ಭಾನುವಾರ, ಡಿಸೆಂಬರ್ 15, 2019
20 °C

‘ಕಳಂಕಿತರ ವಿರುದ್ಧ ಮಹಾಮೈತ್ರಿ ಅಭ್ಯರ್ಥಿಗಳು ಕಣಕ್ಕೆ’: ಎಸ್‌.ಆರ್‌. ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಳಂಕಿತರ ವಿರುದ್ಧ ಮಹಾಮೈತ್ರಿ ಅಭ್ಯರ್ಥಿಗಳು ಕಣಕ್ಕೆ’: ಎಸ್‌.ಆರ್‌. ಹಿರೇಮಠ

ಹುಬ್ಬಳ್ಳಿ: ‘ಅಕ್ರಮ ಗಣಿಗಾರಿಕೆ, ನಿಯಮಬಾಹಿರ ಮೂಲಗಳಿಂದ ಸಂಪತ್ತು ಗಳಿಸಿದ ರಾಜಕಾರಣಿಗಳ ವಿರುದ್ಧ ಜನಾಂದೋಲನ ಮಹಾಮೈತ್ರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕಳಂಕಿತ ಅಭ್ಯರ್ಥಿಗಳ ವಿರುದ್ಧ ನಮ್ಮ ಅಭ್ಯರ್ಥಿಗಳು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಸೋಮವಾರ ಇಲ್ಲಿ ತಿಳಿಸಿದರು.

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಸಚಿವರಾದ ಡಿ.ಕೆ. ಶಿವಕುಮಾರ್‌, ಕೆ.ಜೆ. ಜಾರ್ಜ್‌ ಹಾಗೂ ಕಾಂಗ್ರೆಸ್‌ ಮುಖಂಡ ದಿನೇಶ್‌ ಗುಂಡೂರಾವ್‌ ವಿರುದ್ಧ ಜನಾಂದೋಲನ ಮಹಾಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಅವರ ಹೆಸರುಗಳನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಮಹಾಮೈತ್ರಿಯಲ್ಲಿರುವ ಕರ್ನಾಟಕ ಸರ್ವೋದಯ ಪಕ್ಷದ ದೇವನೂರ ಮಹಾದೇವ, ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌, ರಾಘವೇಂದ್ರ ಕುಷ್ಟಗಿ ಹಾಗೂ ವಿವಿಧ ಸಮಾನ ಮನಸ್ಕ ಪಕ್ಷಗಳ ರಾಜ್ಯ ಮುಖಂಡರು ಸಭೆ ಸೇರಿ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು’ ಎಂದರು.

ಜ್ಯೂಸ್‌ ಕುಡಿದು ಎದ್ದು ಬಂದರು!

ಜನಲೋಕಪಾಲ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಆರಂಭಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸತ್ಯಾಗ್ರಹ ಮುಗಿಸಿದ ರೀತಿಗೆ ಹಿರೇಮಠ ಬೇಸರ ವ್ಯಕ್ತಪಡಿಸಿದರು.

‘ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಮಾಡುವವರನ್ನು ಸಹಿಸುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದರು. ಅವರೇ ಜನಲೋಕಪಾಲರನ್ನು ನೇಮಕ ಮಾಡಿಲ್ಲ. ಈ ಬೇಡಿಕೆಗಾಗಿ ಅಣ್ಣಾ ಹಜಾರೆ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಆದರೆ, ಏಕಾಏಕಿ ಜ್ಯೂಸ್‌ ಕುಡಿದು ಸತ್ಯಾಗ್ರಹ ಮೊಟಕುಗೊಳಿಸಿದ್ದು ಏಕೆ? ಇಂತಹ ಹೋರಾಟ ಜನಸಾಮಾನ್ಯರ ಮೇಲೆ ಮುಂದೆ ಬೀರಬಹುದಾದದ ಪರಿಣಾಮ ಎಂಥದು’ ಎಂದು ಅವರು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)