ಮಂಗಳವಾರ, ಡಿಸೆಂಬರ್ 10, 2019
24 °C

ಕೊಳದಲ್ಲಿ ತೇಲುವ ಪ್ರಯೋಗಾಲಯ

Published:
Updated:
ಕೊಳದಲ್ಲಿ  ತೇಲುವ ಪ್ರಯೋಗಾಲಯ

ಭಾರತದ ಈಶಾನ್ಯ ರಾಜ್ಯಗಳೆಂದರೆ ಅಲ್ಲಿನ ಪ್ರಕೃತಿ ಸೌಂದರ್ಯವೇ ತಟ್ಟನೆ ನೆನಪಿಗೆ ಬರುತ್ತದೆ. ಬೆಟ್ಟ, ಗುಡ್ಡ, ವಿಶಿಷ್ಟ ಸಂಪ್ರದಾಯ, ಆಹಾರ, ವೇಷಭೂಷಣ ಇವುಗಳಿಂದ ಈ ರಾಜ್ಯಗಳು ಇಡೀ ದೇಶದಲ್ಲೇ ಪ್ರಸಿದ್ಧಿ. ಇಲ್ಲಿನ ಭೌಗೋಳಿಕ ಪರಿಸರ ಇತರ ರಾಜ್ಯಗಳಿಗಿಂತ ವಿಭಿನ್ನವಾದುದು. ಇಲ್ಲಿರುವ ಬೃಹತ್‌ ಕೊಳಗಳು ಪ್ರವಾಸಿ ತಾಣಗಳಾಗಿವೆ. ಲಕ್ಷಾಂತರ ಪ್ರವಾಸಿಗರು ಇವುಗಳನ್ನು ನೋಡಲೆಂದೇ ಬರುತ್ತಾರೆ.

ಹೀಗಿರುವ ರಾಜ್ಯಗಳಲ್ಲಿ ಮಣಿಪುರವೂ ಒಂದು. ಇದರ ರಾಜಧಾನಿ ಇಂಫಾಲದಿಂದ 54 ಕಿ.ಮೀ ದೂರದಲ್ಲಿ ಲೋಕ್‌ಟಕ್‌ ಎಂಬಲ್ಲಿ ದೊಡ್ಡ ಕೊಳವೊಂದಿದೆ. ಇಲ್ಲಿಗೆ ವಾರದಲ್ಲಿ ಮೂರುದಿನ ಐವರು ಯುವತಿಯರು ಭೇಟಿ ನೀಡುತ್ತಾರೆ. ಅವರೆಲ್ಲ ಕೆರೆಯ ಸೌಂದರ್ಯ ಸವಿಯಲು ಬರುತ್ತಾರೆ ಎಂದು ನೀವಂದುಕೊಂಡರೆ ಸುಳ್ಳು. ಅವರು ಬರುವುದು ಈ ಕೊಳದಲ್ಲಿರುವ ತೇಲುವ ಪ್ರಯೋಗಾಲಯದಲ್ಲಿ ಕೆಲಸ ಮಾಡಲು. 300 ಚದರ ಕಿ.ಮೀ. ವ್ಯಾಪ್ತಿ ಹೊಂದಿರುವ ಈ ಕೊಳದಲ್ಲಿ ಇವರೆಲ್ಲ ತೇಲುವ ಪ್ರಯೋಗಾಲಯವನ್ನು ನಡೆಸುತ್ತಾರೆ.

ಸಾಮಾನ್ಯವಾಗಿ ಪ್ರಯೋಗಾಲಯಗಳು ಕಾಲೇಜು ಕಟ್ಟಡಗಳಲ್ಲಿ, ವಿಜ್ಞಾನ ಕೇಂದ್ರಗಳಲ್ಲಿ ಇರುವುದು ಸಹಜ. ಆದರೆ, ಇಲ್ಲಿ ಕೊಳದಲ್ಲಿದೆ. ಅದೇ ಇಲ್ಲಿನ ವಿಶೇಷ. ಇದರ ಕೆಲವು ಭಾಗದಲ್ಲಿ ನೀರು ಆ್ಯಸಿಡ್‌ ಆಗಿ ಪರಿವರ್ತನೆಯಾಗಿತ್ತು. ದೊಡ್ಡ ದೊಡ್ಡ ಕಳೆಗಳು ಬೆಳೆದುಕೊಂಡಿದ್ದವು. ಒಟ್ಟಾರೆ ನೀರು ಯಾವುದೇ ರೀತಿಯಲ್ಲಿ ಸುರಕ್ಷಿತವಲ್ಲದ ಹಾಗೆ ಪರಿವರ್ತನೆಯಾಗಿತ್ತು. ಇಂತಹುದನ್ನು ಅಧ್ಯಯನ ಮಾಡಲೆಂದೇ ಈ ಪ್ರಯೋಗಾಲಯ ಆರಂಭವಾಗಿದೆ.

‘ಈ ಕೊಳ ಸದ್ಯಕ್ಕೆ ತುರ್ತು ಚಿಕಿತ್ಸಾ ಘಟಕಕ್ಕೆ ಇನ್ನೂ ಸೇರಿಲ್ಲ. ಆದರೆ, ಇದರ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಮಾಡಲೆಂದು ಪ್ರಯೋಗಾಲಯ ಆರಂಭಿಸಲಾಗಿದೆ’ ಎನ್ನತ್ತಾರೆ ಇಂಫಾಲದ ಜೈವಿಕ ಸಂಪನ್ಮೂಲ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯ (ಐಎಸ್‌ಬಿಡಿ) ನಿರ್ದೇಶಕ ದೀನಬಂದು ಸಾಹೊ. ಇವರೇ ಲೊಕ್‌ಟಕ್ ಕೊಳದ ಪ್ರಯೋಗಾಲಯವನ್ನು ನೋಡಿಕೊಳ್ಳುತ್ತಾರೆ. ಕಳೆದ ತಿಂಗಳಷ್ಟೇ ಈ ಸಂಸ್ಥೆ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಒಂದು ಮೋಟರ್‌ ಬೋಟ್‌ ಅನ್ನು ದತ್ತಾಂಶ ಸಂಗ್ರಹ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಅದು ಕೊಳದ ಆರೋಗ್ಯದ ಬಗ್ಗೆ ನಿಗಾವಹಿಸುತ್ತದೆ.

(ತೇಲುವ ಪ್ರಯೋಗಾಲಯದಲ್ಲಿ ಸಂಶೋಧಕರು)

‘ಐಎಸ್‌ಬಿಡಿ’ಯ ಸಂಶೋಧಕರಾದ ಸಬೀಲಾ ಬೀವಿ, ಕಿಕ್ಕು ಕುನೈ, ಯಾಮ್ರಾಮಿ ನೇತಾ, ರಿಜೀಬಾ ಹೊಬಾ ಮತ್ತು ರಾಜ್‌ಕುಮಾರ್ ಸುಪ್ರಿಯಾ ಅವರು ಕೊಳದಲ್ಲಿನ ನಿರ್ದಿಷ್ಟ ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಾರೆ.

ನೀರಿನಲ್ಲಿರಬಹುದಾದ ಉಷ್ಣಾಂಶ, ವಿದ್ಯುತ್‌ ವಾಹಕತೆ, ಕರಗಿದ ಆಮ್ಲಜನಕ ಮತ್ತಿತರ ಅಂಶಗಳನ್ನು ಸ್ಥಳದಲ್ಲೇ ವಿಶ್ಲೇಷಣೆಗೊಳಪಡಿಸಲಾಗುತ್ತದೆ. ಆಮ್ಲಜನಕ ಜೈವಿಕ ಗುಣ, ರಾಸಾಯನಿಕ ಆಮ್ಲಜನಕದ ಗುಣ, ಫ್ಲೊರೈಡ್‌, ಫಾಸ್ಫೇಟ್ ಮತ್ತು ನೈಟ್ರೋಜನ್ ಮುಂತಾದವುಗಳ ವಿಶ್ಲೇಷಣೆಯನ್ನು ಇಲ್ಲಿ ಅಧ್ಯಯನ ನಡೆಸಲಾಗುತ್ತದೆ. ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯ ಅತ್ಯಾಧುನಿಕ ಉಪಕರಣಗಳು ಇವೆ.

ಕೊಳದ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಅಲ್ಲಿಯವರೆಗೆ ಪ್ರಯೋಗಾಲಯ ಕೆಲಸ ಮಾಡುತ್ತದೆ. ಇಂಫಾಲ್‌ ಮತ್ತು ಸುತ್ತಲಿನ ಪ್ರದೇಶಗಳಿಂದ ಕೊಳಚೆ ನೀರು ಈ ಕೊಳವನ್ನು ಸೇರುತ್ತಿದೆ. ನೀರಿನಲ್ಲಿರುವ ನೈಟ್ರೊಜನ್ ಮತ್ತು ಫಾಸ್ಫರಸ್ ಅಂಶ ಕಳೆ ಗಿಡಗಳು ಬೆಳೆಯಲು ಸಹಕಾರಿಯಾಗಿದೆ’ ಎನ್ನುತ್ತಾರೆ ಸಾಹೊ.

ನೀರಿನಲ್ಲಿರುವ ಅಧಿಕ ನೈಟ್ರೊಜನ್‌ ಕೊಳದಲ್ಲಿರುವ ಮೀನುಗಳಿಗೆ ಅಪಾಯಕಾರಿಯಾಗಿದೆ. ಇವುಗಳನ್ನೇ ನಂಬಿ ಸ್ಥಳೀಯರು ಜೀವನ ಮಾಡುತ್ತಾರೆ. ನೀರು ಆ್ಯಸಿಡ್‌ ಆಗಿ ಪರಿವರ್ತನೆಯಾಗಿರುವುದರಿಂದ ಶೆಲ್‌ಫಿಷ್‌ ಮತ್ತು ಸಿಗಡಿಗಳ ಜೀವಕ್ಕೆ ಅಪಾಯವಿದೆ. ಇದರ ಅರಿವಿರದೆ ಜನ ಕೊಳವನ್ನು ಕಲುಷಿತಗೊಳಿಸುತ್ತಲೇ ಇದ್ದಾರೆ.

15 ಮೀಟರ್‌ ಉದ್ದದ ದೋಣಿಯನ್ನೇ ಪ್ರಯೋಗಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಇದರಲ್ಲಿ 10 ಜನರಿಗೆ ಸ್ಥಳಾವಕಾಶ ಇದೆ. ಇದಕ್ಕಾಗಿ ₹5 ಲಕ್ಷ ವೆಚ್ಚ ಮಾಡಲಾಗಿದೆ. ಒಂದು ಕಾಲದಲ್ಲಿ ಈ ಕೊಳ 40 ಚದರ ಕಿ.ಮೀಗೆ ಇಳಿದಿತ್ತು. ಇದರಲ್ಲಿ ನೂರಾರು ತೇಲುವ ನಡುಗಡ್ಡೆಗಳು ಇದ್ದವು. ಇವುಗಳನ್ನು ಸ್ಥಳೀಯ ಭಾಷೆಯಲ್ಲಿ ಫುಮ್ಡಿ ಎಂದು ಕರೆಯಲಾಗುತ್ತದೆ. ಸುತ್ತಲಿನ ಜನ ಕೊಳವನ್ನು ಮೀನು ಸಾಕುವ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಸರಿ ಸುಮಾರು ಒಂದು ಲಕ್ಷ ಜನ ಇದರ ಮೇಲೆ ಅವಲಂಬಿತರಾಗಿದ್ದರು. ಇದೆಲ್ಲದರಿಂದ ಕೊಳ ದಿನೇ ದಿನೇ ಕಲುಷಿತವಾಗುತ್ತಲೇ ಬಂದಿತ್ತು.

**

ಕೇಂದ್ರದಿಂದ ಮೂರು ಮಿಷನ್‌

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಈಶಾನ್ಯ ರಾಜ್ಯಗಳಲ್ಲಿ ಮೂರು ಜೈವಿಕ ತಂತ್ರಜ್ಞಾನ ಮಿಷನ್‌ ಅಂಗವಾಗಿ ತೇಲುವ ಪ್ರಯೋಗಾಲಯ ಆರಂಭಿಸಿದೆ. ಇನ್ನುಳಿದ ಎರಡು ಮಿಷನ್‌ಗಳೆಂದರೆ ಫೈಟೊ ಫಾರ್ಮ ಪ್ಲಾಂಟ್ಸ್‌ ಮಿಷನ್‌ ಮತ್ತು ಫ್ರಾಗುಲ್‌ ಮೈ ಮೈಕ್ರೊಸ್ಕೊಪಿ ಮಿಷನ್‌. ಫೈಟೊ ಫಾರ್ಮ ಮಿಷನ್‌ನಲ್ಲಿ ಈಶಾನ್ಯ ರಾಜ್ಯಗಳಲ್ಲಿ ಅಳಿವನಿನಂಚಿನಲ್ಲಿರುವ  ಔಷಧ ಸಸ್ಯಗಳ ರಕ್ಷಣೆ ಮತ್ತು ಬೆಳೆಸಲಾಗುತ್ತದೆ.

ಅದೇ ರೀತಿ ಫ್ರಾಗುಲ್‌ ಮಿಷನ್‌ನಲ್ಲಿ ಶಾಲಾ– ಕಾಲೇಜು ಮತ್ತು ವಿಜ್ಞಾನಿಗಳಿಗೆ ಶಿಕ್ಷಣ ಮತ್ತು ಸಂಶೋಧನೆಗೆ ಮೈಕ್ರೊಸ್ಕೊಪ್‌ಗಳನ್ನು ನೀಡಲಾಗುತ್ತದೆ. ಇವುಗಳ ಬೆಲೆ ಕೇವಲ ₹7 ಆಗಿದ್ದು, ವಿಶ್ವದಲ್ಲೇ ಅತಿ ಕಡಿಮೆಯದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುವುದರೊಂದಿಗೆ ‍ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ. ಇದೀಗ ಈ ತೇಲುವ ಪ್ರಯೋಗಾಲಯವೂ ಸಹ ಈ ನಿಟ್ಟಿನಲ್ಲಿ ಹೊಸ ಪ್ರಯೋಗವಾಗಿದೆ.

**

ಲೋಕ್‌ಟಕ್‌ ಅತ್ಯಮೂಲ್ಯವಾದ 300 ಚದರ ಕಿ.ಮೀ ವ್ಯಾಪ್ತಿಯ ಕೊಳ. ಇದನ್ನು ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ದೋಣಿಯಲ್ಲಿರುವ ವಿಜ್ಞಾನಿಗಳು ಅಲ್ಲಲ್ಲಿ ನೀರಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆ ಮಾಡುತ್ತಾರೆ. ಕೊಳದ ಸಂರಕ್ಷಣೆ ಮಾತ್ರವಲ್ಲದೆ ನೀರಿನ ವೈಜ್ಞಾನಿಕ ವಿಶ್ಲೇಷಣೆ ಮಾಡಲಾಗುವುದು.

–ಹರ್ಷವರ್ಧನ್‌, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

ಪ್ರತಿಕ್ರಿಯಿಸಿ (+)