ಮಂಗಳವಾರ, ಆಗಸ್ಟ್ 11, 2020
27 °C

‘ಈಡಿಗರ ಕೋಣವನ್ನು ಕಡಿಯಲೇಬೇಕು...’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಈಡಿಗರ ಕೋಣವನ್ನು ಕಡಿಯಲೇಬೇಕು...’

ಕಲಬುರ್ಗಿ: ಅಫಜಲಪುರದಲ್ಲಿ ‘ಕೈ’ ಮತ್ತು ‘ಕಮಲ’ ಅಭ್ಯರ್ಥಿಗಳು ಅದಲು–ಬದಲು ಆಗಿರುವ ಬೆನ್ನಲ್ಲೇ, ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ ಅರುಣಕುಮಾರ್ ಪಾಟೀಲ ಅವರು ಬೆಂಬಲಿಗರನ್ನು ಉದ್ದೇಶಿಸಿ ಈಡಿಗರ ಕೋಣವನ್ನು ಕಡಿಯಲೇಬೇಕು ಎಂದು ಭಾಷಣ ಮಾಡಿರುವ ವಿಡಿಯೊ ವೈರಲ್ ಆಗಿದೆ.

ಏ.1ರಂದು ಅಫಜಲಪುರದ ತಮ್ಮ ತೋಟದ ಮನೆಯಲ್ಲಿ ಆಯೋಜಿಸಿದ್ದ ಬೆಂಬಲಿಗರು ಮತ್ತು ಹಿತೈಷಿಗಳ ಸಭೆಯಲ್ಲಿ ಮಾತನಾಡಿದ್ದ ಅರುಣಕುಮಾರ್, 'ಮದ್ಯ ಮಾರುವ ಮನುಷ್ಯ (ಮಾಲೀಕಯ್ಯ) ಅನೇಕ ಕೊಲೆಗಳನ್ನು ಮಾಡಿಸಿದ್ದಾರೆ. ಸರಣಿ ಕೊಲೆಗಳನ್ನು ಮಾಡಿಸಿದ್ದಾರೆ. ಇವತ್ತು ಶಾಸಕರಾಗಿ ವಿಧಾನಸೌಧದಲ್ಲಿ ಕುಳಿತಿದ್ದಾರೆ. ಸರಣಿ ಕೊಲೆಗಳಲ್ಲಿ ಇವರು ಜೈಲಿಗೆ ಹೋಗುತ್ತಿದ್ದರು. ಶಾಸಕ ಎಂಬ ಕಾರಣಕ್ಕೆ ಜೆ.ಎಚ್.ಪಟೇಲ್ ಇವರನ್ನು ಉಳಿಸಿಕೊಂಡಿದ್ದರು. ಸರಣಿ ಕೊಲೆಗಾರ ನಮ್ಮ ಶಾಸಕನಾಗಿ ಇವತ್ತು ಕೋಣದ ರೀತಿಯಲ್ಲಿ ನಮ್ಮ ತಾಲ್ಲೂಕಿನಲ್ಲಿ, ಜಿಲ್ಲೆಯಲ್ಲಿ, ಕರ್ನಾಟಕದಲ್ಲಿ ತಿರುಗಾಡುತ್ತಿದೆ. ಈ ಕೋಣವನ್ನು ನಾವು ಕಡಿಯಲೇಬೇಕು. ಈ ಕೋಣವನ್ನು ಯಾವ ರೀತಿ ಕಡಿಯಬೇಕು ಅಂದರೆ ತಮ್ಮ ಅಮೂಲ್ಯವಾದ ಮತಗಳಿಂದ ಕಡಿಯಬೇಕು.. ಈಡಿಗರ ಕೋಣ ಮುಂದೆ ಬರಲೇಬಾರದು..' ಎಂದು ಹೇಳಿದ್ದಾರೆ.

ಅರುಣಕುಮಾರ್ ಪಾಟೀಲ ಪ್ರಸ್ತುತ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.

ಅರುಣಕುಮಾರ್ ಬಂಧನಕ್ಕೆ ಆಗ್ರಹ

ಕಲಬುರ್ಗಿ: ಶಾಸಕ ಮಾಲೀಕಯ್ಯ ಗುತ್ತೇದಾರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಅರುಣಕುಮಾರ್ ಪಾಟೀಲ ಅವರನ್ನು ಕೂಡಲೇ ಬಂಧಿಸಬೇಕು ಎಂದು ಈಡಿಗ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಈಡಿಗ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೆಚೂರ್ ನೇತೃತ್ವದಲ್ಲಿ ಸಭೆ ನಡೆಸಿದ ಮುಖಂಡರು, ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಈ ಸಭೆಯಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರ ಸಹೋದರ ನಿತಿನ್ ಗುತ್ತೇದಾರ ಸೇರಿ ಹಲವು ಮುಖಂಡರು ಭಾಗವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.