ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಂದು ‘ಮಿಂಚಿನ ನೋಂದಣಿ’ ಅಭಿಯಾನ

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಲುವಾಗಿ ಚುನಾವಣಾ ಆಯೋಗವು ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಇದೇ 8ರಂದು ‘ಮಿಂಚಿನ ನೋಂದಣಿ’ ಅಭಿಯಾನ ಹಮ್ಮಿಕೊಂಡಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌, ‘ಅಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆವರೆಗೆ ಬೂತ್‌ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲೇ ಲಭ್ಯ ಇರುತ್ತಾರೆ’ ಎಂದರು.

‘ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಇದೇ 14ರವರೆಗೂ ಅವಕಾಶವಿದೆ. ನಂತರ ಅರ್ಜಿ ಸಲ್ಲಿಸಿದವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಫೆಬ್ರುವರಿ 28ರವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಸಲಾಗಿತ್ತು. ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಒಟ್ಟು 4.96 ಕೋಟಿ ಮಂದಿಯ ಹೆಸರು ಇದೆ. ಫೆ. 28ರ ನಂತರ ಬಂದ ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಒಂದು ವಾರದಲ್ಲಿ ಅವುಗಳನ್ನು ವಿಲೇವಾರಿ ಮಾಡಲಾಗುತ್ತದೆ’ ಎಂದರು.

‘ಆಯೋಗದ ವೆಬ್‌ಸೈಟ್‌ನಲ್ಲಿ (www.ceokarnataka.kar.nic.in) ಮತದಾರರ ಪಟ್ಟಿ ಲಭ್ಯ. ಅದರಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಮತದಾರರು ಈಗಲೇ ಪರಿಶೀಲಿಸಬೇಕು. ಈ ಹಿಂದೆ ಪಟ್ಟಿಯಲ್ಲಿ ಹೆಸರು ಇದ್ದು, ಈಗ ಬಿಟ್ಟು ಹೋಗಿದ್ದರೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಗಮನಕ್ಕೆ ತರಬೇಕು. ಈ ಲೋಪವನ್ನು ಸರಿಪಡಿಸಲು ಏ.14ರವರೆಗೆ ಅವಕಾಶವಿದೆ. ಈ ಬಗ್ಗೆ ಮತದಾನದ ದಿನ ದೂರಿದರೆ ಪ್ರಯೋಜನವಿಲ್ಲ’ ಎಂದರು.

ಬೆಂಗಳೂರು ನಗರದಲ್ಲಿ ಹೆಸರು ನೋಂದಣಿ ಮಾಡಿಸಿರುವ 60,000 ಮತದಾರರಿಗೆ ಇನ್ನೂ ಗುರುತಿನ ಚೀಟಿ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಾಲೊ ಗ್ರಾಂ ಕೊರತೆಯಿಂದಾಗಿ ಈ ಸಮಸ್ಯೆ ಆಗಿದ್ದು ನಿಜ. 10 ಲಕ್ಷ ಹಾಲೊ ಗ್ರಾಂಗಳು ಬಂದಿವೆ. ಈಗ ಸಮಸ್ಯೆ ಇಲ್ಲ’ ಎಂದರು.

‘ಒಟ್ಟು 3.69 ಲಕ್ಷ ಮಂದಿಗೆ ಗುರುತಿನ ಚೀಟಿ ವಿತರಣೆ ಆಗಬೇಕಿದೆ. ಒಂದು ವಾರದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ. ಬೂತ್‌ ಮಟ್ಟದ ಅಧಿಕಾರಿಗಳು ಮತದಾರರ ಮನೆಗೇ ಚೀಟಿಯನ್ನು ತಲುಪಿಸುತ್ತಾರೆ.  ಮಧ್ಯವರ್ತಿಗಳ ಕೈಗೆ ಅದನ್ನು ಕೊಡಲು ಬರುವುದಿಲ್ಲ. ಮತದಾರರು ನೇರವಾಗಿ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿಯೂ ಅದನ್ನು ಪಡೆಯಬಹುದು’ ಎಂದು ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ನಗದನ್ನು ಹೊಂದಿದ್ದರೆ ಮಾತ್ರ ವಶಪಡಿಸಿಕೊಳ್ಳಬೇಕು ಎಂಬ ನಿಯಮಗಳಿಲ್ಲ. ಯಾವುದೇ ವ್ಯಕ್ತಿ ಹಣವನ್ನು ಹೊಂದಿದ್ದರೆ, ಅದಕ್ಕೆ ದಾಖಲೆಗಳಿರಬೇಕು. ಸಂದೇಹ ಬಂದರೆ ಮಾತ್ರ ಹಣವನ್ನು ವಶಪಡಿಸಿಕೊಳ್ಳಲಾಗುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಕಿರುವ ದಾಖಲೆಗಳು?
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಾಸ್ತವ್ಯದ ಕುರಿತ ದಾಖಲೆ ಅಗತ್ಯ. ದಾಖಲೆಗಾಗಿ ಆಧಾರ್‌ ಸಂಖ್ಯೆ, ಚಾಲನಾ ಪರವಾನಗಿ ಅಥವಾ ಪಡಿತರ ಚೀಟಿಯ ಪ್ರತಿಯನ್ನು ನೀಡಬಹುದು. ವಿದ್ಯಾರ್ಥಿಗಳು ಕಾಲೇಜಿನ ಗುರುತಿನ ಚೀಟಿಯ ಪ್ರತಿಯನ್ನೂ ಒದಗಿಸಬಹುದು.

**

1.74 ಲಕ್ಷ – ಹೆಸರು ಸೇರ್ಪಡೆಗೆ ಮಾ.1ರ ನಂತರ ಸಲ್ಲಿಕೆಯಾದ ಅರ್ಜಿ

1,582 – ಹೆಸರು ವರ್ಗಾವಣೆಗೆ ಸಲ್ಲಿಕೆಯಾಗಿರುವ ಅರ್ಜಿ

81,412 – ಹೆಸರು ತೆಗೆಸಲು ಸಲ್ಲಿಕೆಯಾದ ಅರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT