ಬುಧವಾರ, ಆಗಸ್ಟ್ 5, 2020
21 °C

ಮೋದಿಗೆ ‘ಅರ್ಧ ಚೆಡ್ಡಿ ತೊಟ್ಟು, ಕಡ್ಡಿ ಹಿಡಿದು ಸುಳ್ಳು ಹೇಳೋದನ್ನ ಆರ್‌ಎಸ್‌ಎಸ್‌ ಹೇಳಿಕೊಟ್ಟಿದೆ’: ರಾಹುಲ್‌ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿಗೆ ‘ಅರ್ಧ ಚೆಡ್ಡಿ ತೊಟ್ಟು, ಕಡ್ಡಿ ಹಿಡಿದು ಸುಳ್ಳು ಹೇಳೋದನ್ನ ಆರ್‌ಎಸ್‌ಎಸ್‌ ಹೇಳಿಕೊಟ್ಟಿದೆ’: ರಾಹುಲ್‌ ವ್ಯಂಗ್ಯ

ಶಿವಮೊಗ್ಗ: ‘ದೇಶದಲ್ಲಿ ಒಂದು ಕಡೆ ಪ್ರಶ್ನೆಪತ್ರಿಕೆ ಸೋರಿಕೆ, ಮತ್ತೊಂದು ಕಡೆ ಚುನಾವಣಾ ಆಯೋಗದಿಂದ ಮಾಹಿತಿ ಸೋರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಮೋದಿ ಕಾಲ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಎಚ್ಎಎಲ್ ಜತೆ ಆಗಬೇಕಿತ್ತು. ಅದನ್ನು ಮೋದಿ ಅವರು ತಮ್ಮ ಮಿತ್ರರಿಗೆ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಖರೀದಿಗಾಗಿ ಕೊಟ್ಟಿದ್ದಾರೆ’ ಎಂದು ಹೇಳಿದರು.

ಮೋದಿ ಅವರಿಗೆ ‘ಅರ್ಧ ಚೆಡ್ಡಿ ತೊಟ್ಟು, ಕಡ್ಡಿ ಹಿಡಿದು ಸುಳ್ಳು ಹೇಳೋದನ್ನ ಆರ್‌ಎಸ್‌ಎಸ್‌ ಹೇಳಿಕೊಟ್ಟಿದೆ’ ಎಂದು ವ್ಯಂಗ್ಯವಾಡಿದರು.

‘ಕೇಂದ್ರ ಸರ್ಕಾರ ದೇಶದಲ್ಲಿ ದಲಿತರು, ಹಿಂದುಳಿದವರ ಕಲ್ಯಾಣಕ್ಕೆ ಎಷ್ಟು ಹಣ ಖರ್ಚು ಮಾಡಿದೆಯೋ ಅದರ ಅರ್ಧದಷ್ಟು ಹಣವನ್ನು ಕರ್ನಾಟಕವೊಂದರಲ್ಲೇ ಕಾಂಗ್ರೆಸ್ ಸರ್ಕಾರ ಖರ್ಚು ಮಾಡಿದೆ’ ಎಂದರು.

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಕಿಂಡರ್‌ಗಾರ್ಟನ್‌ನಿಂದ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಗುಜರಾತ್‌ನಲ್ಲಿ ಶೇಕಡ 90ರಷ್ಟು ವಿದ್ಯಾಸಂಸ್ಥೆಗಳು ಬಂಡವಾಳಶಾಹಿಗಳ ಪಾಲಾಗಿವೆ. ಅಲ್ಲಿ ಒಬ್ಬ ವಿದ್ಯಾರ್ಥಿ ಓದು ಪೂರೈಸಲು ₹15 ಲಕ್ಷ ಬೇಕಾಗಿದೆ ಎಂದರು.

‘ಯಡಿಯೂರಪ್ಪ ಸರ್ಕಾರ ದೇಶದ ಅತಿ ಭ್ರಷ್ಟ ಸರ್ಕಾರ ಎಂದು ಅಮಿತ್ ಶಾ ಅವರೇ ಹೇಳಿದರಲ್ಲ, ಜೀವನದಲ್ಲೇ ಅವರು ಹೇಳಿದ ಮೊದಲ ಸತ್ಯ ಅದು’ ರಾಹುಲ್ ವ್ಯಂಗ್ಯವಾಡಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಅಮಿತ್ ಶಾ ಅವರು ಕುವೆಂಪು ಸಮಾಧಿಗೆ ಭೇಟಿ ಕೊಟ್ಟಿದ್ದರು. ಒಂದು ವೇಳೆ ಕುವೆಂಪು ಬದುಕಿದ್ದರೇ ಅಮಿತ್ ಶಾ ಅವರನ್ನು ಹತ್ತಿರ ಸೇರಿಸುತ್ತಿರಲಿಲ್ಲ’ ಎಂದರು.

‘ಜಿಲ್ಲೆಯ ರಾಜಕೀಯ ಧುರೀಣರಾದ ಕಡಿದಾಳು ಮಂಜಪ್ಪ, ಎಸ್. ಬಂಗಾರಪ್ಪ ಇಬ್ಬರೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಿದ್ದವರು. ಜೆ.ಎಚ್. ಪಟೇಲ್ ಕೂಡ ಇದೇ ಜಿಲ್ಲೆಯವರಾಗಿ ಮುಖ್ಯಮಂತ್ರಿ ಆದರು. ಅವರೆಲ್ಲರೂ ರಾಜ್ಯ ಹೆಮ್ಮೆ ಪಡುವಂಥ ಕೆಲಸ ಮಾಡಿದರು. ಆದರೆ ಯಡಿಯೂರಪ್ಪ ಮಾತ್ರ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಕಳಂಕ ತಂದರು’ ಎಂದು ಕುಟುಕಿದರು.

ರೋಡ್‌ ಶೋ ವೇಳೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.