ಈಶ್ವರ ಖಂಡ್ರೆಯಿಂದ ಬಡವರಿಗೆ ಮೋಸ

7
ಕಾನೂನು ಬಾಹಿರವಾಗಿ ಮನೆ ಮಂಜೂರಾತಿ: ಸಂಸದ ಭಗವಂತ ಖೂಬಾ ಆರೋಪ

ಈಶ್ವರ ಖಂಡ್ರೆಯಿಂದ ಬಡವರಿಗೆ ಮೋಸ

Published:
Updated:

ಬೀದರ್: ‘ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಬಾಹಿರವಾಗಿ ಮನೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶಪತ್ರ ಕೊಟ್ಟು ಬಡವರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಸಂಸದ ಭಗವಂತ ಖೂಬಾ ಆರೋಪ ಮಾಡಿದರು.‘ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ 2017–2018ನೇ ಸಾಲಿನಲ್ಲಿ ಜಿಲ್ಲೆಗೆ 16,562 ಮನೆಗಳು ಮಂಜೂರಾಗಿವೆ. ಆದರೆ, ಈಶ್ವರ ಖಂಡ್ರೆ ಭಾಲ್ಕಿ ತಾಲ್ಲೂಕಿನಲ್ಲಿ 50 ಸಾವಿರ ಜನರಿಗೆ ಕಾನೂನು ಬಾಹಿರವಾಗಿ ಮನೆ ಮಂಜೂರಾತಿ ಪತ್ರವನ್ನು ಕೊಟ್ಟಿರುವ ದೂರುಗಳು ಬಂದಿವೆ’ ಎಂದು ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಗ್ರಾಮಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಿದ ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಸತಿ ಯೋಜನೆಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಕೊಡುವುದು ನಿಯಮ. ಆದರೆ, ಖಂಡ್ರೆ ಅವರು ಲೆಟರ್‌ಪ್ಯಾಡ್‌ ಮೇಲೆ ಸಹಿ ಮಾಡಿ ಜನರಿಗೆ ಮನೆ ಮಂಜೂರಾತಿ ಆದೇಶಪತ್ರ ಕೊಡುವ ಮೂಲಕ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಡಾ.ಬಿ.ಆರ್.ಅಂಬೇಡ್ಕರ್‌ ನಿವಾಸ ಯೋಜನೆ ಅಡಿಯಲ್ಲಿ ಭಾಲ್ಕಿ ತಾಲ್ಲೂಕಿನ ನಿಟ್ಟೂರ(ಬಿ) ಗ್ರಾಮದ ತೇಜಮ್ಮ ಅಮೃತ ಅವರಿಗೆ ಸಹಿ ಮಾಡಿ ಕೊಟ್ಟಿರುವ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಸಂಸದ, ‘ಮುಗ್ಧ ಜನರಿಗೆ ಕೊಡಲಾದ ಇನ್ನಷ್ಟು ಆದೇಶ ಪತ್ರಗಳನ್ನು ಸಂಗ್ರಹಿಸಲಾಗುತ್ತಿದ್ದು, ಸಚಿವರ ವಿರುದ್ಧ ಐಪಿಸಿ ಸೆಕ್ಷನ್‌ 420ರ ಅಡಿ ವಂಚನೆ ಪ್ರಕರಣ ದಾಖಲು ಮಾಡಲಾಗುವುದು. ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು’ ಎಂದು ತಿಳಿಸಿದರು.‘ಗ್ರಾಮಸಭೆ ನಡೆಸದೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮನೆಗಳ ಹಂಚಿಕೆ ಮಾಡಲಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ವ್ಯಕ್ತಿಗಳಿಗೂ ಮನೆಗಳನ್ನು ಮಂಜೂರು ಮಾಡಲಾಗಿದೆ’ ಎಂದು ದೂರಿದರು.

ಆಪ್ತರಿಗೆ ಟೆಂಡರ್‌ ಆರೋಪ:‘ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಶಾರದಾ ಕನ್‌ಸ್ಟ್ರಕ್ಷನ್ ಹಾಗೂ ಅಲ್ಮಾಜೆ ಕನ್‌ಸ್ಟ್ರಕ್ಷನ್ ಕಂಪನಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಕೊಡಿಸಿದ್ದಾರೆ. ಆಪ್ತರಲ್ಲದ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಅರ್ಜಿ ಹಿಂದಕ್ಕೆ ಪಡೆಯುವಂತೆ ಮಾಡಿದ್ದಾರೆ’ ಎಂದು ಆರೋಪ ಮಾಡಿದರು.‘ಭಾಲ್ಕಿಯ ಉಪನ್ಯಾಸಕರ ಕಾಲೊನಿಯಲ್ಲಿ ಟೆಂಡರ್‌ ಕರೆಯದೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ನಾವು ನ್ಯಾಯಾಲಯದ ಮೊರೆ ಹೋದ ಮೇಲೆ ₹ 2 ಕೋಟಿ ಮೊತ್ತದ ಟೆಂಡರ್‌ನ್ನು ₹ 1 ಕೋಟಿಗೆ ಇಳಿಸಿ ಮತ್ತೆ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದರು.‘ಭಾಲ್ಕಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ದರೋಡೆಗಳು ನಡೆದರೂ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಸಚಿವರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್‌ ಠಾಕೂರ್, ಶಿವರಾಜ ಗಂದಗೆ, ಜಯಕುಮಾರ ಕಾಂಗೆ, ಬಾಬುರಾವ್‌ ಮದಕಟ್ಟಿ, ಬಸವರಾಜ ಜೋಜನಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry