ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಸಿಂಧೂರಿ ಅರ್ಜಿ: ಆದೇಶ ಕಾಯ್ದಿರಿಸಿದ ಸಿಎಟಿ

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆ ತಕರಾರಿಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಈ ಕುರಿತ ಆದೇಶ ಕಾಯ್ದಿರಿಸಿದೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ನ್ಯಾಯಮಂಡಳಿಯ ನ್ಯಾಯಾಧೀಶರಾದ ಡಾ.ಕೆ.ಬಿ.ಸುರೇಶ್ ಹಾಗೂ ಕೆ.ಪ್ರಧಾನ್ ಅವರಿದ್ದ ನ್ಯಾಯಪೀಠ ಸೋಮವಾರ ಪ್ರಕರಣದ ಮರು ವಿಚಾರಣೆ ನಡೆಸಿತು.

‘ಅರ್ಜಿಯ ಕುರಿತಂತೆ ಅಂತಿಮ ಆದೇಶ ಪ್ರಕಟಿಸುವತನಕ ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಸಬೇಕು’ ಎಂದೂ ಸರ್ಕಾರಕ್ಕೆ ನಿರ್ದೇಶಿಸಿತು.

ವಿಚಾರಣೆ ವೇಳೆ ರೋಹಿಣಿ ಪರ ಹಾಜರಿದ್ದ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯಿಸ್, ‘ಹಾಸನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕಾರಣ ರೋಹಿಣಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಇದರ ಹಿಂದೆ ಸ್ಥಳೀಯ ರಾಜಕಾರಣಿಗಳ ಪಾತ್ರ ಇದೆ’ ಎಂದು ಆಕ್ಷೇಪಿಸಿದರು.

‘ಈ ವರ್ಗಾವಣೆಯನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮಾಡಿಲ್ಲ. ವರ್ಗಾವಣೆಗೆ ಯಾವುದೇ ಕಾರಣ ನೀಡಿಲ್ಲ. ಸರ್ಕಾರದ ಆದೇಶ ನಿಯಮ ಬಾಹಿರವಾಗಿದ್ದು ರದ್ದುಪಡಿಸಬೇಕು’ ಎಂದು ಕೋರಿದರು.

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಚರ್ಚೆಯ ಬಳಿಕವೇ ವರ್ಗಾವಣೆ ಆದೇಶ ಮಾಡಲಾಗಿದೆ. ಇದು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದಲೇ ಕೈಗೊಂಡ ನಿರ್ಧಾರ. ಒಬ್ಬ ಐಎಎಸ್‌ ಅಧಿಕಾರಿಯನ್ನು ಎರಡು ವರ್ಷಗಳವರೆಗೆ ಅದೇ ಸ್ಥಳದಲ್ಲಿ ಮುಂದುವರಿಸಬೇಕು ಎಂಬ ಕಡ್ಡಾಯ ನಿಯಮವೇನೂ ಇರುವುದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.

2018ರ ಮಾರ್ಚ್‌ ಮೊದಲ ವಾರದಲ್ಲಿ ತಮ್ಮನ್ನು ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಿರುವುದನ್ನು ರೋಹಿಣಿ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT