7

ಬಿಜೆಪಿಯಲ್ಲೇ ಉಳಿಯಲು ಹಾಲಪ್ಪ ನಿರ್ಧಾರ

Published:
Updated:
ಬಿಜೆಪಿಯಲ್ಲೇ ಉಳಿಯಲು ಹಾಲಪ್ಪ ನಿರ್ಧಾರ

ಬೆಂಗಳೂರು: ಬಿಜೆಪಿ ತೊರೆಯಲು ಮುಂದಾಗಿದ್ದ ಮಾಜಿ ಶಾಸಕ ಹರತಾಳು ಹಾಲಪ್ಪ ಜತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನಡೆಸಿದ ಸಂಧಾನ ಯಶಸ್ವಿಯಾಗಿದೆ.

ಭೇಟಿ ಬಳಿಕ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಹಾಲಪ್ಪ, ‘ಇವತ್ತಿನ ಭೇಟಿ ಖುಷಿ ತಂದಿದೆ. ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ’ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಇದಾದ ನಂತರ, ಸಾಗರ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಹಾಲಪ್ಪ ಕೋರಿದ್ದರು. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ಹಾಲಪ್ಪಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಎಂಬ ಮಾಹಿತಿ ಬಂದಿತ್ತು. ಈ ಕಾರಣಕ್ಕಾಗಿ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಕೊಡಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದರು.

ಟಿಕೆಟ್ ಕೈತಪ್ಪಲಿದೆ ಎಂದು ಗೊತ್ತಾದ ಕೂಡಲೇ, ಕಾಂಗ್ರೆಸ್‌ನತ್ತ ಮುಖ ಮಾಡಿದ್ದ ಹಾಲಪ್ಪ ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಇದಕ್ಕೆ ಸಹಮತ ಸೂಚಿಸಿದ್ದರು. ಸಿದ್ದರಾಮಯ್ಯ ಸಮ್ಮತಿ ಸೂಚಿಸಿರಲಿಲ್ಲ. ಏತನ್ಮಧ್ಯೆ, ಹಾಲಪ್ಪ ಅವರನ್ನು ರಾತ್ರಿ ಕರೆಸಿಕೊಂಡ ಯಡಿ ಯೂರಪ್ಪ, ಸಂಧಾನ ನಡೆಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡುತ್ತೇವೆ. ಈ ಚುನಾವಣೆಯಲ್ಲಿ ಸೊರಬ, ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಾ. ಈಗಲೇ ಶಿವಮೊಗ್ಗಕ್ಕೆ ಹೊರಡು ಎಂದು ಯಡಿಯೂರಪ್ಪ ಸೂಚಿಸಿದರು. ಇದನ್ನು ಹಾಲಪ್ಪ ಒಪ್ಪಿಕೊಂಡರು’ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry