ಭಾನುವಾರ, ಡಿಸೆಂಬರ್ 15, 2019
23 °C

ವರ್ತೂರು ಕೆರೆಯಲ್ಲಿ ಮತ್ತೆ ನೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ತೂರು ಕೆರೆಯಲ್ಲಿ ಮತ್ತೆ ನೊರೆ

ಬೆಂಗಳೂರು: ವರ್ತೂರು ಕೆರೆ ಕೋಡಿಯಲ್ಲಿ ನೊರೆ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಗಾಳಿ ಬೀಸಿದ ಕಡೆ ನೊರೆ ಹಾರುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ನಗರದಲ್ಲಿ ಮೂರು ದಿನಗಳಿಂದ ಆಲಿಕಲ್ಲು ಸಹಿತ ಧಾರಾಕಾರ ಮಳೆ ಬಿದ್ದಿದ್ದರಿಂದ ಕೆರೆಗೆ ನೀರು ಹರಿದು ಬಂದಿದೆ. ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಕೋರಮಂಗಲ–ಚಲ್ಲಘಟ್ಟ ಕಣಿವೆ ಯೋಜನೆಗಾಗಿ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಕೆರೆಯಿಂದ ನೀರು ಹೊರಗೆ ಹರಿಯುವ ಪ್ರದೇಶ ಕಿರಿದಾಗಿದೆ. ಈ ಕಾರಣದಿಂದ ನೊರೆ ಪ್ರಮಾಣ ಹೆಚ್ಚಾಗಿದೆ.

ಈ ಹಿಂದೆಯೂ ಅನೇಕ ಬಾರಿ ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದ ನೊರೆ ಉಂಟಾಗಿತ್ತು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಆಗಿತ್ತು. ಹೀಗಾಗಿ, ನೊರೆಯು ರಸ್ತೆಗೆ ಹಾರದಂತೆ ತಡೆಗಟ್ಟಲು ಜಾಲರಿ  ಅಳವಡಿಸಲಾಗಿತ್ತು. ನೊರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಸ್ಪ್ರಿಂಕ್ಲರ್‌ಗಳನ್ನು ಹಾಕಲಾಗಿತ್ತು. ಆದರೆ, ಕೆ.ಸಿ. ಕಣಿವೆ ಯೋಜನೆಯ ಕಾಮಗಾರಿ ನಡೆಯುತ್ತಿರುವುದರಿಂದ ಜಾಲರಿಯನ್ನು ತೆಗೆಯಲಾಗಿದೆ. ಸ್ಪ್ರಿಂಕ್ಲರ್‌ಗಳ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದು ಕೂಡಾ ನೊರೆಯ ಪ್ರಮಾಣ ಹೆಚ್ಚಲು ಕಾರಣ.

‘ಜಾಲರಿ ಇಲ್ಲದ ಕಾರಣ ನೊರೆ ವಾಹನ ಸವಾರರ ಮೇಲೆ ಬೀಳುತ್ತದೆ. ನೊರೆ ಮೈಮೇಲೆ ಬಿದ್ದರೆ ತುರಿಕೆ ಉಂಟಾಗುತ್ತದೆ’ ಎಂದು ಸ್ಥಳೀಯರೊಬ್ಬರು ದೂರಿದರು.

‘ಈ ಜಲಮೂಲವು ಕಲುಷಿತಗೊಂಡು ಅನೇಕ ವರ್ಷಗಳು ಉರುಳಿವೆ. ಇದರ ಒಡಲ ತುಂಬೆಲ್ಲಾ ವಿಷಯುಕ್ತ ನೀರು ತುಂಬಿದೆ. ದುರ್ವಾಸನೆ, ನೊರೆ ಸಮಸ್ಯೆ ಕಾಡುತ್ತಿದೆ. ಈ ಕೆರೆಯ ನಿರ್ವಹಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ವಹಿಸಲಾಗಿದೆ. ಬಿಡಿಎ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಸುರೇಶ್ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)