ ಎತ್ತಿ ಹಿಡಿಯುವಂತಹ ಪ್ರತ್ಯೇಕ ನಾಡಧ್ವಜಕ್ಕೆ ಕರ್ನಾಟಕ ಸರ್ಕಾರ ಈಗ ಹಸಿರು ನಿಶಾನೆ ತೋರಿಸಿದೆ.

ಸಮತೋಲನದ ಅಭಿವೃದ್ಧಿ ಸಾಧಿಸಲು ಹಿಂದುಳಿದ ರಾಜ್ಯಗಳಿಗೆ ಅನುದಾನ ಹೆಚ್ಚಳವಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಕಾರಣಕ್ಕೆ ಅಭಿವೃದ್ಧಿ ಪಥದಲ್ಲಿ ನಡೆದಿರುವ ರಾಜ್ಯಗಳ ಆರ್ಥಿಕ ಹಿತಾಸಕ್ತಿಯನ್ನೇ ಬಲಿಕೊಡುವುದು ಸಮರ್ಥನೀಯವಲ್ಲ. ಇದರಿಂದ  ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಪರಿಸ್ಥಿತಿಯ ಅಸಮತೋಲನ ಹೆಚ್ಚಳವಾಗುತ್ತದೆ. ಒಕ್ಕೂಟ ವ್ಯವಸ್ಥೆಯೂ ದುರ್ಬಲವಾಗುತ್ತದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಎಚ್ಚರದಿಂದ ಮುನ್ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT