ಸೋಮವಾರ, ಜೂಲೈ 13, 2020
23 °C

ಗಾಳಿ ಸಹಿತ ಮಳೆ: ಹಲವೆಡೆ ಸಂಚಾರ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಳಿ ಸಹಿತ ಮಳೆ: ಹಲವೆಡೆ ಸಂಚಾರ ದಟ್ಟಣೆ

ಬೆಂಗಳೂರು: ಎರಡು ದಿನ ಬಿಡುವು ಕೊಟ್ಟಿದ್ದ ಮಳೆಯು ನಗರದ ಹಲವೆಡೆ ಸೋಮವಾರ ಸಂಜೆ ಮತ್ತೆ ಜೋರಾಗಿ ಸುರಿಯಿತು.

ನಗರದೆಲ್ಲೆಡೆ ಮಧ್ಯಾಹ್ನ 3 ಗಂಟೆಯಿಂದಲೇ ಮೋಡ ಕವಿದ ವಾತಾವರಣ ಆವರಿಸಿತ್ತು. ಸಂಜೆ 4.20ರ ಸುಮಾರಿಗೆ ಗುಡುಗು, ಬಿರುಸಾದ ಗಾಳಿ ಸಹಿತವಾಗಿ ಮಳೆ ಸುರಿಯಿತು. ಕೆಲಹೊತ್ತು ಬಿಡುವು ನೀಡಿದ ಬಳಿಕ ಮಳೆಯ ಆರ್ಭಟ ಮತ್ತೆ ಜೋರಾಯಿತು.

ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ರಿಚ್ಮಂಡ್‌ ಟೌನ್, ಶಾಂತಿನಗರ, ಬಸವನಗುಡಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಹಲಸೂರು, ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಯಶವಂತಪುರ, ಹನುಮಂತನಗರ, ಕೆಂಗೇರಿ, ಕೆ.ಆರ್‌.ಪುರ, ಮಹದೇವಪುರ, ಗರುಡಾಚಾರ್‌ ಪಾಳ್ಯ, ವೈಟ್‌ಫೀಲ್ಡ್‌ ಹಾಗೂ ಆಸುಪಾಸು ಸುಮಾರು ಅರ್ಧ ಗಂಟೆಗೂ ಅಧಿಕ ಮಳೆಯಾಗಿದೆ.

ಇಂದಿರಾನಗರ, ದೊಮ್ಮಲೂರು, ವರ್ತೂರು, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಓಕಳೀಪುರ, ಬಳ್ಳಾರಿ ರಸ್ತೆ, ಆರ್.ಟಿ.ನಗರಗಳಲ್ಲಿ ಮಳೆಯಿಂದಾಗಿ ಪ್ರಮುಖ ರಸ್ತೆಗಳ ಮೇಲೆ ನೀರು ತುಂಬಿಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು.

ಕ್ವೀನ್ಸ್ ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳ ನೀರು ತುಂಬಿದ್ದರಿಂದ ಭಾಗಶಃ ನೀರು ರಸ್ತೆಯ ಮೇಲೆ ಹರಿಯಿತು. ಅದರಲ್ಲೇ ಸವಾರರು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದದ್ದು ಕಂಡುಬಂತು. ಶಿವಾನಂದ ವೃತ್ತದ ಬಳಿಯ ಕೆಳ ಸೇತುವೆ ಬಳಿ ನಿಂತಿದ್ದ ನೀರಿನಲ್ಲಿ ಸವಾರರು ವಾಹನಗಳನ್ನು ತಳ್ಳಿಕೊಂಡು ಮುಂದೆ ಸಾಗಿದರು. ಜೆ.ಸಿ.ರಸ್ತೆ, ಮೈಸೂರು ರಸ್ತೆ, ಹಾಗೂ ಕಾರ್ಪೊರೇಷನ್‌ ವೃತ್ತದ ಬಳಿ ಹತ್ತು ನಿಮಿಷ ಸಂಚಾರ ದಟ್ಟಣೆ ಉಂಟಾಗಿತ್ತು. ಸುರಿಯುವ ಮಳೆಯಲ್ಲಿಯೇ ಪೊಲೀಸರು ವಾಹನಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಸ್ತೂರಬಾ ರಸ್ತೆಯ ತೂಬಿನಲ್ಲಿ ಸಿಲುಕಿದ್ದ ಕಸವನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ದಾರಿ ಮಾಡಿಕೊಟ್ಟ ಯುವಕ

ಮರದ ಕೊಂಬೆಗಳು ಧರೆಗೆ: ಕೋರಮಂಗಲ, ಎಜಿಎಸ್ ಲೇಔಟ್, ಕುಮಾರಸ್ವಾಮಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಜೆ.ಪಿ.ನಗರ, ಎಚ್‌ಎಎಲ್ 2ನೇ ಹಂತ ಹಾಗೂ ಎನ್‌ಆರ್‌ಐ ಲೇಔಟ್‌ ಸೇರಿದಂತೆ 11 ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.

ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲವಡೆ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ದೂರು ಬಂದ ಕೂಡಲೇ ಸ್ಥಳಕ್ಕೆ ಹೋಗಿ ಮರಗಳನ್ನು ಅರಣ್ಯ ವಿಭಾಗದ ಸಿಬ್ಬಂದಿ ತೆರವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದರು.

**

ಮರದ ಕೊಂಬೆಗಳು ಧರೆಗೆ

ಕೋರಮಂಗಲ, ಎಜಿಎಸ್ ಲೇಔಟ್, ಕುಮಾರಸ್ವಾಮಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಜೆ.ಪಿ.ನಗರ, ಎಚ್‌ಎಎಲ್ 2ನೇ ಹಂತ ಹಾಗೂ ಎನ್‌ಆರ್‌ಐ ಲೇಔಟ್‌ ಸೇರಿದಂತೆ 11 ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.

ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲವಡೆ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ದೂರು ಬಂದ ಕೂಡಲೇ ಸ್ಥಳಕ್ಕೆ ಹೋಗಿ ಮರಗಳನ್ನು ಅರಣ್ಯ ವಿಭಾಗದ ಸಿಬ್ಬಂದಿ ತೆರವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದರು.

ಕೆಲವೆಡೆ ಕೊಂಬೆಗಳು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೋರಮಂಗಲದ ಕೇಂದ್ರಿಯ ಸದನದ ಬಳಿ ವಿದ್ಯುತ್ ಕಂಬ ಉರುಳಿಬಿದ್ದಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದರು.

ವಿದ್ಯುತ್ ವ್ಯತ್ಯಯದ ಕುರಿತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ 1,066 ದೂರುಗಳ ಬಂದಿವೆ. ಆ ಪೈಕಿ 251 ದೂರುಗಳಿಗೆ ಸ್ಪಂದಿಸಿದ್ದು, 815 ದೂರುಗಳು ಬಾಕಿ ಇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.