ಬುಧವಾರ, ಆಗಸ್ಟ್ 5, 2020
21 °C
ದಿಶಾ ಪಟಾನಿ ಗೊಂಬೆ ಪ್ರೇಮ

‘ಗೋಕು, ನನ್ನ ಸ್ಲೀಪಿಂಗ್‌ ಪಾರ್ಟನರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗೋಕು, ನನ್ನ ಸ್ಲೀಪಿಂಗ್‌ ಪಾರ್ಟನರ್’

‘ಗೋಕು ಇಲ್ಲದಿದ್ದರೆ ನಂಗೆ ನಿದ್ದೆನೇ ಬರೋದಿಲ್ಲ. ಅವನಿಗೊಂದು ಮುತ್ತು ಕೊಟ್ಟು ಮಲ್ಕೊಂಡ್ರೆ ಥಟ್ಟನೆ ನಿದ್ದೆ ಬರುತ್ತೆ’.

– ಬಾಲಿವುಡ್‌ನ ಬಳುಕು ಸುಂದರಿ ದಿಶಾ ಪಟಾನಿ ಹೀಗೆ ಹೇಳುತ್ತಿದ್ದರೆ ಅವರ ಮುಂದೆ ನಿಂತ ಮೈಕುಗಳೂ ನಾಚಿಕೊಂಡವು. ‘ಅರೆ ಅದರಲ್ಲೇನಿದೆ, ‘ಗೋಕು’ ನನ್ನ ಸ್ಲೀಪಿಂಗ್‌ ಪಾರ್ಟನರ್. ಅದಕ್ಕೇ ಎಲ್ಲಿಯೇ ಶೂಟಿಂಗ್‌ ಇದ್ದರೂ ಅವನು ಜೊತೆಗಿರಲೇಬೇಕು’ ಎಂದು ಇನ್ನಷ್ಟು ವಿವರಿಸಿದರು ದಿಶಾ. ‌

ಇನ್‌ಸ್ಟಾಗ್ರಾಂನಲ್ಲಿ ಬಿಂದಾಸ್‌ ಭಂಗಿಗಳನ್ನು ಪೋಸ್ಟ್‌ ಮಾಡುತ್ತಾ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಲೇ ಇರುವ ದಿಶಾಳ ಸ್ಲೀಪಿಂಗ್‌ ಪಾರ್ಟನರ್‌ ಯಾರಪ್ಪಾ ಎಂಬ ಪ್ರಶ್ನೆ ಕಾಡದೇ ಇರುತ್ತದಾ? ಇನ್‌ಸ್ಟಾಗ್ರಾಂನಲ್ಲಿ ದಿಶಾ ಅಭಿಮಾನಿಗಳ ಸಂಖ್ಯೆ ಬರೋಬ್ಬರಿ ಒಂದು ಕೋಟಿ! ಇಷ್ಟೂ ಜನರು ಹುಬ್ಬೇರಿಸಿದಾಗ ಸುಮ್ಮನಿರಲು ದಿಶಾಗೆ ಆಗಲಿಲ್ಲ. ಕೊನೆಗೂ ಅವರು ‘ಗೋಕು’ ಯಾರು ಎಂದು ಬಾಯಿ ಬಿಡಲೇಬೇಕಾಯ್ತು.

‘ಗೋಕು’. ದಿಶಾ ಪಟಾನಿಯ ನೆಚ್ಚಿನ ಗೊಂಬೆ! ಮಕ್ಕಳಷ್ಟೇ ಅಲ್ಲದೆ ದೊಡ್ಡವರನ್ನೂ ಹಿಡಿದಿಟ್ಟ ಕಿರುತೆರೆ ಸರಣಿ ‘ಡ್ರ್ಯಾಗನ್‌ ಬಾಲ್‌ ಜೆಡ್‌’ನ ಪ್ರಮುಖ ಪಾತ್ರ. ನಟ ಟೈಗರ್‌ ಶ್ರಾಫ್‌ ಜತೆಗೆ ಸಲ್ಲಾಪ ನಡೆಸುತ್ತಿರುವ ದಿಶಾ, ತನ್ನ ಮೊದಲ ‘ಕ್ರಶ್‌’ ಗೋಕು ಜೊತೆಗೇ ಆಗಿತ್ತು ಎಂದೂ ಹೇಳಿಕೊಂಡಿದ್ದರು. ಸಣ್ಣಗಿನ ನಡು, ಬಳುಕುವ ದೇಹ, ಮನೋಜ್ಞ ನಟನೆ ಮತ್ತು ಮುಗ್ಧ ನೋಟದಿಂದ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿರುವ ಸುಂದರಿಯೊಬ್ಬಳು ತನ್ನ ‘ಸ್ಲೀಪಿಂಗ್‌ ಪಾರ್ಟನರ್‌’ ಬಗ್ಗೆ ಪ್ರಸ್ತಾಪ ಮಾಡಿದಾಗ  ಅವರಿಗೆ ಹೇಗಾಗಬೇಡ!

ದಿಶಾ ನಟನೆಯ ‘ಭಾಗಿ 2’ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. 2015ರಲ್ಲಿ ತೆಲುಗಿನ ‘ಲೋಫರ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ, ಹಿಂದಿಯಲ್ಲಿ ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಟ್‌ ಸ್ಟೋರಿ’ಯಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ಮಿಂಚಿದರು.  ಅದಾದ ಬಳಿಕ ’ಬಿಫಿಕ್ರಾ’ ಮ್ಯೂಸಿಕ್‌ ವಿಡಿಯೊ ಹಾಗೂ ಕ್ಯಾಡ್‌ಬರಿ ಚಾಕೊಲೇಟ್‌ನ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡರು. ‘ಧೋನಿ’ ಚಿತ್ರದಲ್ಲಿನ ನಟನೆಗಾಗಿ ಮೂರು ಪ್ರಶಸ್ತಿಗಳನ್ನೂ ಬಾಚಿಕೊಂಡ ಪ್ರತಿಭಾವಂತೆ.

ಪಾತ್ರ ಯಾವುದಾದರೂ ಸರಿ ಒಟ್ಟಿನಲ್ಲಿ ಚಾಲ್ತಿಯಲ್ಲಿರಬೇಕು ಎಂಬ ಸೂತ್ರಕ್ಕೆ ದಿಶಾ ವಿರುದ್ಧ. ಯಾಕೆಂದರೆ ಅವರಿಗೆ, ಸಮಾಜ ನೆನಪಿಟ್ಟುಕೊಳ್ಳುವಂತಹ ಹಾಗೂ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗುವಂತಹ ಪಾತ್ರಗಳನ್ನು ಮಾಡಿ ಸುದ್ದಿಯಲ್ಲಿರುವುದು ಮುಖ್ಯವಂತೆ. ‘ನನಗೆ ಕತೆ ಇಷ್ಟವಾಗದಿದ್ದರೆ ಮನಃಪೂರ್ವಕವಾಗಿ ಪಾತ್ರದಲ್ಲಿ ತೊಡಗಿಸಿಕೊಳ್ಳಲಾಗದು. ಕತೆ ಇಷ್ಟವಾದರೆ ಸಾವಿರ ಶೇಕಡಾ ಪರಿಶ್ರಮ ಹಾಕಿ ನಟಿಸಬಲ್ಲೆ. ಬಹುಶಃ ನನ್ನ ಈ ಲೆಕ್ಕಾಚಾರದಿಂದಾಗಿಯೇ ನನಗೆ ಅವಕಾಶಗಳು ಕಡಿಮೆ ಸಿಗುತ್ತಿವೆಯೇನೋ. ಹಾಗಂತ ನನ್ನ ನಿರ್ಧಾರದಲ್ಲಿ ರಾಜಿ ಮಾಡಿಕೊಳ್ಳಲಾರೆ’ ಎಂದೂ ಬಿಂದಾಸ್‌ ಆಗಿ ಹೇಳುತ್ತಾರೆ ದಿಶಾ.

ಕಳೆದ ವರ್ಷ ‘ಕುಂಗ್‌ ಫೂ ಯೋಗ’ ಚಿತ್ರದಲ್ಲಿ ಸೋನು ಸೂದ್‌ಗೆ ಜೋಡಿಯಾಗಿದ್ದುದಕ್ಕಿಂತಲೂ ಜಾಕಿ ಚಾನ್‌ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿಕೊಂಡಿದ್ದರು. ಆದರೆ ‘ಭಾಗಿ–2’ರಲ್ಲಿನ ನೇಹಾ ಪಾತ್ರಕ್ಕೆ ಒಗ್ಗಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ತೆಗೆದುಕೊಂಡಿತಂತೆ. ಯಾವುದೇ ಬಗೆಯ ಉಡುಗೆ ತೊಡುಗೆ ಧರಿಸಿದರೂ ಸೆಲ್ಫಿ ತೆಗೆದು ಇನ್‌ಸ್ಟಾಗ್ರಾಂಗೆ ಪೋಸ್ಟ್‌ ಮಾಡಿ ಎಷ್ಟು ಜನ ನೋಡಿದ್ದಾರೆ ಎಂದು ಕಾದು ಕೂರುತ್ತಾರಂತೆ ಈ ಬೆಡಗಿ.

ಇನ್ನೂ 25ರ ಹರೆಯದ ದಿಶಾ, ನಟನೆಯ ವಿಚಾರದಲ್ಲಿ ಲೆಕ್ಕಾಚಾರದ ಹೆಜ್ಜೆ ಇಡುತ್ತಿರುವುದು ಚಿತ್ರರಂಗದಲ್ಲಿನ ದೀರ್ಘಪಯಣದ ಗುರಿಯ ದ್ಯೋತಕ. ಒಟ್ಟಿನಲ್ಲಿ, ಎತ್ತರದ ಹುಡುಗಿ (5 ಅಡಿ 7 ಇಂಚು) ಚಿತ್ರರಂಗದಲ್ಲಿ ಎತ್ತರಕ್ಕೇರಲು ಸಾಕಷ್ಟು ಹೋಮ್‌ ವರ್ಕ್‌ ಮಾಡುತ್ತಿರುವುದಂತೂ ಖಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.