ಶುಕ್ರವಾರ, ಡಿಸೆಂಬರ್ 6, 2019
23 °C
ರಾಜಕೀಯ ಪಕ್ಷ, ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ, ಯಂತ್ರದ ಬಗ್ಗೆ ತಪ್ಪುಗ್ರಹಿಕೆ ಬೇಡ

ಮತ ಖಾತ್ರಿಗೆ ವಿವಿಪ್ಯಾಟ್ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ ಖಾತ್ರಿಗೆ ವಿವಿಪ್ಯಾಟ್ ಬಳಕೆ

ಬೆಳಗಾವಿ: ಚಲಾಯಿಸಿದ ಪ್ರತಿಯೊಂದು ಮತವನ್ನೂ ಖಾತ್ರಿಪಡಿಸುವ ಉದ್ದೇಶದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ವಿವಿಪ್ಯಾಟ್ (ಮತ ಖಾತ್ರಿ ಯಂತ್ರ)ಗಳನ್ನು ಬಳಸಲಾಗುತ್ತಿದೆ. ಮತದಾರರು ಯಾವುದೇ ಸಂದೇಹ ಅಥವಾ ತಪ್ಪುಗ್ರಹಿಕೆ ಇಲ್ಲದೇ ಮತ ಹಾಕಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದರು.ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆ ವೇಳೆ ಅವರು ಮಾತನಾಡಿದರು.

‘ಪ್ರತಿ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಪಕ್ಕದಲ್ಲಿ ವಿವಿಪ್ಯಾಟ್ (ವೇರಿಫೈಯೇಬಲ್ ವೋಟರ್ ಪೇಪರ್ ಆಡಿಟ್ ಟ್ರಾಲ್) ಪೆಟ್ಟಿಗೆ ಇರಿಸಲಾಗಿರುತ್ತದೆ. ಮತದಾರ ಮತಗಟ್ಟೆಗೆ ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವುದನ್ನು ಖಚಿತಪಡಿಸಿಕೊಂಡು ಬ್ಯಾಲೆಟ್ ಯುನಿಟ್‌ನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು/ ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತಬೇಕು. ನೀಲಿ ಗುಂಡಿ ಒತ್ತಿದ ಬಳಿಕ ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರು /ಚಿಹ್ನೆಯ ಎದುರು ಇರುವ ಕೆಂಪು ದೀಪ ಹಾಗೂ ಬೀಪ್ ಸದ್ದು ಮತ ಚಲಾವಣೆಗೊಂಡಿರುವುದನ್ನು ಖಚಿತಪಡಿಸುತ್ತದೆ. ಇದಾದ ಬಳಿಕ ಪಕ್ಕದಲ್ಲೇ ಇಟ್ಟಿರುವ ವಿವಿಪ್ಯಾಟ್ ಪೆಟ್ಟಿಗೆಯಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡಿರುವ ಬ್ಯಾಲೆಟ್ ಚೀಟಿಯನ್ನು ಏಳು ಸೆಕೆಂಡ್‌ಗಳ ಕಾಲ ಮತದಾರ ನೋಡಬಹುದು’ ಎಂದು ವಿವರಿಸಿದರು.

‘ವಿವಿಪ್ಯಾಟ್ ಪರದೆ ಮೇಲೆ ಕಾಣಿಸುವ ಮಾಹಿತಿಯುಳ್ಳ ಚೀಟಿಯು 7 ಸೆಕೆಂಡ್‌ಗಳ ಬಳಿಕ ಸ್ವಯಂ ತುಂಡಾಗಿ ಅದರ ಕೆಳಗಿನ ಪೆಟ್ಟಿಗೆಯಲ್ಲಿ ಬೀಳುತ್ತದೆ. ಪ್ರತಿಯೊಬ್ಬ ಮತದಾರ ತಾವು ಚಲಾಯಿಸಿದ ಮತವನ್ನು ವಿವಿಪ್ಯಾಟ್ ಪರದೆ ಮೇಲೆ ನೋಡುವ ಮೂಲಕ ಮತವನ್ನು ಖಾತ್ರಿಪಡಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ತಪ್ಪು ಮಾಹಿತಿ ನೀಡಿದರೆ ಶಿಕ್ಷೆ: ‘ಚಲಾಯಿಸಿದ ಮತವು ವಿವಿಪ್ಯಾಟ್‌ನಲ್ಲಿ ತಪ್ಪಾಗಿ ತೋರಿಸಿದರೆ ಅಥವಾ ಮತ ಇನ್ನೊಬ್ಬ ಅಭ್ಯರ್ಥಿಗೆ ಚಲಾವಣೆ

ಗೊಂಡಿದ್ದರೆ ಅಂತಹ ಮತದಾರ ತಕ್ಷಣವೇ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದು. ಈ ಬಗ್ಗೆ ಮತದಾರರ ಲಿಖಿತವಾಗಿ ತಿಳಿಸಬೇ

ಕಾಗುತ್ತದೆ. ತಕ್ಷಣವೇ ಚುನಾವಣಾಧಿಕಾರಿ ಸಮ್ಮುಖದಲ್ಲಿ ಮತ್ತೊಮ್ಮ ಪರೀಕ್ಷೆ (ಟೆಸ್ಟ್ ವೋಟ್) ಹಾಕಲಾಗುವುದು. ಒಂದು ವೇಳೆ ವಿವಿಪ್ಯಾಟ್ ಸರಿಯಾಗಿದ್ದು, ಮತದಾರ ತಪ್ಪು ಮಾಹಿತಿ ನೀಡಿದ್ದು ಕಂಡುಬಂದಲ್ಲಿ, ದೂರಿದವರನ್ನು ಶಿಕ್ಷಗೆ ಒಳಪಡಿಸಲಾಗುತ್ತದೆ. ಚಲಾಯಿಸಿದ್ದು ಮಾತ್ರವೇ ನೋಂದಣಿಯಾಗುತ್ತದೆ ಹಾಗೂ ಅದೇ ಪ್ರದರ್ಶನಗೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಮತದಾರರ ಮತ ಖಾತ್ರಿಪಡಿಸುವ ಉದ್ದೇಶದಿಂದ ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಮತದಾರರು ಯಾವುದೇ ರೀತಿಯ ಸಂದೇಹ ಇಟ್ಟುಕೊಳ್ಳದೇ ಮುಕ್ತವಾಗಿ ಮತ ಚಲಾಯಿಸಬೇಕು’ ಎಂದು ಕೋರಿದರು.ರಾಜಕೀಯ ಪಕ್ಷದ ಪ್ರತಿನಿಧಿಗಳು ಡಮ್ಮಿ ಮತ ಚಲಾಯಿಸುವ ಮೂಲಕ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಕಾರ್ಯ ನಿರ್ವಹಣೆಯನ್ನು ತಿಳಿದುಕೊಂಡರು. ಬಿಇಎಲ್ ಎಂಜಿನಿಯರ್‌ಗಳು ವಿವಿಪ್ಯಾಟ್ ಕಾರ್ಯಕ್ಷಮತೆ ಹಾಗೂ ಕಾರ್ಯವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ,ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ವಾರ್ತಾಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಭಾಗವಹಿಸಿದ್ದರು.

ನೋಂದಣಿಗೆ ವಿಶೇಷ ಶಿಬಿರ 8ರಂದು

ಬೆಳಗಾವಿ: ಮತದಾರರ ನೋಂದಣಿಗೆ ಏ. 8ರಂದು ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಸೂಚಿಸಿದ್ದಾರೆ.ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಸ್ಥಳ ನಿಗದಿಪಡಿಸಿ, ಮೂಲ ಸೌಕರ್ಯ ಕಲ್ಪಿಸಿ, ತಾಲ್ಲೂಕುಮಟ್ಟದ ವಿಶೇಷ ಅಧಿಕಾರಿ ನೇಮಿಸಬೇಕು. ಗೊತ್ತುಪಡಿಸಿದ ಅಧಿಕಾರಿಯು ಪ್ರತ್ಯೇಕ ಮತದಾರರಿಗೆ ನಮೂನೆ 6, 7,8 ಹಾಗೂ 8ಎ ನಮೂನೆಗಳನ್ನು ಒದಗಿಸಿ, ದಾಖಲೆಗಳೊಂದಿಗೆ ಅವುಗಳನ್ನು ಅಂದೇ ಅರ್ಜಿದಾರನ ಸಹಿಯೊಂದಿಗೆ ಹಿಂಪಡೆಯಬೇಕು. ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು ಹಾಗೂ ತಿದ್ದುಪಡಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.‘ಯಾವುದೇ ಕಾರಣಕ್ಕೂ ಬಲ್ಕ್ ಸ್ವರೂಪದಲ್ಲಿ ಅರ್ಜಿಗಳನ್ನು ಪಡೆಯಲು ಅವಕಾಶ ಕೊಡಬಾರದು. ಶಿಬಿರ ಮುಗಿದ ನಂತರ ವರದಿ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.

**

ಮತ ಎಣಿಕೆ ಸಂದರ್ಭದಲ್ಲೂ ಪ್ರತಿ ವಿಧಾನಸಭಾ ಕ್ಷೇತ್ರದ ಒಂದೊಂದು ಮತಗಟ್ಟೆಯ ವಿವಿಪ್ಯಾಟ್ ಯಂತ್ರದಲ್ಲಿರುವ ಮತಗಳನ್ನು ಕೂಡ ಎಣಿಕೆ ಮಾಡಲು ಅವಕಾಶವಿದೆ – ಎಸ್. ಜಿಯಾವುಲ್ಲಾ, ಜಿಲ್ಲಾಧಿಕಾರಿ.

**

ಪ್ರತಿಕ್ರಿಯಿಸಿ (+)