ಗುರುವಾರ , ಡಿಸೆಂಬರ್ 12, 2019
20 °C

ಈಸ್ಟರ್ನ್‌ ಸ್ಪೋರ್ಟಿಂಗ್‌ ಯೂನಿಯನ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಈಸ್ಟರ್ನ್‌ ಸ್ಪೋರ್ಟಿಂಗ್‌ ಯೂನಿಯನ್‌ಗೆ ಜಯ

ಶಿಲ್ಲಾಂಗ್‌ (ಪಿಟಿಐ): ಮಂದಾಕಿನಿ ಮತ್ತು ಕಮಲಾ ದೇವಿ, ದಾಖಲಿಸಿದ ತಲಾ ಒಂದು ಗೋಲಿನ ನೆರವಿನಿಂದ ಈಸ್ಟರ್ನ್‌ ಸ್ಪೋರ್ಟಿಂಗ್‌ ಯೂನಿಯನ್‌ ತಂಡ ಹೀರೊ ಇಂಡಿಯಾ ಮಹಿಳಾ ಫುಟ್‌ಬಾಲ್‌ ಲೀಗ್‌‌ನ ಪಂದ್ಯದಲ್ಲಿ ಗೆದ್ದಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂ ಗಣದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ಈಸ್ಟರ್ನ್‌ ಸ್ಪೋರ್ಟಿಂಗ್‌ ತಂಡ 2–0 ಗೋಲುಗಳಿಂದ ಗೋಕು ಲಮ್‌ ಕೇರಳ ಎಫ್‌ಸಿ ತಂಡವನ್ನು ಸೋಲಿಸಿತು. ಟೂರ್ನಿಯಲ್ಲಿ ಈಸ್ಟರ್ನ್‌ ತಂಡ ಜಯಿಸಿದ ಸತತ ನಾಲ್ಕನೇ ಪಂದ್ಯ ಇದಾಗಿದೆ. ಈ ತಂಡದ ಖಾತೆಯಲ್ಲಿ ಒಟ್ಟು 12 ಪಾಯಿಂಟ್ಸ್‌ಗಳಿವೆ.

ಬಲಿಷ್ಠ ಆಟಗಾರ್ತಿಯರನ್ನು ಹೊಂದಿದ್ದ ಎರಡೂ ತಂಡಗಳು ಶುರು ವಿನಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲ 20 ನಿಮಿಷಗಳ ಅವಧಿಯಲ್ಲಿ ಸಮಬಲದ ಹೋರಾಟ ಕಂಡುಬಂದಿತು. ನಂತರ ಈಸ್ಟರ್ನ್‌ ತಂಡ ಆಟದ ವೇಗ ಹೆಚ್ಚಿಸಿಕೊಂಡಿತು.

24ನೇ ನಿಮಿಷದಲ್ಲಿ ಮಂದಾಕಿನಿ, ಈಸ್ಟರ್ನ್‌ ಪಾಳಯದಲ್ಲಿ ಮಂದಹಾಸ ಮೂಡಿಸಿದರು. ಸಹ ಆಟಗಾರ್ತಿ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಅವರು ಲೀಲಾಜಾಲವಾಗಿ ಗುರಿ ಸೇರಿಸಿದರು. 29ನೇ ನಿಮಿಷದಲ್ಲಿ ಈ ತಂಡಕ್ಕೆ ಗೋಲು ಬಾರಿಸುವ ಮತ್ತೊಂದು ಅವಕಾಶ ಸಿಕ್ಕಿತ್ತು. ಆದರೆ ಕಮಲಾ ದೇವಿ ಇದನ್ನು ಕೈಚೆಲ್ಲಿದರು. 31ನೇ ನಿಮಿಷದಲ್ಲಿ ಸಿಕ್ಕ ಅವಕಾಶದ ಲಾಭ ಎತ್ತಿಕೊಳ್ಳಲು ಫಜಿಲಾ ವಿಫಲರಾದರು.

ಬಳಿಕ ಗೋಕುಲಮ್‌ ತಂಡ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಆದರೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಈ ತಂಡದ ಆಟಗಾರ್ತಿಯರಿಗೆ ಆಗಲಿಲ್ಲ. ಹೀಗಾಗಿ ಈಸ್ಟರ್ನ್‌ 1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದ ಆರಂಭದಲ್ಲೂ ಎರಡೂ ತಂಡಗಳು ತುರುಸಿನ ಪೈ‍‍ಪೋಟಿ ನಡೆಸಿದವು. 50ನೇ ನಿಮಿಷದಲ್ಲಿ ಕಮಲಾ ದೇವಿ ಗೋಲು ದಾಖಲಿಸಿ ಈಸ್ಟರ್ನ್‌ ತಂಡದ ಗೆಲುವು ಖಚಿತಪಡಿಸಿದರು. ಅವರು ಎದುರಾಳಿ ಆವರಣದ ಎಡತುದಿಯಿಂದ ಚೆಂಡನ್ನು ಗುರಿ ಮುಟ್ಟಿಸಿದ ರೀತಿ ಸೊಗಸಾಗಿತ್ತು. 77ನೇ ನಿಮಿಷದಲ್ಲಿ ಕಮಲಾ ದೇವಿ ಬಾರಿಸಿದ ಚೆಂಡನ್ನು ಗೋಕುಲಮ್‌ ತಂಡದ ಗೋಲ್‌ಕೀಪರ್‌ ರಶ್ಮಿ, ಅಮೋಘ ರೀತಿಯಲ್ಲಿ ತಡೆದರು.

ಏಪ್ರಿಲ್‌ 6ರಂದು ನಡೆಯುವ ಪಂದ್ಯದಲ್ಲಿ ಈಸ್ಟರ್ನ್‌ ತಂಡ ಕೆ.ಆರ್‌.ವೈ.ಎಚ್‌.ಪಿ.ಎಸ್‌.ಎ ವಿರುದ್ಧ ಸೆಣಸಲಿದೆ. ಅದೇ ದಿನ ನಡೆಯುವ ಮತ್ತೊಂದು ಹೋರಾಟದಲ್ಲಿ ಗೋಕುಲಮ್‌ ಎಫ್‌ಸಿ ತಂಡ ಇಂಡಿಯಾ ರಷ್‌ ಎಸ್‌ಸಿ ವಿರುದ್ಧ ಆಡಲಿದೆ.

ಸೇತು ಎಫ್‌ಸಿಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಸೇತು ಎಫ್‌ಸಿ ತಂಡ 2–0 ಗೋಲುಗಳಿಂದ ರೈಸಿಂಗ್‌ ಸ್ಟೂಡೆಂಟ್ಸ್‌ ಕ್ಲಬ್‌ ವಿರುದ್ಧ ಗೆದ್ದಿತು.

ವಿಜಯಿ ತಂಡದ ಸಬೀನಾ ಮತ್ತು ಮನೀಷಾ ಅವರು ಕ್ರಮವಾಗಿ 47 ಮತ್ತು 90ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಗಮನ ಸೆಳೆದರು.

ಪ್ರತಿಕ್ರಿಯಿಸಿ (+)