3
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಬೆನ್ನುಬಿದ್ದ ಮುಖಂಡರು

ಮಕ್ಕಳಿಗೆ ಟಿಕೆಟ್‌: ‘ಕೈ’ ನಾಯಕರ ಪ್ರಯತ್ನ

Published:
Updated:
ಮಕ್ಕಳಿಗೆ ಟಿಕೆಟ್‌: ‘ಕೈ’ ನಾಯಕರ ಪ್ರಯತ್ನ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳು ಮತ್ತು ಸಂಬಂಧಿಕರಿಗೆ ಟಿಕೆಟ್‌ ಗಿಟ್ಟಿಸಿ ಕೊಡಲು ಲಾಬಿ ನಡೆಸುತ್ತಿರುವ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ಮಗಳು ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಲು ಬಯಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಪುತ್ರ ರುಮಾನ್‌ ಬೇಗ್‌ಗೆ ಟಿಕೆಟ್‌ ನೀಡುವಂತೆ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ವೇಣುಗೋಪಾಲ್‌ ಜೊತೆ ಚರ್ಚೆ ನಡೆಸಿದರು.

ಸಚಿವರಾದ ಕೆ.ಜೆ. ಜಾರ್ಜ್‌, ಎಂ. ಕೃಷ್ಣಪ್ಪ, ಸಂತೋಷ್‌ ಲಾಡ್‌, ತನ್ವೀರ್‌ ಸೇಠ್‌, ಎ. ಮಂಜು, ಪ್ರಿಯಾಂಕ್‌ ಖರ್ಗೆ, ಶರಣಪ್ರಕಾಶ ಪಾಟೀಲ ಕೂಡಾ ವೇಣು

ಗೋಪಾಲ್‌ ಅವರನ್ನು ಭೇಟಿ ಮಾಡಿದರು.

ಟಿಕೆಟ್‌ ಹಂಚಿಕೆ ಕುರಿತಂತೆ ಈ ನಾಯಕರಿಗೆ ಭರವಸೆ ನೀಡಿರುವ ವೇಣುಗೋಪಾಲ್‌, ಅಂತಿಮ ತೀರ್ಮಾನವನ್ನು ಹೈಕಮಾಂಡ್‌ ಕೈಗೊಳ್ಳಲಿದೆ ಎಂಬುದಾಗಿ ಹೇಳಿದರು ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಸುಮಾರು 30ಕ್ಕೂ ಹೆಚ್ಚು ನಾಯಕರು ತಮ್ಮ ಮಕ್ಕಳು ಅಥವಾ ಸಂಬಂಧಿಕರಿಗೆ ಟಿಕೆಟ್‌ ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ವರುಣಾ ಕ್ಷೇತ್ರದಿಂದ ಪುತ್ರ ಡಾ.ಯತೀಂದ್ರ ಕಣಕ್ಕಿಳಿಸಲು ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ನಾಯಕರಲ್ಲಿ ಸೇರಿದ್ದಾರೆ.

ರುಮಾನ್‌ಗೆ ಹೆಬ್ಬಾಳ ಕ್ಷೇತ್ರದ ಟಿಕೆಟ್‌ ನೀಡುವಂತೆ ಬೇಗ್‌ ಒತ್ತಾಯಿಸುತ್ತಿದ್ದಾರೆ. ಸೌಮ್ಯಾ ರೆಡ್ಡಿಯನ್ನು ಜಯನಗರ ಕ್ಷೇತ್ರದಿಂದ ಕಣಕ್ಕಿಳಿಸಲು ರಾಮಲಿಂಗಾರೆಡ್ಡಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಅದೇ ಕ್ಷೇತ್ರದಿಂದ ತಮ್ಮ ಮಗ ಮನ್ಸೂರ್‌ ಅಲಿ ಖಾನ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್‌ ಬಯಸಿದ್ದಾರೆ. ಈ ಮಧ್ಯೆ, ಜಯನಗರದಿಂದ ಪಕ್ಷದ ‌ಹಿಂದುಳಿದ ವಿಭಾಗದ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌ಗೆ ಟಿಕೆಟ್‌ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಮತದಾರರ ಮನಸ್ಥಿತಿಯ ಬಗ್ಗೆ ಕೆಲವು ಟಿಕೆಟ್‌ ಆಕಾಂಕ್ಷಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಂದ ವೇಣುಗೋಪಾಲ್‌ ಅಭಿಪ್ರಾಯ ಸಂಗ್ರಹಿಸಿದರು.

**

‘ಕಸದ ಬುಟ್ಟಿಗೆ ಎಸೆಯಲೂ ಸೂಕ್ತವಲ್ಲ’

‘ಬಿಜೆಪಿ ಬಿಡುಗಡೆ ಮಾಡಿರುವ ಆರೋಪ ಪಟ್ಟಿ ಕಸದ ಬುಟ್ಟಿಗೆ ಎಸೆಯಲೂ ಸೂಕ್ತವಲ್ಲ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದರು.

‘ಬಿಜೆಪಿ ಮಾಡಿರುವ ಆರೋಪಗಳಲ್ಲಿ ನಿಜಾಂಶಗಳಿಲ್ಲ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಿಸುವ ಆ ಪಕ್ಷದ ನಾಯಕರಿಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಬಗ್ಗೆ ಅರಿವಿಲ್ಲ’ ಎಂದರು.

‘ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ’ ಎಂದೂ ಸವಾಲು ಹಾಕಿದರು.

‘ರಾಜ್ಯದಲ್ಲಿ ಬಿಜೆಪಿಯ 17 ಸಂಸದರಿದ್ದಾರೆ. ಆದರೆ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಅವರು ಚಕಾರ ಎತ್ತುವುದಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಮುಂದೆ ಮಾತನಾಡಲು ಭಯ ಪಡುತ್ತಾರೆ. ರಾಜ್ಯ ಪ್ರತಿನಿಧಿಸುವ ನಾಲ್ವರು ಮಂತ್ರಿಗಳು ಹೆಸರಿಗಷ್ಟೇ ಇದ್ದಾರೆ’ ಎಂದೂ ಟೀಕಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರನ ವಿರುದ್ಧ ಯಡಿಯೂರಪ್ಪ ಪುತ್ರ ಅಲ್ಲ, ಸ್ವತಃ ಯಡಿಯೂರಪ್ಪ ಕಣಕ್ಕಿಳಿದರೂ ಗೆಲ್ಲುವುದಿಲ್ಲ’ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry