ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ’

ಅಧಿಕಾರಿಗಳಿಗೆ ಪೂರ್ವ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಕಿವಿಮಾತು
Last Updated 3 ಏಪ್ರಿಲ್ 2018, 11:04 IST
ಅಕ್ಷರ ಗಾತ್ರ

ದಾವಣಗೆರೆ: ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪಾಲಿಸಲೇಬೇಕು. ಅಶಿಸ್ತನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಪೂರ್ವವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಹೇಳಿದರು.ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೊಲೀಸರು ಮನಸ್ಸಿಗೆ ಹಾಗೂ ದೇಹಕ್ಕೆ ವಿಶ್ರಾಂತಿ ನೀಡದೆ ಸಮಾಜದ ರಕ್ಷಣೆ ಮಾಡುತ್ತಾರೆ. ಸುದೀರ್ಘ ಅವಧಿಯವರೆಗೂ ಕರ್ತವ್ಯ ಸಲ್ಲಿಸಿ ನಿವೃತ್ತರಾದವರಿಗೆ ಗೌರವ ಸಲ್ಲಿಸಬೇಕಾಗಿರುವುದು ಇಲಾಖೆಯ ಕರ್ತವ್ಯ. ನಿವೃತ್ತ ಅಧಿಕಾರಿಗಳು ಅಹವಾಲು ಹೊತ್ತು ಠಾಣೆಗೆ ಬಂದರೆ ಸೌಜನ್ಯದಿಂದ ನಡೆಸಿಕೊಳ್ಳಬೇಕು. ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಐಜಿಪಿ ಕಿವಿಮಾತು ಹೇಳಿದರು.ನಿವೃತ್ತ ಅಧಿಕಾರಿಗಳಲ್ಲಿ ಹೆಚ್ಚಿನವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೂ ಸರ್ಕಾರದ ‘ಆರೋಗ್ಯ ಭಾಗ್ಯ’ ಯೋಜನೆ ವಿಸ್ತರಿಸುವ ಅಗತ್ಯವಿದೆ. ಸದ್ಯ ಇಲಾಖೆಯ ನಿಧಿಯಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.

ಸಾರ್ವಜನಿಕರ ಜತೆ ಪೊಲೀಸರು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಠಾಣೆಯಲ್ಲಿ ಖಾಲಿ ಇರುವ ಜಾಗವನ್ನು ಸದ್ಬಳಕೆ ಮಾಡಿಕೊಂಡು ಗಿಡಗಳನ್ನು ನೆಡಬೇಕು. ವ್ಯಸನಮುಕ್ತ ಜೀವನ ರೂಢಿಸಿಕೊಳ್ಳಬೇಕು. ನಿರಂತರ ವ್ಯಾಯಾಮ, ಯೋಗದ ಮೂಲಕ ದೈಹಿಕ ಸದೃಢತೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪೊಲೀಸ್‌ ಇಲಾಖೆಯಲ್ಲಿ ಒಬ್ಬರ ಅಧೀನದಲ್ಲಿ ಮತ್ತೊಬ್ಬರು ಕೆಲಸ ಮಾಡಬೇಕು. ಶಿಸ್ತು ಕಾಯ್ದುಕೊಳ್ಳಲು ಈ ವ್ಯವಸ್ಥೆ ಅನಿವಾರ್ಯ ಕೂಡ. ಯಾರೂ ಸರ್ವಾಧಿಕಾರಿಯಂತೆ ವರ್ತಿಸಲು ಅವಕಾಶ ಇರುವುದಿಲ್ಲ. ಮೇಲಧಿಕಾರಿಗಳು ಕೆಳ ಹಂತದ ಅಧಿಕಾರಿಗಳಿಗೆ ಮಾದರಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.ದಾವಣಗೆರೆ ವಲಯ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿದ್ದು, ಈ ವ್ಯಾಪ್ತಿಯ ನಿವೃತ್ತ ಅಧಿಕಾರಿಗಳಿಗೆ ಯಾವುದೇ ಸಮಸ್ಯೆಗಳಿದ್ದರೂ ಎಸ್‌ಪಿ ಅಥವಾ ಐಜಿಪಿ ಕಚೇರಿಯನ್ನು ಸಂಪರ್ಕಿಸಬಹುದು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

1965ರ ಏಪ್ರಿಲ್‌ 2ರಂದು ಕರ್ನಾಟಕ ರಾಜ್ಯ ಪೊಲೀಸ್‌ ಕಾಯ್ದೆ ಜಾರಿಯಾದ ಹಾಗೂ ಪ್ರತ್ಯೇಕ ಧ್ವಜ ಲಭ್ಯವಾಯಿತು. ಹಾಗಾಗಿ, ಏ.2ರಂದು ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನವನ್ನು ಪೊಲೀಸ್‌ ಕಲ್ಯಾಣ ದಿನವನ್ನಾಗಿಯೂ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್‌ ಹೇಳಿದರು.ಆರಕ್ಷಕ ಇಲಾಖೆ ಇತರ ಇಲಾಖೆಗಳಿಗಿಂತ ಭಿನ್ನವಾಗಿದ್ದು, ಸಿಬ್ಬಂದಿ ನಿತ್ಯ ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿಭಾಯಿಸುತ್ತಾರೆ. ಸುದೀರ್ಘ ಅವಧಿಯವರೆಗೂ ಪರಿಶ್ರಮದಿಂದ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಧ್ವಜ ದಿನಾಚರಣೆಯಂದು ಸನ್ಮಾನ ಮಾಡುತ್ತಿರುವುದು ಸಂತಸದ ವಿಚಾರ ಎಂದರು.

ಪೊಲೀಸ್‌ ಧ್ವಜವನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಶೇ 50ರಷ್ಟನ್ನು ನಿವೃತ್ತರ ಕಲ್ಯಾಣ ನಿಧಿಗೆ, ಶೇ 25ರಷ್ಟನ್ನು ಘಟಕದ ಕ್ಷೇಮನಿಧಿಗೆ ಹಾಗೂ ಶೇ 25 ಅನ್ನು ಕೇಂದ್ರ ಕಲ್ಯಾಣ ನಿಧಿಗೆ ನೀಡಲಾಗುತ್ತಿದೆ. ನಿವೃತ್ತ ಸಿಬ್ಬಂದಿಯ ಅನಾರೋಗ್ಯ ಸಮಸ್ಯೆಗಳಿಗೆ ನಿಧಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ನಿವೃತ್ತ ಎಎಸ್‌ಐ ರಾಮಾನಾಯ್ಕ ಮಾತನಾಡಿ ‘ಪೊಲೀಸರ ಕೆಲಸ ಕತ್ತಿಯ ಹಲಗೆಯ ಮೇಲಿನ ನಡಿಗೆ ಇದ್ದಂತೆ. ಸಾರ್ವಜನಿಕರಿಗೆ ಪೊಲೀಸ್‌ ಇಲಾಖೆ ಮತ್ತಷ್ಟು ಹತ್ತಿರವಾಗಬೇಕು’ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತರಾದ 13 ಮಂದಿಯನ್ನು ಸನ್ಮಾನಿಸಲಾಯಿತು. ಡಿಎಆರ್ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ.ಉದೇಶ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT