ಮಂಗಳವಾರ, ಆಗಸ್ಟ್ 4, 2020
26 °C

‘ಹಿಂದುಳಿಯುವ’ ಸ್ಪರ್ಧೆ!

ಕ್ಯಾಪ್ಟನ್ ಜಿ. ಆರ್.ಗೋಪಿನಾಥ್ Updated:

ಅಕ್ಷರ ಗಾತ್ರ : | |

‘ಹಿಂದುಳಿಯುವ’ ಸ್ಪರ್ಧೆ!

ಇಂದಿನ ಭಾರತವನ್ನು ಕಂಡು ಚಾರ್ಲ್ಸ್ ಡಾರ್ವಿನ್‌ಗೆ ಗೊಂದಲ ಉಂಟಾಗಿರಬೇಕು. ಡಾರ್ವಿನ್, ವಿಕಾಸವಾದ ಸಿದ್ಧಾಂತ ಹುಟ್ಟುಹಾಕಿದ. ಮನುಷ್ಯ ಸೇರಿದಂತೆ ಎಲ್ಲ ಜೀವಿಗಳು ಕಾಲಕ್ರಮೇಣ ವಿಕಾಸ ಹೊಂದುತ್ತವೆ, ಬದಲಾವಣೆಗೆ ಹೊಂದಿಕೊಳ್ಳುತ್ತ ಹೋಗುತ್ತವೆ, ಶಕ್ತಿವಂತ ಜೀವಿಗಳು ಅಸ್ತಿತ್ವ ಉಳಿಸಿಕೊಳ್ಳುತ್ತವೆ ಎಂಬುದನ್ನು ಆತ ವೈಜ್ಞಾನಿಕವಾಗಿ ಸಾಬೀತು ಮಾಡಿದ. ಮನುಷ್ಯರು ಪ್ರಗತಿ ಹೊಂದಲು, ಸಮಾಜದಲ್ಲಿ ಮುಂಚೂಣಿಯಲ್ಲಿ ಇರಲು ಬಯಸುತ್ತಾರೆ. ಆದರೆ ಈ ಮಾತುಗಳಿಗೆ ಭಾರತದಲ್ಲಿ ಅಪವಾದಗಳು ಕಾಣಸಿಗುತ್ತವೆ.

ಇಲ್ಲಿ ಹಿಂದೆ ಉಳಿಯುವುದಕ್ಕಾಗಿ ಸ್ಪರ್ಧೆ ಇದೆ. ತಾವು ‘ಹಿಂದುಳಿದವರು’ ಎಂದು ಕರೆಸಿಕೊಳ್ಳುವ, ‘ಅಲ್ಪಸಂಖ್ಯಾತ ಸಮುದಾಯ’ ಎಂಬ ಸ್ಥಾನ ಗಿಟ್ಟಿಸಿಕೊಳ್ಳುವ ಬಯಕೆ ಇಲ್ಲಿ ಎಲ್ಲರಲ್ಲೂ ಇದೆ. ಕರ್ನಾಟಕದಲ್ಲಿ, ಇದುವರೆಗೆ ಪ್ರಬಲರು ಎಂದೇ ಪರಿಗಣಿತವಾಗಿರುವ ಲಿಂಗಾಯತ ಸಮುದಾಯ ಹಿಂದೂ ಧರ್ಮದ ಭಾಗವಲ್ಲ, ಅದು ಪ್ರತ್ಯೇಕ ‘ಅಲ್ಪಸಂಖ್ಯಾತ ಧರ್ಮ’ ಎಂದು ಘೋಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆ ಸೃಷ್ಟಿಸಿದ್ದಾರೆ. ಹಿಂದೂ ಮತಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿದ್ದ ಬಿಜೆಪಿಗೆ ದಿಕ್ಕು ತೋಚದಂತೆ ಮಾಡಿದ್ದಾರೆ.

ಇದು, ಚುನಾವಣೆಯು ಹೊಸಿಲಲ್ಲಿ ಇರುವಾಗ ಬಿಜೆಪಿಯ ಹಿಂದುತ್ವ ಅಜೆಂಡಾ ಸೋಲಿಸಲು ನಾಸ್ತಿಕ ಸಿದ್ದರಾಮಯ್ಯ ಅವರು ಉರುಳಿಸಿದ ಅತ್ಯಂತ ಜಾಣ್ಮೆಯ ರಾಜಕೀಯ ದಾಳ. ಶ್ರೀಮಂತ ಮಠಗಳನ್ನು ನಡೆಸುತ್ತಿರುವ ಹಲವಾರು ಲಿಂಗಾಯತ ಸ್ವಾಮೀಜಿಗಳು ತಮ್ಮ ಸಮುದಾಯಕ್ಕೆ ‘ಧಾರ್ಮಿಕ ಅಲ್ಪಸಂಖ್ಯಾತ’ ಎಂಬ ಸ್ಥಾನಮಾನ ಕೊಡುವುದನ್ನು ಸ್ವಾಗತಿಸುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.

ಸರ್ಕಾರಿ ಉದ್ಯೋಗಗಳು ಮತ್ತು ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳಲ್ಲಿ ನಿರ್ದಿಷ್ಟ ಪ್ರಮಾಣವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಕೆಲವು ವರ್ಷಗಳವರೆಗೆ ಮೀಸಲಿಡಬೇಕು ಎಂಬುದು ಆರಂಭದಲ್ಲಿ ಇದ್ದ ಆಲೋಚನೆ. ಈ ಸಮುದಾಯದವರಿಗೆ ಇಂತಹ ಮೀಸಲಾತಿ ನಿಜಕ್ಕೂ ಬೇಕಿತ್ತು. ಆದರೆ, ಮೀಸಲಾತಿ ನೀತಿಯಲ್ಲೇ ಇರುವ ಸಮಸ್ಯೆಗಳ ಕಾರಣದಿಂದಾಗಿ ಮೀಸಲಾತಿಯ ಪ್ರಯೋಜನ ಇವರಲ್ಲಿ ನಿಜಕ್ಕೂ ಹಿಂದುಳಿದವರಿಗೆ ಸಿಕ್ಕಿಲ್ಲ. ಈಗ ‘ನಾವು ಹಿಂದುಳಿದವರು’ ಎಂದು ಹೇಳಿಕೊಳ್ಳಲು ಎಲ್ಲ ಸಮುದಾಯಗಳೂ ಒಬ್ಬರ ವಿರುದ್ಧ ಇನ್ನೊಬ್ಬರು ಎನ್ನುವಂತೆ ಸ್ಪರ್ಧೆಗೆ ಇಳಿದಿವೆ. ಡಾರ್ವಿನ್‌ ಮತ್ತು ವಿಕಾಸವಾದದ ಪರ ಇರುವ ಇತರ ವಿಜ್ಞಾನಿಗಳು ಹೇಳಿರುವುದನ್ನು ಸುಳ್ಳು ಎಂದು ಸಾಬೀತು ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಭಾರತೀಯರನ್ನು ಕಂಡು ವಿಶ್ವದ ಇತರ ಭಾಗಗಳ ಜನ ಆಶ್ಚರ್ಯಚಕಿತರಾಗಿದ್ದಿರಬೇಕು. ಭಾರತವು ಈಗ ಅಭಿವೃದ್ಧಿ ಹೊಂದಿರುವ ದೇಶವಾಗಿದೆ ಎಂದು ಪ್ರಧಾನಿಯವರು ತಮಗೆ ಅವಕಾಶ ಸಿಕ್ಕಲ್ಲೆಲ್ಲ ಹೇಳುತ್ತಿರುವಾಗ, ದೇಶವಾಸಿಗಳು ಮಾತ್ರ ತಾವು ಹಿಂದುಳಿದವರು ಎಂದು ಹೇಳಿಕೊಳ್ಳುವಲ್ಲಿ ಹೆಮ್ಮೆ ಕಾಣುತ್ತಿದ್ದಾರೆ!

ಈಗ ಕರ್ನಾಟಕದ ಲಿಂಗಾಯತ ಸಮುದಾಯ ಒಂದು ಹೆಜ್ಜೆ ಮುಂದೆ ಹೋಗಿದೆ.  ತನಗೆ ‘ಧಾರ್ಮಿಕ ಅಲ್ಪಸಂಖ್ಯಾತ’ ಎನ್ನುವ ಸ್ಥಾನಮಾನ ನೀಡಬೇಕು ಎಂದು ಕೇಳುತ್ತಿದೆ, ತಾನು ಹಿಂದೂ ಸಮುದಾಯದ ಭಾಗ ಅಲ್ಲ ಎಂದು ಹೇಳುತ್ತಿದೆ. ಲಿಂಗಾಯತ ಪಂಥವನ್ನು ಹುಟ್ಟುಹಾಕಿದ ಬಸವಣ್ಣ ಕೂಡ  ತಾನು ಹುಟ್ಟುಹಾಕಿರುವುದು ಪ್ರತ್ಯೇಕ ಧರ್ಮ ಎಂದು ಹೇಳಿರಲಿಲ್ಲ. ಬಸವಣ್ಣ ಶಿವಭಕ್ತನಾಗಿದ್ದ. ಶಿವಭಕ್ತರು ಹಿಂದೂಗಳಲ್ಲ ಎಂದಾದರೆ, ನಿಜವಾಗಿಯೂ ಹಿಂದೂಗಳು ಯಾರು ಎಂಬ ಪ್ರಶ್ನೆ ಮೂಡುತ್ತದೆ.

ವ್ಯಕ್ತಿಯೊಬ್ಬ ಒಂದು ಮುಂಜಾನೆ ಎದ್ದು ತಾನು ಮನುಕುಲಕ್ಕೆ ಸೇರಿದವ ಅಲ್ಲ ಎಂಬುದನ್ನು ಕಂಡುಕೊಂಡಿರುವುದಾಗಿ ಘೋಷಿಸಿದಂತೆ ಇದೆ ಲಿಂಗಾಯತರು ಇಟ್ಟಿರುವ ಈ ದಿಢೀರ್‌ ಬೇಡಿಕೆ. ಲಿಂಗಾಯತ ಪಂಥದ ಸ್ಥಾಪಕನನ್ನಾಗಿ ಬಸವಣ್ಣನನ್ನು ಗೌರವದಿಂದ ಕಾಣಲಾಗುತ್ತದೆ. ಈ ಪಂಥದವರನ್ನು ವೀರಶೈವರು ಎಂದೂ ಕರೆಯಲಾಗುತ್ತದೆ. ಬಸವಣ್ಣ ಒಬ್ಬ ಮಹಾನ್‌ ಸಮಾಜ ಸುಧಾರಕ. ಬಸವಣ್ಣನ ವಚನಗಳು,  ಲಿಂಗಾಯತ ಪಂಥದತ್ತ ಜನರು ಹೊರಳಲು ಶಕ್ತಿ ನೀಡಿದವು. ಬಸವಣ್ಣ ಪ್ರಶ್ನಿಸಿದ್ದು ಮೂಢನಂಬಿಕೆ ಮತ್ತು ಕೆಲವು ಪದ್ಧತಿಗಳನ್ನು ವಿನಾ ಪೂಜೆಯನ್ನಲ್ಲ. ತಾರತಮ್ಯದ ಜಾತಿ ವ್ಯವಸ್ಥೆ, ಬದಲಾವಣೆಗೆ ಒಪ್ಪದ ನಿಯಮಗಳನ್ನು ಬಸವಣ್ಣ ಪ್ರಶ್ನಿಸಿದ ಮತ್ತು ಅವುಗಳನ್ನು ತಿರಸ್ಕರಿಸಿದ. ಎಲ್ಲ ಜಾತಿಗಳ, ಎಲ್ಲ ಬಗೆಯ ಸಾಮಾಜಿಕ ಹಿನ್ನೆಲೆಗಳ ಜನ ತನ್ನ ಪಂಥ ಸೇರಬಹುದು ಎಂದು ಹೇಳಿದ ಅಷ್ಟೇ.

ಸಮಾಜವನ್ನು ವಿಭಜಿಸುವ ಜಾತಿ ವ್ಯವಸ್ಥೆಯ ವಿರುದ್ಧ ಬಸವಣ್ಣ ಹೋರಾಡಿದ. ಆದರೆ ಬಸವಣ್ಣನ ಅನುಯಾಯಿಗಳದೇ ಒಂದು ಪ್ರತ್ಯೇಕ ಜಾತಿಯಾಗಿದ್ದು, ಅವರು ಗೌಡ ಮತ್ತು ಕುರುಬ ಜಾತಿಗಳ ಜೊತೆ ಅಧಿಕಾರಕ್ಕಾಗಿ ಸ್ಪರ್ಧೆಯಲ್ಲಿ ಇರುವುದು ಒಂದು ವ್ಯಂಗ್ಯ. ಇತರ ಪ್ರಬಲ ಜಾತಿಗಳಲ್ಲಿ ಇರುವಂತೆಯೇ ಲಿಂಗಾಯತರಲ್ಲಿಯೂ ಉಪ ಜಾತಿಗಳು ಇವೆ. ಈ ಸಮುದಾಯದಲ್ಲಿನ ಒಂದು ವರ್ಗವು ಸಿದ್ದರಾಮಯ್ಯ ಮಾಡಿರುವ ಘೋಷಣೆ ವಿರೋಧಿಸಿದೆ. ವೀರಶೈವರು ಲಿಂಗಾಯತರಲ್ಲ ಎನ್ನುವ ಮೂಲಕ ಗೊಂದಲಗಳಿಗೆ ಮತ್ತಷ್ಟು ಇಂಬು ಕೊಟ್ಟಿದೆ. ಇದೇ ವೇಳೆ, ಲಿಂಗಾಯತರು ಮತ್ತು ವೀರಶೈವರು ಒಂದೇ ಎಂದು ಹಲವರು ಹೇಳುತ್ತಿದ್ದಾರೆ.

‘ನಾವು ಕೂಡ ಹಿಂದುಳಿದವರು’ ಎಂದು ಹೇಳಿಕೊಳ್ಳುವಲ್ಲಿ ಈಗ ಪ್ರತಿಯೊಬ್ಬರೂ ಮುಂಚೂಣಿಯಲ್ಲಿ ಇದ್ದಾರೆ. ಆದರೆ, ‘ಬಡ ಬ್ರಾಹ್ಮಣ’ ಮಾತ್ರ ‘ಹಿಂದುಳಿಯುವ ಸ್ಪರ್ಧೆ’ಯಲ್ಲಿ ಮುಂದೆ ಬರಲಿಲ್ಲ. ಹಾಗಾಗಿ, ಎಲ್ಲ ಬಗೆಯ ಮೀಸಲಾತಿಗಳಿಂದ ಹೊರಗುಳಿದ. ಸರ್ಕಾರಿ ಕೆಲಸವೂ ಸಿಗಲಿಲ್ಲ. ಮೆಕ್‌ಡೊನಾಲ್ಡ್‌ ಕೂಡ ಸ್ಪರ್ಧೆ ಒಡ್ಡಲಾರದಂತಹ ಉಡುಪಿ ಹೋಟೆಲ್‌ಗಳನ್ನು ನಡೆಸುವ ಖ್ಯಾತ ಹೋಟೆಲ್‌ ಉದ್ಯಮಿಯೊಬ್ಬರಿಂದ ನಾನು ಒಂದು ಮಾತು ಕೇಳಿಸಿಕೊಂಡೆ. ‘ಬ್ರಾಹ್ಮಣರಿಗೂ ಮೀಸಲಾತಿ ನೀಡಿದ್ದಿದ್ದರೆ, ಅವರು ಕೂಡ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುಮಾಸ್ತರಾಗಿಯೋ, ಇನ್‌ಸ್ಪೆಕ್ಟರ್‌ಗಳಾಗಿಯೂ ಉಳಿದುಬಿಡುತ್ತಿದ್ದರು. ಹೋಟೆಲ್‌ ಉದ್ಯಮಕ್ಕೆ ಕೈಹಾಕಿದ ಅವರಿಗೆ ಅಲ್ಲಿ ಸಂಪತ್ತು ಸಿಕ್ಕಿತು’ ಎಂಬುದು ಆ ಮಾತು. ಹಿಂದುಳಿದವರು ಎಂದು ಕರೆಸಿಕೊಳ್ಳಲು ಆಸಕ್ತಿ ಇರುವವರಿಗೆ ಇವರ ಮಾತಿನಲ್ಲಿ ಕೆಲವು ಪಾಠಗಳು ಸಿಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.