ಸೋಮವಾರ, ಜೂಲೈ 13, 2020
23 °C

ಭಾರತೀಯರ ಮೃತದೇಹಗಳ ಅವಶೇಷ ಭಾರತಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯರ ಮೃತದೇಹಗಳ ಅವಶೇಷ ಭಾರತಕ್ಕೆ

ಅಮೃತಸರ: ಇರಾಕ್‌ನಲ್ಲಿ ಹತ್ಯೆಗೀಡಾದ 38 ಭಾರತೀಯರು ನಕಲಿ ಏಜೆಂಟ್‌ಗಳ ಮೂಲಕ ಇರಾಕ್‌ಗೆ ತೆರಳಿದ್ದರು ಎಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಸೋಮವಾರ ಹೇಳಿದ್ದಾರೆ. ಅವರು ಇರಾಕ್‌ಗೆ ತೆರಳಿರುವ ಬಗ್ಗೆ ವಿದೇಶಾಂಗ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ ಎಂದಿದ್ದಾರೆ.

38 ಮಂದಿಯ ಮೃತದೇಹಗಳ ಅವಶೇಷಗಳನ್ನು ಹೊತ್ತ ವಿಶೇಷ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂದಿಳಿಯಿತು. ವಿಮಾನ ನಿಲ್ದಾಣದಲ್ಲಿ ಸೇರಿದ್ದ ಮೃತರ ಸಂಬಂಧಿಕರು ಕಣ್ಣೀರಿಟ್ಟರು. ಮೃತದೇಹಗಳನ್ನು ವಾಪಸ್ ತರುವುದಕ್ಕಾಗಿ ಸಿಂಗ್ ಅವರು ಭಾನುವಾರ ಇರಾಕ್‌ಗೆ ತೆರಳಿದ್ದರು.

‘ಅಕ್ರಮವಾಗಿ ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುವುದು ಕಷ್ಟ. ವಿದೇಶದಲ್ಲಿ ನಮ್ಮವರು ತೊಂದರೆಗೆ ಸಿಲುಕಿರುವ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕರೂ ಅವರನ್ನು ಉಳಿಸಲು ಯತ್ನಿಸಬಹುದು’ ಎಂದು ವಿ.ಕೆ. ಸಿಂಗ್ ಹೇಳಿದ್ದಾರೆ. ನಕಲಿ ಏಜೆಂಟ್‌ಗಳನ್ನು ತಡೆಯಲು ಕೇಂದ್ರ, ರಾಜ್ಯ ಸರ್ಕಾರಗಳು ಸಾಂಘಿಕವಾಗಿ ಕೆಲಸ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಕರು ನೀಡಿದ ಡಿಎನ್‌ಎ ದತ್ತಾಂಶ ಆಧರಿಸಿ ಮೃತದೇಹದ ಅವಶೇಷಗಳನ್ನು ಪತ್ತೆಹಚ್ಚಲಾಯಿತು ಎಂದು ಸಿಂಗ್ ವಿವರಿಸಿದ್ದಾರೆ. ಮೃತಪಟ್ಟ 39 ಜನರ ಪೈಕಿ ಒಬ್ಬ ವ್ಯಕ್ತಿಯ ಡಿಎನ್‌ಎ ಹೊಂದಾಣಿಕೆಯಾಗಿಲ್ಲ. ಹೀಗಾಗಿ 38 ಮೃತದೇಹಗಳ ಅವಶೇಷಗಳನ್ನು ಮಾತ್ರ ಭಾರತಕ್ಕೆ ತರಲಾಯಿತು ಎಂದು ಹೇಳಿದ್ದಾರೆ.

ಬಿಸ್ಕಿಟ್ ಹಂಚಿದಂತೆ ಅಲ್ಲ: ಮೃತರ ಸಂಬಂಧಿಕರಿಗೆ ಪರಿಹಾರ ನೀಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪರಿಹಾರ ನೀಡುವುದು ಬಿಸ್ಕಿಟ್ ಹಂಚಿದಷ್ಟು ಸುಲಭ ಅಲ್ಲ. ಈಗಲೇ ಈ ಬಗ್ಗೆ ನಾನು ನಿರ್ಧಾರ ಕೈಗೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದರು. ‘ಇದು ಫುಟ್ಬಾಲ್ ಆಟವಲ್ಲ. ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಸೂಕ್ಷ್ಮ ಮನಸ್ಥಿತಿ ಹೊಂದಿವೆ. ಉದ್ಯೋಗ ಪಡೆಯಲು ಅರ್ಹರಿರುವವರ ಮಾಹಿತಿ ನೀಡುವಂತೆ ಸಂಬಂಧಿಕರಿಗೆ ಸಚಿವಾಲಯ ಕೇಳಿದೆ. ಅದನ್ನು ಪರಿಶೀಲಿಸುತ್ತೇವೆ’ ಎಂದರು.

ಪಂಜಾಬ್ ಹಾಗೂ ಹಿಮಾಚಲ ಪ್ರದೇಶಕ್ಕೆ ಸೇರಿದ್ದ 31 ಮಂದಿಯ ಅವಶೇಷಗಳನ್ನು ಅಮೃತಸರದ ಶ್ರೀಗುರು ರಾಮದಾಸ್‌ಜೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ಉಳಿದವನ್ನು ಪಟ್ನಾ ಮತ್ತು ಕೋಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಯಿತು. ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

2014ರಲ್ಲಿ 40 ಭಾರತೀಯರನ್ನು ಐಎಸ್ ಉಗ್ರರು ಅಪಹರಿಸಿದ್ದರು. 39 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ತಾನು ಬಾಂಗ್ಲಾದೇಶದ ಮುಸ್ಲಿಂ ಎಂದು ಹೇಳಿಕೊಂಡಿದ್ದ ಒಬ್ಬ, ಅಲ್ಲಿಂದ ಪರಾರಿಯಾಗಿದ್ದ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಳೆದ ತಿಂಗಳು ಸಂಸತ್ತಿಗೆ ಮಾಹಿತಿ ನೀಡಿದ್ದರು.

ಇರಾಕ್‌ನಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪಂಜಾಬ್ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನೀಡಲಿದೆ ಎಂದು ಸಚಿವ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ ಅವರ ಶೈಕ್ಷಣಿಕ ಅರ್ಹತೆ ಆಧರಿಸಿ ಉದ್ಯೋಗ ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ಉದ್ಯೋಗ ಮತ್ತು ಪರಿಹಾರ

ಇರಾಕ್‌ನಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪಂಜಾಬ್ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನೀಡಲಿದೆ ಎಂದು ಸಚಿವ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ ಅವರ ಶೈಕ್ಷಣಿಕ ಅರ್ಹತೆ ಆಧರಿಸಿ ಉದ್ಯೋಗ ನೀಡಲಾಗುವುದು ಎಂದೂ ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರವು ತಿಂಗಳಿಗೆ ತಲಾ ₹20 ಸಾವಿರ ನೀಡುತ್ತಾ ಬಂದಿದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.