ಮಂಗಳವಾರ, ಡಿಸೆಂಬರ್ 10, 2019
26 °C
ಸೂಪರ್‌ ಕಪ್‌ ಫುಟ್‌ಬಾಲ್‌; ಇಂದು ಎಟಿಕೆ ಎದುರು ಪಂದ್ಯ

ಜಯದ ವಿಶ್ವಾಸದಲ್ಲಿ ಎಫ್‌ಸಿ ಗೋವಾ

Published:
Updated:
ಜಯದ ವಿಶ್ವಾಸದಲ್ಲಿ ಎಫ್‌ಸಿ ಗೋವಾ

ಭುವನೇಶ್ವರ (ಪಿಟಿಐ): ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ‌ಲ್ಲಿ ಸೆಮಿ ಫೈನಲ್‌ನಲ್ಲಿ ಸೋತಿದ್ದ ಎಫ್‌ಸಿ ಗೋವಾ ತಂಡ ಈಗ ಹೊಸ ಸವಾಲಿಗೆ ಸಜ್ಜಾಗಿದೆ.

ಮಂಗಳವಾರ ನಡೆಯುವ ಹೀರೊ ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೋವಾ ತಂಡ ಎಟಿಕೆ ಸವಾಲು ಎದುರಿಸಲಿದೆ.

ಈ ಬಾರಿಯ ಐಎಸ್‌ಎಲ್‌ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಒಂದು ಪಂದ್ಯದಲ್ಲಿ ಗೋವಾ 4–1 ಗೋಲುಗಳಿಂದ ಗೆದ್ದಿತ್ತು. ಇನ್ನೊಂದು ಪಂದ್ಯ 1–1 ಗೋಲುಗಳಿಂದ ಡ್ರಾ ಆಗಿತ್ತು.

ಹಿಂದಿನ ಈ ಗೆಲುವಿನ ಬಲದೊಂದಿಗೆ ಕಣಕ್ಕಿಳಿಯುತ್ತಿರುವ ಗೋವಾ ಪಡೆ ಮತ್ತೊಮ್ಮೆ ಎಟಿಕೆ ತಂಡಕ್ಕೆ ಸೋಲಿನ ರುಚಿ ತೋರಿಸುವ ಹುಮ್ಮಸ್ಸಿನಲ್ಲಿದೆ.

ಚಿಂಗ್ಲೆನ್‌ಸನಾ, ಅಲಿ, ನಾರಾಯಣ್‌ ಮತ್ತು ಪಿನ್‌ಹಿರೊ ಅವರು ರಕ್ಷಣಾ ವಿಭಾಗದಲ್ಲಿ ಗೋವಾ ತಂಡದ ಶಕ್ತಿಯಾಗಿದ್ದಾರೆ. ಐಎಸ್‌ಎಲ್‌ನಲ್ಲಿ ಮೋಡಿ ಮಾಡಿದ್ದ ಇವರು ಎಟಿಕೆ ಎದುರೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಅಂಥೋಣಿ, ಬ್ರೆಂಡನ್‌, ಜೊವೆಲ್‌ ಮತ್ತು ಪ್ರಣಯ್‌ ಅವರು ಮಿಡ್‌ಫೀಲ್ಡ್‌ ವಿಭಾಗದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಮುಂಚೂಣಿ ವಿಭಾಗದ ಆಟಗಾರರಾದ ಕೊರೊ, ಮನ್ವೀರ್‌, ಆ್ಯಡ್ರಿಯನ್‌ ಮತ್ತು ಲಿಸ್ಟನ್‌ ಅವರೂ ಗುಣಮಟ್ಟದ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಡುವ ಭರವಸೆಯಲ್ಲಿದ್ದಾರೆ.

ಎಟಿಕೆ ತಂಡ ಈ ಪಂದ್ಯದಲ್ಲಿ ಗೆದ್ದು ಐಎಸ್‌ಎಲ್‌ನಲ್ಲಿ ಎದುರಾಗಿದ್ದ ನಿರಾಸೆ ಮರೆಯಲು ಕಾಯುತ್ತಿದೆ.

ರಾಬಿ ಕೀನ್‌, ಜೋಸ್‌ ಎಗಸ್‌ ಡಾಸ್‌ ಸ್ಯಾಂಟೊಸ್‌ ಬ್ರಾಂಕೊ, ಜಾಜಿ ಕುಕಿ, ಕಾರ್ಲ್‌ ಬೇಕರ್‌ ಮತ್ತು ಯೂಜೆನ್ಸನ್‌ ಲಿಂಗ್ಡೊ ಅವರನ್ನು ಹೊಂದಿರುವ ಈ ತಂಡ ಫಾರ್ವರ್ಡ್‌ ಮತ್ತು ಮಿಡ್‌ಫೀಲ್ಡ್‌ ವಿಭಾಗಗಳಲ್ಲಿ ಶಕ್ತಿಯುತವಾಗಿದೆ.

ಕೀಗನ್‌ ಪೆರೇರಾ, ಶಂಕರ್‌ ಸಂಪಂಗಿರಾಜ್‌, ಅನ್ವರ್‌ ಅಲಿ, ರಾಬಿನ್‌ ಸಿಂಗ್‌ ಮತ್ತು ಅಗಸ್ಟೀನ್‌ ಫರ್ನಾಂಡೀಸ್‌ ಅವರ ಬಲವೂ ಈ ತಂಡಕ್ಕಿದೆ.

ಆರಂಭ: ರಾತ್ರಿ 8.

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌.

ಪ್ರತಿಕ್ರಿಯಿಸಿ (+)