ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ

ಮತದಾರರನ್ನು ಸೆಳೆಯಲು ಅಭ್ಯರ್ಥಿಗಳ ಕಾರ್ಯತಂತ್ರ; ಯುವ ಮತದಾರರೇ ಗುರಿ
Last Updated 3 ಏಪ್ರಿಲ್ 2018, 11:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮತದಾರರನ್ನು ವಿವಿಧ ರೀತಿಯಲ್ಲಿ ಸೆಳೆಯಲು ಯತ್ನಿಸುತ್ತಿರುವ ಅಭ್ಯರ್ಥಿ
ಗಳು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಯುವ ಮತದಾರರನ್ನು ಗುರಿಯಾಗಿಸಿ
ಕೊಂಡು, ಅವರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದು, ತಮ್ಮ ಸಾಧನೆ, ಚಿಂತನೆಗಳು, ಅಭಿವೃದ್ಧಿ ಯೋಜನೆಗಳನ್ನು ಪ್ರಚುರಪಡಿಸುತ್ತಿದ್ದಾರೆ. ಈಗಾಗಲೇ ಟಿಕೆಟ್ ಖಚಿತಪಡಿಸಿಕೊಂಡಿರುವ ಅಭ್ಯರ್ಥಿಗಳು, ಪ್ರಚಾರ ನಿಮಿತ್ತ ತಾವು ಭೇಟಿ ನೀಡಿದ್ದ ಓಣಿ, ದೇವಸ್ಥಾನ, ಊರು ಹಾಗೂ ಭಾಗವಹಿಸಿದ್ದ ಸಭೆ–ಸಮಾರಂಭಗಳ ಚಿತ್ರ ಮತ್ತು ಮಾಹಿತಿಯನ್ನು ಹಾಕುವುದು ಸಾಮಾನ್ಯವಾಗಿದೆ.

ನಿರ್ವಹಣೆಗೆ ಪ್ರತ್ಯೇಕ ಮಂದಿ: ಘೋಷಿತ ಅಭ್ಯರ್ಥಿಗಳು ಹಾಗೂ ಟಿಕೆಟ್ ಆಕಾಂಕ್ಷಿಗಳು ತಮ್ಮ ಹೆಸರಿನಲ್ಲಿ ಕನಿಷ್ಠ ನಾಲ್ಕೈದು ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದಾರೆ. ಜತೆಗೆ, ಪ್ರತಿ ಊರು, ವಾರ್ಡ್‌ ಹಾಗೂ ಬ್ಲಾಕ್ ಮಟ್ಟದ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಸಹ ಹೊಂದಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ಅಭ್ಯರ್ಥಿಗಳು ಊರೂರಿಗೆ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿಕೊಂಡಿರುವುದರಿಂದ, ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಳಗಿರುವವರನ್ನು ನಿಯೋಜಿಸಿಕೊಂಡಿದ್ದಾರೆ. ಆ ಮೂಲಕ, ತಮ್ಮ ಪ್ರತಿ ರಾಜಕೀಯ ಕಾರ್ಯಚಟುವಟಿಕೆಗಳು ಜಾಲತಾಣಗಳಲ್ಲಿ ಜಗಜ್ಜಾಹೀರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.

ಪರಿಣಾಮಕಾರಿ ಮಾಧ್ಯಮ: ‘ನಮ್ಮ ರಾಜಕೀಯ ಆಲೋಚನೆಗಳನ್ನು ಹಂಚಿಕೊಳ್ಳಲು ಹಾಗೂ ಸಾಧನೆಗಳ ಬಗ್ಗೆ ಮತದಾರರಿಗೆ ಸುಲಭವಾಗಿ ತಿಳಿಸಲು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಮಾಧ್ಯಮವಾಗಿವೆ. ಅಲ್ಲದೆ, ಯುವ ಮತದಾರರನ್ನು ಸೆಳೆಯಲು ಇವುಗಳಿಗಿಂತ ಮತ್ತೊಂದು ಸೂಕ್ತ ವೇದಿಕೆ ಇಲ್ಲ’ ಎನ್ನುತ್ತಾರೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ.ಸದ್ಯ ರಾಜಣ್ಣ ಅವರು ಎರಡು ಫೇಸ್‌ಬುಕ್‌ ಪುಟಗಳ ಮೂಲಕ, ಪ್ರಚಾರ ಕೈಗೊಂಡಿದ್ದಾರೆ. ಈ ಪುಟವನ್ನು 3,000 ಮಂದಿ ಫಾಲೊ ಮಾಡುತ್ತಿದ್ದಾರೆ ಜತೆಗೆ, ಅವರ ಅಭಿಮಾನಿಗಳು ಸಹ ರಾಜಣ್ಣ ಹೆಸರಿನಲ್ಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ತಮ್ಮ ನಾಯಕನ ಕುರಿತು ಪ್ರಚಾರ ಮಾಡುತ್ತಿದ್ದಾರೆ.

ಸಂಪರ್ಕ ಸುಲಭ: ‘ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಸಾಮಾಜಿಕ ಜಾಲತಾಣಗಳು ಸಹಕಾರಿ. ನಾವು ಪ್ರತಿನಿಧಿಸುವ ಕ್ಷೇತ್ರದ ಯಾವುದೇ ಭಾಗದಲ್ಲಿ ಏನೇ ಆದರೂ, ಜಾಲತಾಣಗಳ ಮೂಲಕ ತಕ್ಷಣ ಗೊತ್ತಾಗುತ್ತದೆ. ಆಗ, ಅದಕ್ಕೆ ಸ್ಪಂದಿಸಿ ಪರಿಹಾರೋಪಾಯ ಕಂಡುಕೊಳ್ಳುವುದು ಸುಲಭವಾಗುತ್ತದೆ’ ಎಂದು ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹೇಳುತ್ತಾರೆ.

‘ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ, ಬಿಡುಗಡೆಯಾದ ಅನುದಾನ ಸೇರಿದಂತೆ ಐದು ವರ್ಷದ ಸಾಧನೆಯ ಬಗ್ಗೆ ಜನರಿಗೆ ದಾಖಲೆ ಸಮೇತ ತಿಳಿಸಬಹುದಾಗಿದೆ. ಚುನಾವಣಾ ಪ್ರಣಾಳಿಕೆ, ಆಶ್ವಾಸನೆ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅವರನ್ನು ನಮ್ಮತ್ತ ಸೆಳೆಯಬಹುದು. ನಾನು ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ  ಎಂಬೆಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ. ಜತೆಗೆ, ಜನರಿಂದ ಸಿಗುವ ಸಲಹೆಗಳನ್ನು ಸ್ವೀಕರಿಸಿ, ನಾವೂ ಅಪ್‌ಡೇಟ್‌ ಆಗಲು ಜಾಲತಾಣ ಸಹಕಾರಿ’ ಎನ್ನುತ್ತಾರೆ ಅಬ್ಬಯ್ಯ. ಪ್ರಸಾದ ಅಬ್ಬಯ್ಯ ಅವರ ಹೆಸರಿನಲ್ಲಿ ಅಧಿಕೃತವಾಗಿ ಎರಡು ಫೇಸ್‌ಬುಕ್ ಪುಟಗಳಿದ್ದು, ಅವುಗಳಲ್ಲಿ ತಮ್ಮ ಜನಸಂಪರ್ಕದ ಪ್ರತಿ ವಿವರಗಳನ್ನು ದಾಖಲಿಸುತ್ತಾ ಬರುತ್ತಿದ್ದಾರೆ. ಜತೆಗೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಬ್ಬಯ್ಯ ಅವರ ಹೆಸರಿನಲ್ಲಿ ನಾಲ್ಕೈದು ಫೇಸ್‌ಬುಕ್‌ ಖಾತೆಗಳನ್ನು ತೆರೆದು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಪುಟದ ಸ್ನೇಹಿತರ ಪಟ್ಟಿಯಲ್ಲಿ 5,000 ಮಂದಿ ಇದ್ದಾರೆ.

ಧಾರವಾಡ ಗ್ರಾಮೀಣ ಭಾಗದ ಶಾಸಕ ಹಾಗೂ ಸಚಿವ ವಿನಯ ಕುಲಕರ್ಣಿ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಧಾರವಾಡ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಹಾಗೂ ನವಲಗುಂದದ ಶಾಸಕ ಎನ್‌.ಎಚ್. ಕೋನರಡ್ಡಿ  ಅವರು ಕೂಡ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

‘ಆನ್‌ಲೈನ್‌, ಆಫ್‌ಲೈನ್ ಪ್ರಚಾರ ಮುಖ್ಯ’

‘ಸದ್ಯದ ವ್ಯವಸ್ಥೆಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ ಚುನಾವಣಾ ಪ್ರಚಾರ ಅತಿ ಮುಖ್ಯ. ಆನ್‌ಲೈನ್‌ನಲ್ಲಿ ಯುವ ಸಮೂಹ ಸೇರಿದಂತೆ, ಕೆಲ ವರ್ಗವನ್ನು ತಲುಪಬಹುದು. ಆಫ್‌ಲೈನ್‌ನಲ್ಲಿ ಅಂದರೆ ಬೀದಿ ಪ್ರಚಾರ, ಸಮಾವೇಶ, ಮನೆ ಭೇಟಿ, ಸಭೆ–ಸಮಾರಂಭಗಳ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿದೆ’ ಎನ್ನುತ್ತಾರೆ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ್ ನರಗುಂದ.

‘ಇತ್ತೀಚಿನ ವರ್ಷಗಳಲ್ಲಿ ಹೋರಾಟ, ಪ್ರತಿಭಟನೆ ಹಾಗೂ ಜನಜಾಗೃತಿ ಮೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ನಾವು ಸ್ಪರ್ಧಿಸುತ್ತಿರುವ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆ, ಪರಿಹಾರ ಸೇರಿದಂತೆ ಹಲವು ವಿಷಯಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು’ ಎನ್ನುವ ಅವರು ಟ್ವಿಟರ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್ ಮೂಲಕ ಪರಿಣಾಮಕಾರಿಯಾಗಿ ಪ್ರಚಾರಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT