ಸೋಮವಾರ, ಡಿಸೆಂಬರ್ 9, 2019
22 °C
ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ: ಗೃಹ ಸಚಿವ ರಾಜನಾಥ್‌ ಸಿಂಗ್‌ ಮನವಿ

ದಲಿತರಿಗೆ ಕೇಂದ್ರದ ರಕ್ಷಣೆಯ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ದಲಿತರಿಗೆ ಕೇಂದ್ರದ ರಕ್ಷಣೆಯ ಭರವಸೆ

ನವದೆಹಲಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ದುರ್ಬಲ ವರ್ಗಗಳ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ಸಮುದಾಯಗಳ ಜನರಿಗೆ ಕಾನೂನಿನ ಅಡಿಯಲ್ಲಿ ಪೂರ್ಣ ರಕ್ಷಣೆಯ ಖಾತರಿ ನೀಡಲಾಗುವುದು. ಜನರು ವದಂತಿ ಮತ್ತು ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಸಮಾಜದ ವಿವಿಧ ವರ್ಗಗಳ ನಡುವೆ ಸಾಮರಸ್ಯ ಕಾಯ್ದುಕೊಳ್ಳಲು ವಿರೋಧ ಪಕ್ಷಗಳು ನೆರವಾಗಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ನಡೆದ ಹಿಂಸೆ ಮತ್ತು ಜೀವಹಾನಿಯಿಂದ ಬಹಳ ನೋವಾಗಿದೆ ಎಂದು ಅವರು ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರವು ಸೂಚನೆ ನೀಡಿದೆ. ರಾಜ್ಯಗಳಿಗೆ ಬೇಕಾದ ಯಾವುದೇ ನೆರವಿಗೆ ಕೇಂದ್ರ ಸಿದ್ಧವಾಗಿದೆ ಎಂದೂ ತಿಳಿಸಲಾಗಿದೆ.

ಕೇಂದ್ರದ ನೆರವು: ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್‌ ರಾಜ್ಯಗಳಿಗೆ 1,700 ಗಲಭೆ ನಿಗ್ರಹ ಯೋಧರನ್ನು ಕಳುಹಿಸಲಾಗಿದೆ. ಜತೆಗೆ, ಕ್ಷಿಪ್ರ ಕ್ರಿಯಾ ಪಡೆಯ ಎಂಟು ತುಕಡಿಗಳನ್ನು ಉತ್ತರ ಪ್ರದೇಶಕ್ಕೆ, ನಾಲ್ಕು ತುಕಡಿಗಳನ್ನು ಮಧ್ಯಪ್ರದೇಶಕ್ಕೆ, ಮೂರು ತುಕಡಿಗಳನ್ನು ರಾಜಸ್ಥಾನಕ್ಕೆ ರವಾನಿಸಲಾಗಿದೆ.

ಇದಲ್ಲದೆ, ಪಂಜಾಬ್‌ಗೆ ಗಡಿ ಭದ್ರತಾ ಪಡೆಯ ಎರಡು ತುಕಡಿಗಳನ್ನೂ ಕಳುಹಿಸಲಾಗಿದೆ.

ಸರ್ಕಾರವೇ ಹೊಣೆ– ಕಾಂಗ್ರೆಸ್‌: ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿರುವುದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಈ ವಿಚಾರವನ್ನು ಸರ್ಕಾರ ಲಘುವಾಗಿ ಪರಿಗಣಿಸಿತು. ಹಾಗಾಗಿ ಸೋಮವಾರ ನಡೆದ ಹಿಂಸಾಚಾರ ಮತ್ತು ಸಾವು ನೋವಿನ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

ದಲಿತರು ಮತ್ತು ದುರ್ಬಲ ವರ್ಗಗಳ ಜನರ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರಕ್ಕೆ ಯಾವುದೇ ಆಸಕ್ತಿ ಇಲ್ಲ. 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕಾಯ್ದೆಯನ್ನು ದುರ್ಬಲಗೊಳಿಸಿದ್ದಕ್ಕೆ ಸುಪ್ರೀಂ ಕೋರ್ಟನ್ನು ದೂಷಿಸಿ ಪ್ರಯೋಜನ ಇಲ್ಲ. ಇದರ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಯಾಕೆಂದರೆ, ಅಟಾರ್ನಿ ಜನರಲ್‌ ಅಥವಾ ಹೆಚ್ಚುವರಿ ಅಟಾರ್ನಿ  ಜನರಲ್‌ ಅವರು ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ವಾದ

ಮಂಡಿಸಿದ್ದಿದ್ದರೆ ಈ ಪರಿಸ್ಥಿತಿಬರುತ್ತಿರಲಿಲ್ಲ ಎಂದು ಆಜಾದ್‌ ಹೇಳಿದ್ದಾರೆ.

ಕಾಯ್ದೆಗೆ ತಕ್ಷಣವೇ ತಿದ್ದುಪಡಿ ತರಬೇಕು ಅಥವಾ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠದ ಮುಂದೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

**

ಸುಪ್ರೀಂ ಕೋರ್ಟ್‌ ಮಾರ್ಚ್‌ 20ರಂದು ನೀಡಿದ ಆದೇಶದಲ್ಲಿ ಏನಿತ್ತು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದೂರು ಸಲ್ಲಿಕೆಯಾದರೆ ತಕ್ಷಣವೇ ಎಫ್‌ಐಆರ್‌ ದಾಖಲಿಸಬಾರದು ಮತ್ತು ಆರೋಪಿಗಳನ್ನು ಬಂಧಿಸಬಾರದು. ತನಿಖೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು. ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೇ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 20ರಂದು ಆದೇಶ ನೀಡಿತ್ತು.

ಈ ಕಾಯ್ದೆಯು ವ್ಯಾಪಕವಾಗಿ ದುರ್ಬಳಕೆ ಆಗುತ್ತಿದೆ. ಮುಗ್ಧರಿಗೆ ತೊಂದರೆ ಕೊಡಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸದಂತೆ ತಡೆ ಒಡ್ಡಲಾಗಿದೆ. ಹೀಗೆ ಮಾಡುವುದು ಈ ಕಾಯ್ದೆಯ ಉದ್ದೇಶ ಆಗಿರಲಿಲ್ಲ ಎಂದು ಕೋರ್ಟ್‌ ಹೇಳಿತ್ತು. ಸುಳ್ಳು ಆರೋಪದ ಪ್ರಕರಣಗಳಲ್ಲಿಯೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆಯದಿದ್ದರೆ ಮುಗ್ಧರಿಗೆ ಯಾವ ರಕ್ಷಣೆಯೂ ಇರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಮಹಾರಾಷ್ಟ್ರ ತಾಂತ್ರಿಕ ಶಿಕ್ಷಣ ಇಲಾಖೆಯ ಸ್ಟೋರ್‌ಕೀಪರ್‌ ಒಬ್ಬರು, ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಈ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು. ಆದರೆ ಇಲಾಖೆಯ ನಿರ್ದೇಶಕರಾಗಿದ್ದ ಸುಭಾಷ್‌ ಕಾಶೀನಾಥ ಮಹಾಜನ್‌ ಅವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿರಲಿಲ್ಲ.

ಮಹಾಜನ್‌ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ದೂರು ಸಲ್ಲಿಸಲಾಗಿತ್ತು. ಮಹಾಜನ್‌ ವಿರುದ್ಧದ ಎಫ್‌ಐಆರ್‌ ರದ್ದು ಮಾಡಿ, ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪೀಠ, ದೂರು ಸಲ್ಲಿಕೆಯಾದ ತಕ್ಷಣ ಬಂಧನಕ್ಕೆ ಅವಕಾಶ ಇಲ್ಲ ಎಂದು ಆದೇಶ ನೀಡಿತ್ತು.

**

ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದ ಆದೇಶಕ್ಕೆ ತಡೆ ನೀಡುವಂತೆ ಮತ್ತು ಆದೇಶವನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ದೇಶದಾದ್ಯಂತ ಹಿಂಸಾಚಾರ ನಡೆಯುತ್ತಿದೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದು ಅಪಾರ ಆಸ್ತಿ ನಾಶವಾಗಿದೆ. ಹಾಗಾಗಿ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಎಸ್‌ಸಿ, ಎಸ್‌ಟಿ ಸಂಘಟನೆಗಳ ಅಖಿಲ ಭಾರತ ಒಕ್ಕೂಟ ಕೋರಿತು.

ಆದರೆ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಈ ವಿನಂತಿಯನ್ನು ಮಾನ್ಯ ಮಾಡಲಿಲ್ಲ. ಸರದಿ ಪ್ರಕಾರವೇ ಈ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು. ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶವು ನ್ಯಾಯಯುತವಲ್ಲ. ಹಾಗಾಗಿ ಅದಕ್ಕೆ ತಡೆ ನೀಡಬೇಕು. ಈ ವಿಚಾರವನ್ನು ಸಂವಿಧಾನ ಪೀಠವು ವಿಚಾರಣೆ ನಡೆಸಬೇಕು ಎಂದು ಒಕ್ಕೂಟದ ಪರವಾಗಿ ವಾದ ಮಂಡಿಸಿದ ವಕೀಲ ಮನೋಜ್‌ ಗೌರ್‌ಕೆಲ್ಲಾ ಅವರು ಹೇಳಿದರು.

***

ಕಾಯ್ದೆಯನ್ನು ದುರ್ಬಲಗೊಳಿಸಿದ್ದು ಈ ದೇಶದ ಶೇ 23ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಈ ವಿಚಾರವನ್ನು ಸರ್ಕಾರ ಲಘುವಾಗಿ ಪರಿಗಣಿಸಿತು

ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಪ್ರತಿಕ್ರಿಯಿಸಿ (+)