ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕೆರೆ ಹೂಳು ತೆಗೆಯಲು ಆಗ್ರಹ

ಪುರಸಭೆ ಅಧಿಕಾರಿಗಳ ವಿರುದ್ಧ ವಿವಿಧ ಸಂಘಟನೆಗಳು, ನಾಗರಿಕರ ಆಕ್ರೋಶ
Last Updated 3 ಏಪ್ರಿಲ್ 2018, 10:46 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣಕ್ಕೆ ನೀರು ಪೂರೈಸುವ ದುಗ್ಲಾಪುರ ಗ್ರಾಮದಲ್ಲಿನ ಮಾನಸಿ ಕೆರೆಯ ಹೂಳು ತೆಗೆಯುವಲ್ಲಿ ಪುರಸಭೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.‘₹20 ಲಕ್ಷ ಅನುದಾನದಲ್ಲಿ ಮಾನಸಿಕೆರೆಯ ಹೂಳು ತೆಗೆಸುವ ಕಾಮಗಾರಿ ನಡೆಸಲು ಈ ಹಿಂದೆ ಪುರಸಭೆ ಟೆಂಡರ್ ಕರೆದಿತ್ತು. ಕಾಮಗಾರಿ ನಡೆಸುವ ವಿಚಾರದಲ್ಲಿ ಗುತ್ತಿಗೆದಾರರಿಂದ ಉಂಟಾದ ಸಮಸ್ಯೆಯಿಂದಾಗಿ ಕೆಲಸ ನಿರ್ವಹಿಸಲು ಆಗಿರಲಿಲ್ಲ. ಇದೀಗ ನೀತಿ ಸಂಹಿತೆ ಅಡ್ಡಿ ಬರುವ ಕಾರಣ ಕಾಮಗಾರಿ ನಡೆಸುವಂತಿಲ್ಲ ಎಂಬ ಅಧಿಕಾರಿಗಳ ಧೋರಣೆಯಿಂದಾಗಿ ಜನರಿಗೆ ಕುಡಿಯುವ ನೀರಿಗೆ ತಾತ್ವಾರ ಉಂಟಾಗಬಹುದು ಎಂಬ ಆತಂಕದಲ್ಲಿ ಸೋಮವಾರ ಪುರಸಭೆ ಕಚೇರಿಗೆ ಭೇಟಿ ನೀಡಿದ ವಕೀಲರ ಸಂಘ, ನಾಗರಿಕ ಹೋರಾಟ ಸಮಿತಿಯ ಮುಖಂಡರು ಸಮಸ್ಯೆಯ ಬಗ್ಗೆ ಚರ್ಚಿಸಿ ಹಿಂದೆ ಮನವಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿದರು.

ಎಂ.ಎ.ಡಿ.ಬಿ. ಮಾಜಿ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ ‘ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿಲ್ಲ. ಜನರಿಗೆ ನೀರು ಕೊಡುವ ವಿಚಾರಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಜನರಿಗೆ ಮೂಲ ಸೌಕರ್ಯಗಳನ್ನು ಕೊಡುವ ವಿಚಾರದಲ್ಲಿ ಅಧಿಕಾರಿಗಳು ಒತ್ತಡಕ್ಕೆ ಮಣಿಯಬಾರದು ಎಂದು’ ಹೇಳಿದರು.

ಮುಖಂಡ ಟಿ.ಎಲ್.ರಮೇಶ್ ಮಾತನಾಡಿ ‘ನೀತಿ ಸಂಹಿತೆ ಜಾರಿಯಾಗುವ ಮೊದಲೇ ಹೂಳು ತೆಗೆಯಲು ಟೆಂಡರ್ ಆಗಿದೆ. ಕೆರೆಯ ಹೂಳು ತೆಗೆಯದೇ ನೀರು ತುಂಬಿಸುವುದಕ್ಕೆ ನಾವು ಬಿಡುವುದಿಲ್ಲ’ ಎಂದರು. ಸಮಸ್ಯೆ ಗಂಭೀರವಾಗುತ್ತಿದ್ದಂತೆ ಮುಖ್ಯಾಧಿಕಾರಿ ವಿದ್ಯಾ ಎಂ.ಕಾಳೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಗಮನಕ್ಕೆ ತಂದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹೂಳು ತೆಗೆಯಲು ಅವಕಾಶ ನೀಡಿದರು.

ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ ಮಾತನಾಡಿ ‘ಅಧಿಕಾರಿಗಳು ನನ್ನ ಗಮನಕ್ಕೆ ತಾರದೇ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಜೆ.ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಅಪರ ಸರ್ಕಾರಿ ವಕೀಲ ಸುರೇಶ್ಚಂದ್ರ, ವಕೀಲರಾದ ಕೆ.ಚಂದ್ರಪ್ಪ, ಡಿ.ಸಿ.ಸುರೇಶ್, ಎಂಜಿನಿಯರ್‌ ಬಿಂದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT