ಭಾನುವಾರ, ಡಿಸೆಂಬರ್ 15, 2019
20 °C
ಪೊಲೀಸ್‌ ಧ್ವಜ ದಿನಾಚರಣೆ: ಆಕರ್ಷಕ ಪಥ ಸಂಚಲನ: ಮಠಪತಿ ಸಲಹೆ

ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿ

ಬೀದರ್‌: ‘ಪೊಲೀಸರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು’ ಎಂದು ನಿವೃತ್ತ ಸಿಪಿಐ ಎನ್.ಬಿ.ಮಠಪತಿ ಹೇಳಿದರು.ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.‘ಪ್ರಾಮಾಣಿಕತೆ, ದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ತೋರುವ ಮೂಲಕ ಪೊಲೀಸರು ಸಾರ್ವಜನಿಕರಿಗೆ ಇನ್ನೂ ಉತ್ತಮ ಸೇವೆ ಕೊಡಲು ಮುಂದಾಗಬೇಕು. ಈ ಮೂಲಕ ಜನ ಮನ್ನಣೆ ಪಡೆಯಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.‘ಸಮಾಜದಲ್ಲಿ ಆಗಿರುವ ಬದ ಲಾವಣೆಯಿಂದಾಗಿ ಪೊಲೀಸ್‌ ಕಾರ್ಯ ವೈಖರಿಯಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಪೊಲೀಸರು ಬದಲಾವಣೆಗೆ ಹೊಂದಿಕೊಂಡು ಜನರಿಗೆ ಉತ್ತಮ ಸೇವೆ ಒದಗಿಸುತ್ತ ಬಂದಿದ್ದಾರೆ’ ಎಂದರು.

‘ಸರ್ಕಾರದ ಪ್ರತಿಯೊಂದು ಇಲಾ ಖೆಯ ಕೆಲಸದ ಸ್ವರೂಪ ಭಿನ್ನವಾಗಿದೆ. ಇತರೆ ಇಲಾಖೆಗಳೊಂದಿಗೆ ಪೊಲೀಸ್‌ ಇಲಾಖೆಯ ಕಾರ್ಯ ವೈಖರಿಯ ಹೋಲಿಕೆ ಮಾಡಿಕೊಂಡು ಯಾರೂ ಬೇಸರ ಪಟ್ಟುಕೊಳ್ಳಬಾರದು. ಪೊಲೀ ಸರಿಗೂ ಒಂದು ಘನತೆ ಇದೆ. ಉತ್ತಮ ಕೆಲಸಗಳ ಮೂಲಕ ಘನತೆಗೆ ಹೆಮ್ಮೆಯ ಗರಿ ಮೂಡುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.‘ಚುನಾವಣೆ ಸಮೀಪಿಸುತ್ತಿರುವ ಕಾರಣ ಎಲ್ಲರ ಮೇಲೂ ಒತ್ತಡ ಇದೆ. ಚುನಾವಣೆ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆಧುನಿಕ ವಿಧಾನದ ಮೂಲಕ ಚುನಾವಣೆ ನಡೆಸುತ್ತಿರುವ ಕಾರಣ ಪಾರದರ್ಶಕತೆಗೆ ಮಹತ್ವ ಬಂದಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಮಾತನಾಡಿ, ‘1965 ಏಪ್ರಿಲ್ 2 ರಂದು ಮೊದಲ ಬಾರಿಗೆ ಪೊಲೀಸ್ ಧ್ವಜ ದಿನ ಆಚರಿಸಲಾಯಿತು. ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದು ಇದರ ಉದ್ದೇಶವಾಗಿದೆ’ ಎಂದು ತಿಳಿಸಿದರು.‘ಪೊಲೀಸ್‌ ಧ್ವಜ ದಿನವನ್ನು ಪೊಲೀಸ್ ಕಲ್ಯಾಣ ದಿನವಾಗಿಯೂ ಆಚರಣೆ ಮಾಡಲಾಗುತ್ತಿದೆ. ನಿವೃತ್ತ ಪೊಲೀಸರ ಕಲ್ಯಾಣ ಬಯಸುವುದು ಇದರ ಧ್ಯೇಯ ಆಗಿದೆ’ಎಂದು ಹೇಳಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್‌ಪಿ ಹುಣಸಿಕಟ್ಟಿ, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು, ಜಿಲ್ಲಾ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ನಾಗೇಂದ್ರ ಬಲ್ಲೂರೆ, ನಿವೃತ್ತ ಅಧಿಕಾರಿಗಳು ಇದ್ದರು.ನಂತರ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು.

**

ಸಮರ್ಪಣಾ ಭಾವದಿಂದ ಮಾಡುವ ಕೆಲಸವು ಮನಸ್ಸಿಗೆ ತೃಪ್ತಿ ಉಂಟು ಮಾಡುತ್ತದೆ. ಸಮಾಜದಿಂದ ಗೌರವವೂ ದೊರೆಯುತ್ತದೆ – ಎನ್‌. ಬಿ.ಮಠಪತಿ, ನಿವೃತ್ತ ಸಿಪಿಐ.

**

ಪ್ರತಿಕ್ರಿಯಿಸಿ (+)