ನಿರ್ಧಾರ ಒಪ್ಪದ ರೈತರು: ಪ್ರತಿಭಟನೆಗೆ ನಿರ್ಧಾರ

7
5 ದಿನ ಕಾಲುವೆಗೆ ನೀರು: ಜಿಲ್ಲಾಧಿಕಾರಿ ಭರವಸೆ

ನಿರ್ಧಾರ ಒಪ್ಪದ ರೈತರು: ಪ್ರತಿಭಟನೆಗೆ ನಿರ್ಧಾರ

Published:
Updated:

ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ.10ರವರೆಗೆ ನೀರು ಹರಿಸಲು ಸಾಧ್ಯವಿಲ್ಲ. ಆದರೆ ದಿನವೂ 200 ಕ್ಯುಸೆಕ್‌ನಂತೆ ಐದು ದಿನ ಹರಿಸಲಾಗುವುದು’ ಎಂಬ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಅವರ ಭರವಸೆಯನ್ನು ಒಪ್ಪದ ರೈತರು ಮತ್ತೆ ಬೃಹತ್‌ ಪ್ರತಿಭಟನೆ ನಡೆಸಲು ಸೋಮವಾರ ಸಂಜೆ ನಿರ್ಧರಿಸಿದರು.‘ಮಾ.31ರಿಂದ ಕಾಲುವೆಯಲ್ಲಿ ನೀರು ಬಂದ್‌ ಆಗಿದೆ. ಬೆಳೆಗಳು ಒಣಗುತ್ತಿವೆ. ಕೂಡಲೇ ನೀರು ಹರಿಸಬೇಕು. ಏ.10ರವರೆಗೂ ನಿಲ್ಲಿಸಬಾರದು’ ಎಂದು ಆಗ್ರಹಿಸಿ ರೈತರು ರೈತ ಸಂಘ–ಹಸಿರು ಸೇನೆ ನೇತೃತ್ವದಲ್ಲಿ ಬೆಳಿಗ್ಗೆ ನಗರೂರು ನಾರಾಯಣರಾವ್‌ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ಮಧ್ಯಾಹ್ನ ಅವರ ಅಹವಾಲು ಆಲಿಸಿದ್ದ ಜಿಲ್ಲಾಧಿಕಾರಿ, ’ರೈತರ ಬೇಡಿಕೆಗೆ ತಕ್ಕಂತೆ ನೀರು ಹರಿಸಲು ಸಾಧ್ಯವಿಲ್ಲ. ಐದು ದಿನ ಮಾತ್ರ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.ಆದರೆ ಅವರ ಮಾತನ್ನು ಒಪ್ಪದ ರೈತರು, ಬೇಡಿಕೆ ಈಡೇರುವವರೆಗೂ ಧರಣಿಯನ್ನು ಮುಂದುವರಿಸುವುದಾಗಿ ಹೇಳಿದರು. ಜಿಲ್ಲಾಧಿಕಾರಿಯೂ ತಮ್ಮ ಕಚೇರಿಗೆ ತೆರಳಿದರು.ಧರಣಿಯ ಸ್ಥಳದಲ್ಲೇ ಮಧ್ಯಾಹ್ನದ ಊಟವನ್ನು ಮಾಡಿದ್ದ ರೈತರು, ಸಂಜೆವರೆಗೂ ಧರಣಿ ಮುಂದುವರಿಸಿದರು. ಮತ್ತೆ ರೈತರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ, ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

‘ಜನರಿಗೆ ಕುಡಿಯಲು ಬೇಕಾಗುವಷ್ಟು ನೀರು ಉಳಿಸಿಕೊಂಡು ರೈತರಿಗೆ ನೀರನ್ನು ಹರಿಸಿ ಎಂದು ತುಂಗಭದ್ರಾ ಮಂಡಳಿಗೆ ಮನವಿ ಮಾಡಲಾಗಿದೆ. ಈಗ ಮತ್ತೊಮ್ಮೆ ಮನವಿ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.‘ನೀರು ಹರಿಸದಿದ್ದರೆ ಮತ್ತೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ತಿಳಿಸಿದ ರೈತರು ಅಲ್ಲಿಂದ ನಿರ್ಗಮಿಸಿದರು.

ಪಿ.ನಾರಾಯಣ ರೆಡ್ಡಿ, ಟಿ.ವೆಂಕಟೇಶ್, ಬಿ.ವಿ.ಗೌಡ, ಚಲ್ಲಾವೆಂಕಟನಾಯ್ಕ, ರೇವಣ ಸಿದ್ದೇಶ್, ಡಿ.ಮುರಾರಿ, ಎಲ್.ಎಸ್.ರುದ್ರಪ್ಪ, ಚಾಗನೂರು ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry